ಪುನೀತ್ ಎಲ್ಲರ ಮನದಲ್ಲಿ ಶಾಶ್ವತವಾಗಿ ನೆಲೆನಿಂತಿದ್ದಾರೆ : ಮಾಜಿ ಸಚಿವ ಎಂ. ಶಿವಣ್ಣ

puneeth
Published on

ಮೈಸೂರು: ಪುನೀತ್ ರಾಜ್‌ಕುಮಾರ್ ತಮ್ಮ ಅಭಿನಯ ಹಾಗೂ ವ್ಯಕ್ತಿತ್ವದ ಮೂಲಕ ಎಲ್ಲರ ಮನದಲ್ಲಿ ಶಾಶ್ವತವಾಗಿ ನೆಲೆನಿಂತಿದ್ದಾರೆ ಎಂದು ಮಾಜಿ ಸಚಿವ ಎಂ. ಶಿವಣ್ಣ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಅಭಿನವ ಸಾಮ್ರಾಟ್ ಡಾ.ಪುನೀತ್ ಚುಟುಕುಗಳು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಜಾತಿ, ಮತ ಬೇಧವಿಲ್ಲದೆ ನಾಡಿನಾದ್ಯಂತ ಪ್ರತಿಯೊಬ್ಬರು ಪುನೀತ್ ಅವರನ್ನು ಪ್ರೀತಿಸುತ್ತಾರೆ. ಪುನೀತ್ ಅವರು ನಟನೆ ಹಾಗೂ ತಮ್ಮ ಉತ್ತಮ ವ್ಯಕ್ತಿತ್ವದಿಂದ ಸಣ್ಣ ವಯಸ್ಸಿನಲ್ಲಿಯೇ ತುಂಬಾ ಎತ್ತರಕ್ಕೆ ಬೆಳೆದರು. ಅವರ ನಟನಾ ಚಾತುರ್ಯ ಅದ್ಭುತವಾಗಿತ್ತು. ಅಂತಹ ಒಬ್ಬ ಅದ್ಭುತ ನಟ ಮತ್ತೆ ಸಿಗುವುದಿಲ್ಲ ಎಂದರು.

ಪುನೀತ್ ಅವರು ಬಡ ಹಾಗೂ ಅನಾಥ ಮಕ್ಕಳಿಗೆ ಸಾಕಷ್ಟು ನೆರವು ನೀಡಿದ್ದಾರೆ. ಯಾರ ಕಣ್ಣಿಗೂ ಕಾಣದೆ ಅವರು ಬಡವರಿಗೆ ಸಹಾಯ ಮಾಡಿರುವುದು ವಿಶೇಷ. ಈ ಕಾರಣಕ್ಕೆ ಅವರನ್ನು ಇಂದು ಎಲ್ಲರು ಸ್ಮರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ವೇದಿಕೆಯಲ್ಲಿ ಚಿತ್ರ ನಿರ್ಮಾಪಕರಾದ ಎಸ್.ಎ. ಗೋವಿಂದರಾಜು, ಎಸ್.ಎ. ಶ್ರೀನಿವಾಸ್, ಚುಟುಕು ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ತೋಂಟದಾರ್ಯ, ವರನಟ ರಾಜ್‌ಕುಮಾರ್ ಪುತ್ರಿ ಲಕ್ಷ್ಮೀ ಗೋವಿಂದರಾಜು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಡಾ.ಎಂ.ಜಿ.ಆರ್. ಅರಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎನ್. ಲೋಕೇಶಪ್ಪ, ‘ಅಭಿನವ ಸಾಮ್ರಾಟ್ ಪುನೀತ್ ಚುಟುಕು’ ಕೃತಿಯ ಸಂಪಾದಕಿ ಡಾ. ರತ್ನ ಹಾಲಪ್ಪಗೌಡ, ನಿವೃತ್ತ ಪ್ರಾಂಶುಪಾಲ ಎಚ್. ನಿಜಗುಣಮೂರ್ತಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net