ಜ.7ರಂದು ಮದ್ದೂರಿನಲ್ಲಿ ಪುನರ್‌ಸಮ್ಮಿಲನ ಕಾರ್ಯಕ್ರಮ: ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಮಾಹಿತಿ

punar sammilana programme mandya
Published on

ಮದ್ದೂರು: ಜಿಲ್ಲೆಯ ಪ್ರಪ್ರಥಮ ಬಾಲಕಿಯರ ಪ್ರೌಢಶಾಲೆ ಎಂದು ಹೆಸರಾಗಿರುವ ಪಟ್ಟಣದ ಕಮಲಾ ನೆಹರು ಬಾಲಿಕಾ ಪ್ರೌಢಶಾಲೆಯಲ್ಲಿ ಜ.7ರಂದು ಪುನರ್ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಲೆಯ ಹಿರಿಯ ವಿದ್ಯಾರ್ಥಿನಿ ಹಾಗೂ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಹೇಳಿದರು.

ಅಂದು ಬೆಳಗ್ಗೆ 10 ಗಂಟೆಗೆ ಶಾಲೆಯ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಶಾಲೆಯ ಎಲ್ಲ ಹಳೆಯ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಕೆ.ವೀರಣ್ಣಗೌಡ ಹಾಗೂ ಕೆ.ಟಿ.ಚಂದು ಅವರ ದೂರದೃಷ್ಟಿ ಫಲವಾಗಿ 1967ರಲ್ಲಿ ಮಹಾರಾಣಿ ಶ್ರೀ ತ್ರಿಪುರ ಸುಂದರಮ್ಮಣ್ಣಿ ಅವರ ಪರವಾಗಿ ರಾಜಕುಮಾರಿ ಗಾಯತ್ರಿದೇವಿ ಅವರ ಅಮೃತ ಹಸ್ತದಿಂದ ಪ್ರಾರಂಭವಾದ ಪ್ರಥಮ ಬಾಲಕಿಯರ ಪ್ರೌಢಶಾಲೆಗೆ 57 ವರ್ಷ ತುಂಬಿದ್ದು ಸಾವಿರಾರು ವಿದ್ಯಾರ್ಥಿನಿಯರು ಪ್ರೌಢಶಾಲಾ ಶಿಕ್ಷಣವನ್ನು ಪಡೆಯಲು ಸಹಕಾರಿಯಾಗಿದೆ. ಈ ಸುಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಜತೆಗೂಡಿ ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದು ವಿವರಿಸಿದರು.

ಕಾರ್ಯಕ್ರಮವನ್ನು ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಮಹಿಳಾ ಉದ್ಯಮಿ ಎಂ.ಎಂ. ಸುಶೀಲಾದೇವಿ ಸತೀಶ್‌ಚಂದ್ರ ಉದ್ಘಾಟಿಸಲಿದ್ದು, ನಿವೃತ್ತ ಪ್ರಾಧ್ಯಾಪಕಿ ಎಂ.ಶ್ರೀಲತಾ ಶಾಲೆಯ ಕೀರ್ತಿಶೇಷ ಬೋಧಕ-ಬೋಧಕೇತರರಿಗೆ ನುಡಿನಮನ ಸಲ್ಲಿಸುವರು. ಹಿರಿಯ ವಿದ್ಯಾರ್ಥಿಗಳಾದ ಎಂ.ಶಾಂತಾ, ಆರ್.ಸೌಮ್ಯಾ ಶ್ರೀಹರ್ಷ ನಿವೃತ್ತ ಬೋಧಕ-ಬೋಧಕೇತರರಿಗೆ ಅಭಿನಂದನಾ ನುಡಿ ಸಲ್ಲಿಸುವರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ 2023ನೇ ಸಾಲಿನ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕೆ.ಟಿ.ಚಂದು ಮತ್ತು ಶಾಲೆಯಲ್ಲಿ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿರುವಂತಹ ಗುರುವೃಂದಕ್ಕೆ ಅಭಿನಂದನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಪ್ರಾಧ್ಯಾಪಕಿ ಎಂ.ಶ್ರೀಲತಾ, ಹಿರಿಯ ವಿದ್ಯಾರ್ಥಿಗಳು ಹಾಗೂ ಪುರಸಭಾ ಸದಸ್ಯರಾದ ಸರ್ವಮಂಗಳಾ, ಕೋಕಿಲಾ ಅರುಣ್, ವನಿತಾ, ಹಿರಿಯ ವಿದ್ಯಾರ್ಥಿಗಳಾದ ಕಲಾವತಿ, ರೂಪಾ, ಸುಷ್ಮಾ. ಶಾಲಿನಿ, ಜ್ಯೋತಿ, ನೇತ್ರಾವತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net