ಪುನೀತ್ ಸಮಾಜಸೇವೆ ನಮ್ಮೆಲ್ಲರಿಗೂ ಪ್ರೇರಣೆ: ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಶ್ಲಾಘನೆ

29_11_Mdy_03(Keragodu Kannada)
Published on
ಮಂಡ್ಯ: ಯಾರಿಗೂ ತಿಳಿಯದಂತೆ ಸಮಾಜಮುಖಿ ಕೆಲಸವನ್ನು ಮಾಡುವ ಮೂಲಕ ಪ್ರತಿಯೊಬ್ಬರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿರುವ ಕರ್ನಾಟಕ ರತ್ನ ಡಾ.ಪುನೀತ್‌ರಾಜಕುಮಾರ್ ನಮ್ಮೆಲ್ಲರಿಗೂ ಪ್ರೇರಣೆ ಎಂದು ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಶ್ಲಾಘನೆ ವ್ಯಕ್ತಪಡಿಸಿದರು.
 ತಾಲೂಕಿನ ಕೆರಗೋಡು ಗ್ರಾಮದಲ್ಲಿ ಎಂ.ಎಸ್.ರಘುನಂದನ್ ಅಭಿಮಾನಿಗಳ ಬಳಗದ ವತಿಯಿಂದ ಸೋಮವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಅಪ್ಪು ನಮನ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಒಳ್ಳೆಯ ಕೆಲಸ ಮಾಡಿದವರನ್ನು ಜನರು ಸದಾ ನೆನೆಯುತ್ತಾರೆ. ಇದಕ್ಕೆ ಪುನೀತ್ ಅವರೇ ಸಾಕ್ಷಿ. ಮಾತ್ರವಲ್ಲದೆ ಅವರು ಮಾಡಿದ ಉತ್ತಮ ಕಾರ್ಯವನ್ನು ಹೇಳಿದಾಗ ಮತ್ತೊಬ್ಬರು ಪ್ರೇರಣೆಗೊಳ್ಳುತ್ತಾರೆ ಎಂದರು.
ಕನ್ನಡ ರಾಜ್ಯೋತ್ಸವದ ಜತೆಗೆ ಪ್ರತಿ ಗ್ರಾಮಗಳಲ್ಲಿ ಅಪ್ಪು ನಮನ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಇದಕ್ಕೆ ಕಾರಣ ಅವರು ಮಾಡಿರುವ ಸೇವೆ. ಅಪ್ಪು ಮಾಡಿದ ಸಾಧನೆಗಳು, ಬಡವರಿಗೆ ಹಾಗೂ ನೊಂದವರಿಗೆ ನೆರವಾಗಿರುವುದು ಅವರ ಸಮಾಜಮುಖಿ ಕೆಲಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
 ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಮಾತನಾಡಿ, ಗಡಿನಾಡು ಕನ್ನಡಿಗರಿಗೆ ಸಮಸ್ಯೆ ಎದುರಾದಾಗ ಕನ್ನಡಪರ ಸಂಘಟನೆಗಳು ಹೋರಾಟ ಮಾಡುವಾಗ ಅವರ ಜತೆ ಎಲ್ಲರೂ ನಿಲ್ಲಬೇಕು. ಕನ್ನಡ ಭಾಷೆ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಕನ್ನಡದ ಐಕ್ಯತೆ ಸ್ವಾಭಿಮಾನ ಬಂದಾಗ ಎಲ್ಲರೂ ಒಗ್ಗಟ್ಟಾಗಬೇಕು ಎಂದರು.
 ಮನ್‌ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ, ಎಂಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಬೂದನೂರು ಸ್ವಾಮಿ, ತಾಪಂ ಮಾಜಿ ಸದಸ್ಯ ಕಿರಣ್ ಕುಮಾರ್, ಕೆರಗೋಡು ಎಜುಕೇಷನ್ ಸೊಸೈಟಿ ಅಧ್ಯಕ್ಷ ಕೆ.ಎಲ್.ಕೃಷ್ಣ, ಶ್ರೀಕಾಂತ್, ವಿಶಾಲ್‌ರಘು, ಶ್ರೀನಿವಾಸ್, ವಿಜಯಕುಮಾರ್ ಇತರರಿದ್ದರು.
ಇದೇ ವೇಳೆ ಜಿಲ್ಲಾ ಜೆಡಿಎಸ್ ನೂತನ ವಕ್ತಾರ ಎಂ.ಎಸ್.ರಘುನಂದನ್ ಅವರನ್ನು ಅಭಿನಂದಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಸನ್ಮಾನಿಸಲಾಯಿತು. ನಿಖಿಲ್ ಕ್ರಿಕೆಟ್ ಕಪ್ ವಿಜೇತರಿಗೆ ಬಹುಮಾನ ಹಾಗೂ ಆಟೋ ಚಾಲಕರು, ಪೌರಕಾ ರ್ಮಿಕರಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net