

ಮಡಿಕೇರಿ:
ತಿಂಗಳ ಮಧ್ಯಭಾಗದಲ್ಲಿ ಅಬ್ಬರಿಸಿದ ಪುನರ್ವಸು ಮಳೆ ಕೊಡಗಿನಲ್ಲಿ ಸಾಕಷ್ಟು ಹಾನಿಗೆ ಕಾರಣವಾಗಿದೆ. ಇದೀಗ ಪುಷ್ಯ ಮಳೆಯ ಬಿರುಸು ಸ್ವಲ್ಪ ಕಡಿಮೆ ಆಗಿರುವಂತೆ ಕಂಡು ಬರುತ್ತಿದ್ದರೂ ಕಾಫಿ ಸೇರಿದಂತೆ ವಾಣಿಜ್ಯ ಬೆಳೆಗಳು ಕೈ ತಪ್ಪುವ ಆತಂಕದಲ್ಲಿ ಬೆಳೆಗಾರರು ಇದ್ದಾರೆ. ಇದನ್ನು ಹೊರತುಪಡಿಸಿ ಸರ್ಕಾರದ ವಿವಿಧ ಇಲಾಖೆಗಳಿಗೆ ಸುಮಾರು 13.5 ಕೋಟಿ ರೂ. ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದೆ. ಕೃಷಿಗೆ ಆದ ಹಾನಿ ಬಗ್ಗೆ ಇನ್ನಷ್ಟೇ ಲೆಕ್ಕಾಚಾರ ನಡೆಯಬೇಕಿದೆ.
ಜೂನ್ ಮೊದಲ ವಾರದಲ್ಲಿ ಜಿಲ್ಲೆಯಲ್ಲಿ ಮುಂಗಾರು ಆಗಮನವಾದ ಲಕ್ಷಣಗಳು ಕಾಣಿಸಿಕೊಂಡರೂ ಮಳೆಯ ಪ್ರಮಾಣ ಹೇಳಿಕೊಳ್ಳುವಂತೆ ಇರಲಿಲ್ಲ. ಜುಲೈ ಮೊದಲ ವಾರದ ತನಕವೂ ಮಳೆಗಾಲ ಆತಂಕಕಾರಿಯಾಗಿಯೇ ಮುಂದುವರಿದಿತ್ತು. ಕಳೆದ ವರ್ಷದ ಪರಿಸ್ಥಿತಿ ಪುನರಾವರ್ತಿಸಿಬಿಡಬಹುದೇನೋ ಎನ್ನುವ ಆತಂಕ ಜನಸಾಮಾನ್ಯರಲ್ಲಿ ಮನೆ ಮಾಡಿತ್ತು. ಆದರೆ ಜುಲೈ ಮಧ್ಯಭಾಗದಲ್ಲಿ ಪುನರ್ವಸು ಮಳೆಯ ಕೊನೆಯ ಪಾದ ಕೊಡಗಿನ ನೈಜ ಮಳೆಗಾಲವನ್ನು ನೆನಪಿಸುವಂತೆ ಮಾಡಿತು. 2018, 2019 ಹಾಗೂ 2020ರಲ್ಲಿ ಇದ್ದಷ್ಟು ರಭಸ ಇರಲಿಲ್ಲವಾದರೂ ಸಾಕಷ್ಟು ಹಾನಿಯನ್ನಂತೂ ಮಾಡಿದೆ.
ಈ ವರ್ಷದ ಮುಂಗಾರು ಮಳೆ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ, ಕುಶಾಲನಗರ ಹಾಗೂ ಪೊನ್ನಂಪೇಟೆ ಹೀಗೆ ಜಿಲ್ಲೆಯ 5 ತಾಲೂಕುಗಳಲ್ಲೂ ಪರಿಣಾಮ ಉಂಟುಮಾಡಿದೆ. 5 ತಾಲೂಕುಗಳ ವ್ಯಾಪ್ತಿಯ 9 ಗ್ರಾಮಗಳಲ್ಲಿ ಹೆಚ್ಚಿನ ಹಾನಿ ಮಾಡಿದೆ. 94 ಜನರು ವಿವಿಧ ರೀತಿಯಲ್ಲಿ ನೇರವಾಗಿ ತೊಂದರೆಗೆ ಒಳಗಾಗಿದ್ದಾರೆ. ಮಾರ್ಚ್ನಿಂದ ಇಲ್ಲಿಯ ತನಕ ಮಳೆಗೆ ಒಂದು ಜೀವ ಹಾನಿಯಾಗಿದೆ. ಮೂವರಿಗೆ ಗಾಯಗಳಾಗಿವೆ.
ಭಾಗಮಂಡಲ ಹೋಬಳಿ ಬೇಂಗೂರು ದೋಣಿ ಕಡುವು, ಮೂರ್ನಾಡು-ನಾಪೋಕ್ಲು ರಸ್ತೆ, ಮಡಿಕೇರಿ-ನಾಪೋಕ್ಲು ರಸ್ತೆ, ಮಡಿಕೇರಿ-ಹಾಕತ್ತೂರು ರಸ್ತೆ, ಕರಡಿಗೋಡು ಗ್ರಾಮ, ವಿರಾಜಪೇಟೆ-ಕದನೂರು ರಸ್ತೆ, ಕುಶಾಲನಗರ ಪಟ್ಟಣ, ಕುಶಾಲನಗರದ ಗುಮ್ಮನಕೊಲ್ಲಿ, ಶ್ರೀಮಂಗಲ-ನಾಲ್ಕೇರಿ ರಸ್ತೆಗಳು ಮಳೆಯ ಹೊಡೆತಕ್ಕೆ ಸಿಲುಕಿ ನಲುಗಿದ್ದವು.
ಮಡಿಕೇರಿ ಸೆಸ್ಕ್ ಉಪವಿಭಾಗ ಕಚೇರಿ ಎದುರು, ಕೊಯನಾಡು-ಗುಡ್ಡಕಟ್ಟೆ ರಸ್ತೆ, ಕೊಯನಾಡು ಶಾಲೆ ಹಿಂದೆ, ಮಡಿಕೇರಿ ರೋಷನಾರ ರಸ್ತೆ, ವಿರಾಜಪೇಟೆಯ ಕೆದಮಳ್ಳೂರು, ಜೋಡುಪಾಲ ಶಾಲೆ ಬಳಿ, ಚೆಟ್ಟಳ್ಳಿ-ಅಭ್ಯತ್‌ಮಂಗಲ ರಸ್ತೆ ಸೇರಿದಂತೆ 2 ದೊಡ್ಡ ಪ್ರಮಾಣದ ಮತ್ತು 5 ಚಿಕ್ಕದಾದ ಭೂಕುಸಿತಗಳು ಸಂಭವಿಸಿವೆ.
ಮಾರ್ಚ್ನಿಂದ ಈಚೆಗೆ 13 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. 35 ಮನೆಗಳು ಬಹುತೇಕ ಹಾನಿಗೆ ಒಳಗಾಗಿದೆ. 104 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 8 ಜಾನುವಾರುಗಳು ಮೃತಪಟ್ಟಿವೆ. 94 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 5 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, 39 ಸಂತ್ರಸ್ತರು ಈ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಲ್ಲಿ ಬಿದ್ದಿದ್ದ 87 ಮರಗಳನ್ನು ತೆರವು ಮಾಡಲಾಗಿದೆ. 21 ಸೇತುವೆಗಳಿಗೆ ಹಾನಿಯಾಗಿದ್ದು, 49.75 ಕಿಮೀಗಳಷ್ಟು ರಸ್ತೆಗಳು ಹಾಳಾಗಿವೆ.
ಸೆಸ್ಕ್ಗೆ ಸಂಬAಧಿಸಿದAತೆ 1865 ಎಲೆಕ್ಟಿçಕ್ ಕಂಬಗಳು ನಷ್ಟವಾಗಿದೆ. 43 ಟ್ರಾನ್ಸ್ಫಾರ್ಮರ್‌ಗಳು ಕೆಟ್ಟುಹೋಗಿವೆ. 2 ಶಾಲೆಗಳು ಮಳೆಯಿಂದಾಗಿ ಹಾನಿಗೊಳಗಾಗಿದ್ದರೆ, 1 ಅಂಗನವಾಡಿಗೂ ನಷ್ಟ ಸಂಭವಿಸಿದೆ. ಲೋಕೋಪಯೋಗಿ ಇಲಾಖೆಗೆ ಸುಮಾರು 4.5 ಕೋಟಿ ರೂ. ನಷ್ಟ ಆಗಿರುವುದಾಗಿ ಅಂದಾಜು ಮಾಡಲಾಗಿದೆ. ಪಿಆರ್‌ಇಡಿ ಇಲಾಖೆಗೆ 6.85 ಕೋಟಿ ರೂ., ಸೆಸ್ಕ್ಗೆ 1.96 ಕೋಟಿ ರೂ. ನಷ್ಟವಾಗಿರುವ ಬಗ್ಗೆ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.
ಇದೀಗ ಪುಷ್ಯ ಮಳೆಯ ಅಬ್ಬರ ಜಿಲ್ಲೆಯಲ್ಲಿ ಕಡಿಮೆಯಾಗಿದ್ದರೂ ಸಾಧಾರಣ ಮಳೆಯ ವಾತಾವರಣ ಮುಂದುವರಿದಿರುವುದು ಕೃಷಿಕರ ಆತಂಕಕ್ಕೆ ಕಾರಣವಾಗಿದೆ. ಶೀತ ವಾತಾವರಣದಿಂದಾಗಿ ತೋಟಗಾರಿಕೆ ಬೆಳೆಗಳ ಫಸಲು ಹಾಳಾಗುತ್ತಿದ್ದು, ಆರ್ಥಿಕ ಪರಿಸ್ಥಿತಿ ಏರುಪೇರಾಗುವ ಸಾಧ್ಯತೆ ಬಗ್ಗೆ ಚಿಂತಿತರಾಗಿದ್ದಾರೆ. ವಾರ್ಷಿಕ ನಿರ್ವಹಣೆ ಕೆಲಸವೂ ನೆನೆಗುದಿಗೆ ಬೀಳುವಂತಾಗಿ ಎನ್ನುವ ಮಾತುಗಳು ಬೆಳೆಗಾರರ ವಲಯದಲ್ಲಿ ಕೇಳಿ ಬರುತ್ತಿದೆ. ಮಳೆ ಹೀಗೆಯೇ ಮುಂದುವರಿದರೆ ಮತ್ತಷ್ಟು ನಷ್ಟ ಸಂಭವಿಸುವ ಎಲ್ಲಾ ಸಾಧ್ಯತೆಗಳಿವೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಸಂಭವಿಸಿರುವ ಹಾನಿಯ ಅಂದಾಜು ಕಾರ್ಯ ಇನ್ನಷ್ಟೇ ನಡೆಯಬೇಕಿದೆ.
ಮನೆ, ರಸ್ತೆ, ಸೇತುವೆ, ತಡೆಗೋಡೆ, ವಿದ್ಯುತ್ ಕಂಬ ಹಾಗೂ ಪರಿವರ್ತಕಗಳು, ಬೆಳೆ ಹಾನಿ ಹೀಗೆ ಮಳೆಯಿಂದ ವಿವಿಧ ರೀತಿಯ ಹಾನಿಯಾಗಿದ್ದು, ಈ ಸಂಬAಧ ನಷ್ಟದ ಅಂದಾಜು ಮಾಡಿ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರಿಗೆ ವರದಿ ನೀಡಲಾಗುವುದು. ವಿಶೇಷ ಅನುದಾನ ಬಿಡುಗಡೆಗೆ ಪ್ರಯತ್ನಿಸಲಾಗುವುದು. ಪ್ರಾಕೃತಿಕ ವಿಕೋಪ ಎದುರಿಸಲು ಜಿಲ್ಲಾಡಳಿತ ಬಳಿ ಈಗಾಗಲೇ 30 ಕೋಟಿ ರೂ. ಇದ್ದು, ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಹಣದ ಕೊರತೆ ಇಲ್ಲ. ಮನೆ ಹಾನಿ ಸಂಬAಧ ಎನ್ ಡಿಆರ್ ಎಫ್ ನಿರ್ದೇಶನದಂತೆ ಕ್ರಮ ವಹಿಸಲಾಗುವುದು.
ಎನ್.ಎಸ್. ಬೋಸರಾಜು, ಜಿಲ್ಲಾ ಉಸ್ತುವಾರಿ ಸಚಿವ
ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆ ಹಾನಿ ಸಂಭವಿಸಿರುವ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಅಹವಾಲು ಸ್ವೀಕರಿಸಲಾಗಿದೆ. ಅಧಿಕಾರಿಗಳಿಂದಲೂ ಹೆಚ್ಚುವರಿ ಮಾಹಿತಿ ಪಡೆದುಕೊಳ್ಳಲಾಗುವುದು. ಸಂತ್ರಸ್ತರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಗಮನಹರಿಸಲಾಗುವುದು. ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ಸರ್ಕಾರದಿಂದ ಆಗಬೇಕಿರುವ ಕೆಲಸಗಳನ್ನು ಮುಖ್ಯಮಂತ್ರಿ ಗಮನ ಸೆಳೆಯಲಾಗುವುದು.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ
ಕೀರೆಹೊಳೆ, ಬಾಳೆಲೆ, ಹುದಿಕೇರಿ, ಟಿ.ಶೆಟ್ಟಿಗೇರಿ, ಶ್ರೀಮಂಗಲ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಲಾಗಿದೆ. ಸಂತ್ರಸ್ತರಿಗೆ ವಸತಿ ಸೇರಿದಂತೆ ಎಲ್ಲಾ ರೀತಿಯ ನೆರವು ನೀಡಲಾಗುವುದು. ಕರಡಿಗೋಡು ಭಾಗದ ಸಂತ್ರಸ್ತರಿಗೆ ಸದ್ಯದಲ್ಲೇ ಶಾಶ್ವತ ಪರಿಹಾರ ಒದಗಿಸಲಾಗುವುದು. ಮಾಲ್ದಾರೆ ವ್ಯಾಪ್ತಿಯಲ್ಲಿ ಸಂತ್ರಸ್ತರಿಗಾಗಿ 10 ಎಕರೆ ಜಾಗ ಗುರುತು ಮಾಡಲಾಗಿದ್ದು, ಈ ಸಂಬAಧ ಆದಷ್ಟು ಶೀಘ್ರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು.
ಎ.ಎಸ್. ಪೊನ್ನಣ್ಣ, ವಿರಾಜಪೇಟೆ ಶಾಸಕ
ರಾಜ್ಯ ಸರ್ಕಾರ ನೊಂದವರ ನೆರವಿಗೆ ಬರಬೇಕು. ಆ ಮೂಲಕ ಅವರಲ್ಲಿ ಭರವಸೆ ಮೂಡಿಸಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಸಂಪೂರ್ಣ ಮನೆ ಕಳೆದುಕೊಂಡವರಿಗೆ 10 ಲಕ್ಷ ರೂ., ಭಾಗಶಃ ಕಳೆದುಕೊಂಡವರಿಗೆ 1 ಲಕ್ಷ ರೂ. ಪರಿಹಾರ ನೀಡಿದ್ದೆವು. ಈಗಿನ ಕಾಂಗ್ರೆಸ್ ಸರ್ಕಾರ ಕೇವಲ ಬಿಟ್ಟಿ ಭಾಗ್ಯಗಳಿಗೆ ಅನುದಾನ ಮಿಸಲಿಟ್ಟು ಬಡ ವರ್ಗದ ಜನರಿಗೆ ದ್ರೋಹ ಮಾಡುತ್ತಿದೆ. ಒಂದೇ ಬಾರಿ ಪರಿಹಾರ ನೀಡಲು ಸಾಧ್ಯವಾಗದಿದ್ದರೆ ಕಂತುಗಳಲ್ಲಾದರೂ ನೀಡಬೇಕು.
ಎಂ.ಪಿ. ಅಪ್ಪಚ್ಚುರಂಜನ್, ಮಾಜಿ ಸಚಿವ