

ಮೈಸೂರು: ಕರ್ನಾಟಕ ರತ್ನ ದಿ. ಪುನೀತ್ ರಾಜಕುಮಾರ್ ಜನ್ಮದಿನಾಚರಣೆಯನ್ನು ಭಾನುವಾರ ನಗರದ ವಿವಿಧೆಡೆ ವಿವಿಧ ಸಂಘ ಸಂಸ್ಥೆಗಳಿಂದ ಸ್ಫೂರ್ತಿ ದಿನವಾಗಿ ಆಚರಿಸಲಾಯಿತು.
ನಗರದ ಹಲವಾರು ಕಡೆಗಳಲ್ಲಿ ಅಪ್ಪುವಿನ ಭಾವಚಿತ್ರ, ಕಟೌಟ್‌ಗಳು ರಾರಾಜಿಸಿದವು. ಅಲ್ಲದೆ, ಅನ್ನದಾನ, ಸಸಿ ನೆಡುವ ಕಾರ್ಯಕ್ರಮ, ಸಾಮೂಹಿಕ ವಿವಾಹ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಜನ್ಮ ದಿನಾಚರಣೆ ಪ್ರಯುಕ್ತ ಜಾಕಿ ಚಿತ್ರ ಮರು ಬಿಡುಗಡೆಗೊಂಡ ಹಿನ್ನೆಲೆಯಲ್ಲಿ ಸಾಕಷ್ಟು ಜನರು ಚಿತ್ರಮಂದಿರಕ್ಕೆ ತೆರಳಿ ಜಾಕಿ ಸಿನಿಮಾವನ್ನು ನೋಡಿ ಸಂಭ್ರಮಿಸಿದರು. ಸಿನಿಮಾ ಬಿಡುಗಡೆಯಾಗಿರುವ ಗಾಯತ್ರಿ ಚಿತ್ರ ಮಂದಿರದ ಎದುರು ಸಾಕಷ್ಟು ಅಭಿಮಾನಿಗಳು ಜಮಾಯಿಸಿದ್ದರು.
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದ ಡಾ. ರಾಜಕುಮಾರ್ ಉದ್ಯಾನದಲ್ಲಿ ಭುವನೇಶ್ವರಿ ಸೇವಾ ಟ್ರಸ್ಟ್ ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ಸಹಯೋಗದಲ್ಲಿ ವಿವಿಧ ಸಸಿಗಳನ್ನು ನೆಟ್ಟು ಸಿಹಿ ಹಂಚಿದರು. ಈ ಸಂದರ್ಭ ಡಾ.ರಾಜ್‌ಕುಮಾರ್ ಸಂಘದ ಸಂಸ್ಥಾಪಕ ಅಧ್ಯಕ್ಷ ರಾಮೇಗೌಡ ಮಾತನಾಡಿ, ಹುಟ್ಟಿದ ನಂತರ ಸಾವು ನಿಶ್ಚಿತ. ಆದರೆ, ಮೃತಪಟ್ಟ ನಂತರವೂ ಜನರ ಮನದಲ್ಲಿ ಶಾಶ್ವತವಾಗಿ ಇರುವಂತೆ ಬದುಕು ನಡೆಸಬೇಕು. ಆ ರೀತಿಯ ಬದುಕನ್ನು ಪುನೀತ್ ರಾಜ್‌ಕುಮಾರ್ ನಡೆಸಿದ್ದರು ಎಂದು ಸ್ಮರಿಸಿದರು.
ಪುನೀತ್ ರಾಜ್‌ಕುಮಾರ್ ಸಾವಿರಾರು ಜನರಿಗೆ ಆಸರೆಯಾಗಿದ್ದರು. ಪ್ರಚಾರ ಬಯಸದೆ ಕರ್ಣನ ರೀತಿಯಲ್ಲಿ ಕೊಡುಗೈ ದಾನಿಯಾಗಿದ್ದರು. ಸಂಬಂಧವಿಲ್ಲದವರು ಸಹ ಅವರ ಸಾವಿಗೆ ದುಃಖಪಟ್ಟಿದ್ದಾರೆ. ಶಾರೀರಿಕವಾಗಿ ಅವರು ನಮ್ಮನ್ನಗಲಿದರೂ ಅವರಿಗೆ ಸಾವಿಲ್ಲ, ಅವರು ಅಜರಾಮರ ಎಂದು ಹೇಳಿದರು.
ಈ ಸಂದರ್ಭ ಸಮಾಜ ಸೇವಕರಾದ ವಿದ್ಯಾ, ಸೇತುರಾಮ, ಚಂದ್ರು, ಗಂಗಪ್ಪ, ಬೇಗೂರು ಮೂರ್ತಿ, ವಿಶ್ವಮಾನವ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ರಾವ್, ಸೌಮ್ಯರಾವ್, ಕಾರ್ಯದರ್ಶಿ ರಮೇಶ್, ಭುವನೇಶ್ವರಿ ಸೇವಾ ಟ್ರಸ್ಟ್ ಅಧ್ಯಕ್ಷೆ ನಾಗಶ್ರೀ ಸುಚಿಂದ್ರ, ಗಂಧದಗುಡಿ ಅಪ್ಪು ಅಭಿಮಾನಿಗಳ ಬಳಗ ಅಧ್ಯಕ್ಷ ರವಿ, ಅರಿವು ಸಂಸ್ಥೆ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್ ಹಾಗೂ ಇತರರು ಇದ್ದರು.