

ವಿಟ್ಲ: ಪುಣಚದಲ್ಲಿ ನಡೆದ ಪಂಪ್ ಕಳ್ಳತನ ಪ್ರಕರಣದ ಓರ್ವ ಆರೋಪಿಯನ್ನು ಬಂಧಿಸಿ, 16ಪಂಪ್ ಹಾಗೂ ಕೃತ್ಯಕ್ಕೆ ಬಳಸಿದ ವಾಹನವನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಡಬ ಪೆರಬೆ ಕೋಚಕಟ್ಟೆ ನಿವಾಸಿ ಮಹಮ್ಮದ್ ಶಾಕೀರ್ (22) ಬಂಧಿತ ವ್ಯಕ್ತಿ. ಇನ್ನಿಬ್ಬರು ಪ್ರಕರಣದಲ್ಲಿ ಬಾಗಿಯಾಗಿದ್ದು, ತಲೆ ಮರೆಸಿಕೊಂಡಿದ್ದಾರೆ.
ಪುಣಚ ಗ್ರಾಮದ ಗುರ್ಮೆ ನಿವಾಸಿ ಗಣೇಶ್ ಗೌಡ ಮನೆಯ ಬಳಿಯಿರುವ ಕಟ್ಟಡದಲ್ಲಿ ಕೃಷಿಕರಿಂದ ರಿಪೇರಿಗಾಗಿ ಪಡೆದು ಇರಿಸಿದ್ದ 2ಲಕ್ಷ ಮೌಲ್ಯದ ಒಟ್ಟು 16 ಕೊಳವೆಬಾವಿ ಪಂಪುಗಳನ್ನು ಜು.21ರ ತಡರಾತ್ರಿ ಕಳವು ಮಾಡಿದ್ದರು. ಜು.24ರವರೆಗೆ ಪ್ರಕರಣ ದಾಖಲಿಸಿಕೊಳ್ಳದೆ, ಸಿಸಿ ಟಿವಿ ದಾಖಲೆಯನ್ನು ದೂರಿನ ಜತೆಗೆ ನೀಡಿದ್ದರೂ ಎನ್. ಸಿ. ಮಾಡಿ ಕಳುಹಿಸುವ ಕೆಲಸವನ್ನು ವಿಟ್ಲ ಪೊಲೀಸರು ಮಾಡಿದ್ದರು. ಸ್ಥಳೀಯರ ಮಾಹಿತಿಯಂತೆ ವಿಜಯವಾಣಿ ವರದಿ ಪ್ರಕಟಿಸುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡಿದ್ದರು.
ಗುಜುರಿಯವರಿಂದ ಕೃತ್ಯ?
ಉಪ್ಪಿನಂಗಡಿ ಭಾಗದಲ್ಲಿ ಗುಜುರಿ ವಹಿವಾಟು ನಡೆಸುವ ವ್ಯಕ್ತಿಗಳು ಪುಣಚದಲ್ಲಿ ಕಳ್ಳತನ ಮಾಡಿದ್ದು, ಸಾಮಾಗ್ರಿಯನ್ನು ಬೆಳ್ತಂಗಡಿಯಲ್ಲಿ ವಿಲೇವಾರಿ ಮಾಡಿದ್ದಾರೆ. ಪ್ರಕರಣ ನಡೆದ ಬಳಿಕ ವಾಹನದ ಪರಿಚಯ ಸಿಗಬಾರದೆಂದು ಅದರ ಬಾಡಿಯನ್ನು ಬದಲಾಯಿಸುವ ಕೆಲಸ ಮಾಡಲಾಗಿತ್ತು. ಹಲವು ಕಡೆಯಲ್ಲಿ ಗುಜುರಿನೆಪದಲ್ಲಿ ಬಂದು ಕಳ್ಳತನದ ಸ್ಕೆಚ್ ಹಾಕಿದ್ದರೆನ್ನಲಾಗಿದೆ.
3.81 ಲಕ್ಷ ಸೊತ್ತು ವಶಕ್ಕೆ:
ಬೆಳ್ತಂಗಡಿಯಲ್ಲಿ ಕಳವಾದ ವಸ್ತುಗಳನ್ನು ವಿಲೇವಾರಿ ಮಾಡಿರುವ ಮಾಹಿತಿಯ ಆಧಾರದಲ್ಲಿ ಅಲ್ಲಿನ ವ್ಯಕ್ತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ಮಾಡಿದಾಗ ಗುಜುರಿಯವರ ಹೆಸರು ಬಾಯಿಬಿಟ್ಟಿದ್ದಾನೆಂದು ಹೇಳಲಾಗಿದೆ. ಪುಣಚದಿಂದ ಸುಮಾರು 1.81ಲಕ್ಷ ಮೌಲ್ಯದ ಸೂತ್ತು ಕಳವಾಗಿದ್ದ ಬಗ್ಗೆ ಹೇಳಲಾಗಿದ್ದು, ಕಳ್ಳತನಕ್ಕೆ ಉಪಯೋಗಿಸಿದ ಸುಪರ್ ಕ್ಯಾರಿ ವಾಹನ ಸಹಿತ ಕಳವಾದ ಪಂಪ್ ಸೇರಿಸಿ ಸುಮಾರು 3.81 ಲಕ್ಷ ಮೌಲ್ಯದ ಸೊತ್ತು ವಶಕ್ಕೆ ಪಡೆಯಲಾಗಿದೆ.