

ಕಲಘಟಗಿ: ಕಳೆದ ಒಂದುವಾರದಿಂದ ಬೆಂಬಿಡದೆ ಸುರಿಯುತ್ತಿರುವ ಪುನರ್ವಸು ಮಳೆಗೆ ತಾಲೂಕಿನಲ್ಲಿ ಬೆಳೆಯಲಾದ ತರಕಾರಿ ಬೆಳೆಗಳು ಅಲ್ಲಲ್ಲಿ ಸಂಪೂರ್ಣವಾಗಿ ನೆಲ ಕಚ್ಚಿದ್ದರಿಂದ ರೈತರು ಪರದಾಡುವಂತಾಗಿದೆ.
ವರುಣದ ಅಬ್ಬರಕ್ಕೆ ಒಂದೆಡೆ ತಾಲೂಕಿನ ಜನರು ಮನೆಯಿಂದ ಆಚೆ ಬರಲು ಹಿಂದೇಟು ಹಾಕುತ್ತಿದ್ದರೆ ಮತ್ತೊಂದೆಡೆ ತರಕಾರಿ ಬೆಳೆಗಳು ಹಾಳಾಗುತ್ತಿರುವುದರಿಂದ ಬೆಳೆಗಾರರು ಭಾರಿ ಹಾನಿ ಅನುಭವಿಸುವಂತಾಗಿದೆ.
ತಾಲೂಕಿನಾದ್ಯಂತ ಸುಮಾರು 231 ಹೆಕ್ಟೇರ್‌ನಷ್ಟು ತರಕಾರಿ ಬೆಳೆಯಲಾಗಿದೆ. ಈ ಪೈಕಿ 133 ಹೆಕ್ಟೇರ್ ಮೆಣಸಿನಕಾಯಿ, 57 ಹೆಕ್ಟೇರ್ ಬದನೆಕಾಯಿ, 25 ಹೆಕ್ಟೇರ್ ಟೊಮ್ಯಾಟೊ, 20 ಹೆಕ್ಟೇರ್ ಬೆಂಡೆಕಾಯಿ, 4 ಹೆಕ್ಟೇರ್ ಸೌತೆಕಾಯಿ, 4 ಹೆಕ್ಟೇರ್ ಕಾಯಿಪಲ್ಲೆ ಹಾಗೂ ಹಾಗಲಕಾಯಿ, ಬೀನ್ಸ್ ಸೇರಿದಂತೆ ಇತರೆ ತರಕಾರಿ ಬೆಳೆಯಲಾಗಿದೆ.
ತಾಲೂಕಿನ ಮಲಕನಕೊಪ್ಪ ಗ್ರಾಮದ ಶಿವಲಿಂಗಪ್ಪ ಮಡ್ಲಿ ಎಂಬುವವರು ತಮ್ಮ 1ಎಕರೆ ಹೊಲದಲ್ಲಿ ಅಂದಾಜು 40 ಸಾವಿರ ರೂ. ಖರ್ಚು ಮಾಡಿ ಹಿರೇಕಾಯಿ ಹಾಗೂ ಹಾಗಲಕಾಯಿ ಬೆಳೆದಿದ್ದರು. ಈಗಾಗಲೇ ಅಲ್ಪ ಸ್ವಲ್ಪ ಬೀಡನ್ನು ಹರಿದು ಮಾರುಕಟ್ಟೆಗೆ ಕಳುಹಿಸಲಾಗಿತ್ತು. ಆದರೆ, ರಬಸವಾಗಿ ಬೀಸಿದ ಗಾಳಿ-ಮಳೆಗೆ ಹೊಲದಲ್ಲಿನ ಹಾಗಲಕಾಯಿ, ಹಿರೇಕಾಯಿ ಬೆಳೆ ಸಂಪೂರ್ಣವಾಗಿ ಹಾಳಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿ ನಿರ್ಮಾಣವಾಗಿದೆ.
ರೈತರು ಬೆಳೆ ಹಾನಿ ಕುರಿತು ವಿಸ್ತೃತ ವರದಿಯನ್ನು ತೋಟಗಾರಿಕೆ ಇಲಾಖೆಗೆ ನೀಡಿದರೆ ಪರಿಶೀಲಿಸಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಲ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ತರಕಾರಿ ಬೆಳೆಯೋದು ಬಲು ಕಷ್ಟವಾಗಿತ್ತು. ಆದರೂ ಶ್ರಮವಹಿಸಿ 1 ಎಕರೆ ಭೂಮಿಯಲ್ಲಿ ತರಕಾರಿ ಬೆಳೆದು ಒಳ್ಳೆಯ ಲಾಭದ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ, ಮಳೆಗೆ ಹೊಲದಲ್ಲಿನ ಬಳ್ಳಿಯು ನೆಲಕ್ಕೆ ಬಿದ್ದು ಅಂದಾಜು 1 ಲಕ್ಷ ರೂ. ಆದಾಯ ಕೈತಪ್ಪಿ ಹೋಗಿದೆ.ಶಿವಲಿಂಗಪ್ಪ ಮಡ್ಲಿ, ಮಲಕನಕೊಪ್ಪ ಗ್ರಾಮದ ರೈತ
ತಾಲೂಕಿನಲ್ಲಿ ಇತ್ತಿಚೆಗೆಪ್ರಕೃತಿ ವಿಕೋಪದಿಂದ ತರಕಾರಿ ಬೆಳೆಗಳು ಹಾನಿಗೀಡಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿವೆ. ಈಗಾಗಲೇ ಮಳೆ ಹಾನಿಗೀಡಾದ ಹೊಲ ಹಾಗೂ ತೋಟಗಳಿಗೆ ಭೇಟಿ ನೀಡಿ. ಹಾನಿಯಾದ ಬೆಳೆಯ ವರದಿಯನ್ನ ತಹಸೀಲ್ದಾರ್ ಕಚೇರಿಗೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ರೈತರ ಖಾತೆಗೆ ನೇರವಾಗಿ ಪರಿಹಾರ ಧನ ಬರಲಿದೆ.ಮಾಲತೇಶ ಪಟ್ಟಣಶೆಟ್ಟಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ