

ಮಂಗಳೂರು: ಕಂಕನಾಡಿ ಪಂಪ್‌ವೆಲ್ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ ಈ ಬಾರಿ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ಆ. 29ರಿಂದ ಸೆ.2 ರ ವರೆಗೆ 5 ದಿನಗಳ ಕಾಲ ವಿವಿಧ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಆಯೋಜನೆಗೊಳ್ಳಲಿದೆ.
ನೂತನವಾಗಿ ಉದ್ಘಾಟನೆಗೊಂಡ ಸಮಿತಿ ಕಟ್ಟಡ ಸುಮುಖ ಭವನದಲ್ಲಿ ಗಣೇಶೋತ್ಸವ ಜರುಗಲಿದ್ದು, 108 ಕಾಯಿಯ ಗಣಯಾಗ, ಮೂಡಪ್ಪ ಸೇವೆ, ರುದ್ರಹೋಮ, ಚಂಡಿಕಾ ಹೋಮ ಹಾಗೂ ವಿವಿಧ ವೈದಿಕ ಕಾರ್ಯಕ್ರಮ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಪ್ರತಿದಿನ ಹಮ್ಮಿಕೊಳ್ಳಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಮಠಾಧೀಶರಾದ ಕೇಮಾರು ಶ್ರೀಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕನ್ಯಾಡಿ ಶ್ರೀರಾಮಕ್ಷೇತ್ರ ಮಹಾಸಂಸ್ಥಾನದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಒಡಿಯೂರಿನ ಸಾಧ್ವಿ ಶ್ರೀ ಮಾತಾನಂದಮಯಿ, ಹೊರನಾಡು ಕ್ಷೇತ್ರದ ಧರ್ಮದರ್ಶಿ ಡಾ.ಜಿ.ಭೀಮೇಶ್ವರ ಜೋಶಿ, ಸಾಮಾಜಿಕ ಮುಖಂಡರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್, ಪ್ರೊ.ಎಂ.ಬಿ.ಪುರಾಣಿಕ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸುವರ್ಣ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಗಣೇಶೋತ್ಸವ ಪ್ರಯುಕ್ತ ಐದು ದಿನಗಳ ಕಾಲ ನಿರಂತರ ಬೆಳಗ್ಗೆ, ಸಂಜೆ ಉಪಹಾರ ಹಾಗೂ ಮಧ್ಯಾಹ್ನ - ರಾತ್ರಿ ಅನ್ನಸಂತರ್ಪಣೆ ನೆರವೇರಲಿದೆ. ಅನ್ನದಾನಕ್ಕೆ ಹಸಿರುವಾಣಿ ಹೊರಕಾಣಿಕೆ ಮೆರವಣಿಗೆ ಆ.29ರಂದು ಸಂಜೆ 4 ಗಂಟೆಗೆ ಶರವು ಮಹಾಗಣಪತಿ ದೇವಸ್ಥಾನದಿಂದ ಹೊರಡಲಿದೆ. ಸೆ.2ರಂದು ಸಂಜೆ 4 ಗಂಟೆಗೆ ಉತ್ಸವ ಸ್ಥಳದಿಂದ ಶೋಭಾಯಾತ್ರೆ ಹೊರಡಲಿದೆ. ಕೇರಳದ ಚಂಡೆ, ಶಂಖ, ಜಾಗಟೆ, ಭಜನೆ, ಆಕರ್ಷಕ ಸ್ತಬ್ಧ ಚಿತ್ರಗಳು ಹಾಗೂ ವಿವಿಧ ವಾದ್ಯಘೋಷಗಳೊಂದಿಗೆ ಹೊರಟು ಪಂಪ್‌ವೆಲ್, ಕಂಕನಾಡಿ ಹಳೇ ಮಾರ್ಗವಾಗಿ, ಕಂಕನಾಡಿ ವೃತ್ತದಲ್ಲಿ ತಿರುಗಿ ಬೈಪಾಸ್ ರಸ್ತೆಯಾಗಿ ಪಂಪ್‌ವೆಲ್, ಗರೋಡಿ ಹಾಗು ನಾಗುರಿಯಾಗಿ ಪಡೀಲ್ ಬೈರಾಡಿ ಕೆರೆಯಲ್ಲಿ ದೇವರ ಮೂರ್ತಿಯನ್ನು ಜಲಸ್ತಂಭನಗೊಳಿಸಲಾಗುವುದು ಎಂದರು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ್ಜಗದೀಶ್ ಕೆ., ಗೌರವಾಧ್ಯಕ್ಷ ಎಂ.ಎಂ.ಪ್ರಭು, ಶ್ರೀ ಮಹಾಗಣಪತಿ ಸೇವಾ ಪ್ರತಿಷ್ಠಾನ ಅಧ್ಯಕ್ಷ ಕೆ.ಬಿ.ಅರಸ, ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಸಂದೀಪ್ ಸಾಲಿಯಾನ್ ಉಪಸ್ಥಿತರಿದ್ದರು.