

ಮಡಿಕೇರಿ: ಎನ್‌ಇಇಟಿ ಮತ್ತು ಸಿಇಟಿ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳು ಸಮಯ ಪಾಲನೆಗೆ ಆದ್ಯತೆ ನೀಡಬೇಕೆಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಕಿವಿಮಾತು ಹೇಳಿದರು.
ಕೃಷಿಕ್ ಸರ್ವೋದಯ ಫೌಂಡೇಶನ್‌ನ ಮಡಿಕೇರಿ ಶಾಖೆ ವತಿಯಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಆಯೋಜಿಸಿದ್ದ ಎನ್‌ಇಇಟಿ ಮತ್ತು ಸಿಇಟಿ ಪರೀಕ್ಷೆಗೆ ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಎಸ್‌ಪಿ ಮಾತನಾಡಿದರು.
ಎನ್‌ಇಇಟಿ ಮತ್ತು ಸಿಇಟಿ ಪರೀಕ್ಷೆಗಳ ಮೂಲಕ ಉತ್ತಮ ಗುರಿ ಸಾಧಿಸಲು ಮುಂದಾಗುವ ವಿದ್ಯಾರ್ಥಿಗಳು ಶ್ರದ್ಧೆ, ಶಿಸ್ತು ಮತ್ತು ಸಮಯಪಾಲನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ಸತತ ಪರಿಶ್ರಮದಿಂದ ಶೈಕ್ಷಣಿಕ ಗುರಿ ಸಾಧಿಸಲು ಸಾಧ್ಯವಿದೆ. ಪರೀಕ್ಷೆಗಳನ್ನು ಆತ್ಮಸ್ಥೈರ್ಯದಿಂದ ಎದುರಿಸಬೇಕು. ಉನ್ನತ ಹುದ್ದೆಯ ಕನಸಿನೊಂದಿಗೆ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ತಾವೂ ಕೂಡ ಐಪಿಎಸ್‌ಗಾಗಿ ಕೃಷಿಕ್ ಸರ್ವೋದಯ ಫೌಂಡೇಶನ್ ನ ಬೆಂಗಳೂರು ಶಾಖೆ ಮೂಲಕ ತರಬೇತಿ ಪಡೆದಿದ್ದು, ನನಗೆ ಹೆಚ್ಚು ಸಹಕಾರಿಯಾಗಿದೆ ಎಂದು ಎಸ್‌ಪಿ ಅಯ್ಯಪ್ಪ ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸರ್ಕಾರಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಪುಟ್ಟರಾಜು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎನ್‌ಇಇಟಿ ಮತ್ತು ಸಿಇಟಿ ತರಬೇತಿ ವಿದ್ಯಾರ್ಥಿಗಳಿಗೆ ವರದಾನವಾಗಿದ್ದು, ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜ್‌ನ ಪ್ರಾಂಶುಪಾಲ ಪಿ.ಆರ್.ವಿಜಯ ಮಾತನಾಡಿ, ಉಚಿತ ತರಬೇತಿಯಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ತರಗತಿ ನಡೆಸಲು ಕೊಠಡಿ ನೀಡುವುದಾಗಿ ಹೇಳಿದರು.
ಫೌಂಡೇಶನ್ ನ ಅಧ್ಯಕ್ಷ ನಂಗಾರು ನಿಂಗರಾಜುರವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಬೆಂಗಳೂರಿನ ಕೊಡಗು, ದಕ್ಷಿಣ ಕನ್ನಡ ಗೌಡ ಸಮಾಜದ ಖಜಾಂಚಿ ಕುಂಭಗೌಡನ ಸೋಮಣ್ಣ, ಕೃಷಿಕ್ ಸರ್ವೋದಯ ಫೌಂಡೇಶನ್‌ನ ಉಪಾಧ್ಯಕ್ಷ ಡಾ.ದಯಾನಂದ, ನಿರ್ದೇಶಕರುಗಳಾದ ಗುಲಾಬಿ ಜನಾರ್ಧನ, ಡಾ.ಕೋರನ ಸರಸ್ವತಿ, ಕುಂದಲ್ಪಾಡಿ ದಿವಾಕರ ಹಾಗೂ ನಂಗಾರು ರಾಮಚಂದ್ರ, ಪಾಣ್ತಲೆ ಪಳಂಗಪ್ಪ ಇದ್ದರು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ೮೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ: ಕೊಡಗು ಜಿಲ್ಲೆಯ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉಚಿತ ತರಬೇತಿಯನ್ನು ನೀಡಲಾಗುತ್ತಿದೆ. ಈಗಾಗಲೇ ಎನ್‌ಇಇಟಿ ಮತ್ತು ಸಿಇಟಿ ತರಬೇತಿ ಆರಂಭಗೊಂಡಿದ್ದು, ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ನುರಿತ ಉಪನ್ಯಾಸಕರನ್ನು ನೇಮಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ೯೪೪೮೦೦೫೬೪೨ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಫೌಂಡೇಶನ್‌ನ ಖಜಾಂಚಿ ನವೀನ್ ಅಂಬೆಕಲ್ಲು ತಿಳಿಸಿದರು.