

ಮಂಡ್ಯ: ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆಯನ್ನು ನಗರದ ಡಾ.ರಾಜ್‌ಕುಮಾರ್ ಪ್ರತಿಮೆ ಬಳಿ ಸ್ಥಾಪಿಸುವುದರ ಮೂಲಕ ಹೊಸ ತಲೆಮಾರಿನ ಯುವಜನಾಂಗದಲ್ಲಿ ಸಾಮಾಜಿಕ ಬದ್ಧತೆ ಮೂಡಿಸಬೇಕು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಹೇಳಿದರು.
ನಗರದ ಜೆ.ಸಿ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ಹಾಗೂ ಇತರೆ ಸಂಘಟನೆಗಳು ಜತೆಗೂಡಿ ಆಯೋಜಿಸಿದ್ದ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ 49ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರವೇ, ವಿವಿಧ ಸಂಘಟನೆಗಳು ಮತ್ತು ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ಬೆಂಬಲದೊಂದಿಗೆ ಪ್ರತಿಮೆ ಸ್ಥಾಪಿಸುವ ಉದ್ದೇಶವಿದ್ದು, ಶೀಘ್ರದಲ್ಲೇ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.
ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗದಲ್ಲಿ ಮರೆಯಲಾಗದ ಪ್ರತಿಭೆ. ತಂದೆಯ ಹಾದಿಯಲ್ಲೇ ಅತ್ಯುತ್ತಮ ನಟನೆಯ ಮೂಲಕ ದಾಖಲೆಯನ್ನು ಸೃಷ್ಠಿಸಿದ ಅವರು, ತೆರೆಯ ಮೇಲೆ ಮತ್ತು ಸಮಾಜದ ನಡುವೆ ನಿಜವಾದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಪುನೀತ್ ಮರೆಯಾಗಿದ್ದರೂ, ಅವರು ಮಾಡಿರುವ ಜನಪರ ಕಾರ್ಯಗಳು ಜೀವಂತವಾಗಿ ಕಾಣುತ್ತಿವೆ. ಅವರ ಸಮಾಜಮುಖಿ ಕಾರ್ಯಗಳು ಇಂದಿನ ಯುವಜನಾನಂಗಕ್ಕೆ ಮಾದರಿಯಾಗಿವೆ. ಪರೋಪಕಾರದ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸಿಕೊಡುವುದರಲ್ಲಿ ಪುನೀತ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಕಲಾತ್ಮವಾಗಿ ಅತಿ ಎತ್ತರಕ್ಕೆ ಬೆಳೆದಿದ್ದರೂ ಅವರ ವಿನಯವಂತಿಕೆ ಇಡೀ ಚಿತ್ರರಂಗಕ್ಕೆ ಮಾದರಿಯಾಗಿತ್ತು ಎಂದು ಹೇಳಿದರು.
ಕರವೇ ರಾಜ್ಯ ಸಮಿತಿ ಸದಸ್ಯ ಮಾ.ಸೋ.ಚಿದಂಬರ್ ಮಾತನಾಡಿ, ಡಾ.ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸುವಲ್ಲಿ ಅಪಾರವಾಗಿ ಶ್ರಮಿಸಿದ್ದರು. ಅದೇ ಮಾದರಿಯಲ್ಲಿ ಪುನೀತ್ ರಾಜ್‌ಕುಮಾರ್ ಕೂಡ ಸಾಗಿ ಬಂದರು. ಅವರು ಅತ್ಯಲ್ಪ ಜೀವಿತ ಅವಧಿಯಲ್ಲೇ ಶೀರ್ಘ ಕಾಲದ ಸಾಧನೆ ಮಹತ್ವದ್ದಾಗಿದೆ ಎಂದು ಶ್ಲಾಸಿದರು.
ಕರವೇ ಗೌರವಾಧ್ಯಕ್ಷ ಕೆ.ಟಿ.ಶಂಕರೇಗೌಡ ಮಾತನಾಡಿ, ಪುನೀತ್ ಅಗಲಿಕೆಯ ನಂತರವೂ ಅವರ ಸಿನಿಮಾಗಳು ಮತ್ತು ಜನಪರ ಕಾರ್ಯಗಳು ಇಂದಿಗೂ ಜನಮಾನಸದಲ್ಲಿವೆ. ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕರವೇ ತಾಲೂಕು ಅಧ್ಯಕ್ಷ ಅಶೋಕ್, ಮುಖಂಡರಾದ ಎಚ್.ಟಿ.ಶ್ರೀನಿವಾಸ್, ರಾಜೇಶ್, ಎಚ್.ಆರ್.ಸಂಜಯ್, ಮಹಾಲಿಂಗ, ಪುಟ್ಟಸ್ವಾಮಿ, ಆನಂದ್, ಸತೀಶ್ ಗುಡಿಗೇನಹಳ್ಳಿ ಇತರರಿದ್ದರು.