ಪಂಪ್‌ಸೆಟ್ ಲೈನ್‌ಗೆ ರೈತರ ಪರದಾಟ !

11 DVD 02
ನಗರಗುಂಡದಲ್ಲಿ ವಿದ್ಯುತ್ ಕಂಬದಲ್ಲಿ ಜಂಪ್ ಕಟ್ ಆಗಿರುವುದು.
Published on

ದೇವದುರ್ಗ: ತಾಲೂಕಿನಲ್ಲಿ ಮುಂಗಾರು ಆರಂಭವಾಗಿದ್ದು ರೈತರ ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಕಣ್ಣಾಮುಚ್ಚಾಲೆ ಸಮಸ್ಯೆ ತಂದೊಡ್ಡಿದೆ. ಜೆಸ್ಕಾಂ ತಾತ್ಕಾಲಿಕ ಪರಿಹಾರ ಕಲ್ಪಿಸಿದರೂ ಗ್ರಾಮೀಣ ಭಾಗದಲ್ಲಿ ಪಂಪ್‌ಸೆಟ್‌ಗೆ ಸಂಕಟ ತಪ್ಪಿಲ್ಲ. ವಿದ್ಯುತ್ ಪರಿವರ್ಧಕ(ಟಿಸಿ) ಸುಟ್ಟರಂತೂ ರೈತರ ಕತೆ ದೇವರಿಗೆ ಪ್ರೀತಿ ಎನ್ನುವ ಸ್ಥಿತಿಯಿದೆ.

ಕೃಷ್ಣಾನದಿ ದಂಡೆ ಭಾಗದ ಸುಮಾರು 40ಕ್ಕೂ ಹೆಚ್ಚು ಹಳ್ಳಿಗಳು ಹಾಗೂ ಗಬ್ಬೂರು, ಅರಕೇರಾ ಹೋಬಳಿ ಬಹುತೇಕ ಹಳ್ಳಿಗಳ ರೈತರು ವಿದ್ಯುತ್ ಪಂಪ್‌ಸೆಟ್ ನಂಬಿ ಒಕ್ಕಲುತನ ಮಾಡುತ್ತಾರೆ. ಗದ್ದೆಗೆ ನೀರು ಬಿಡಲು, ಹತ್ತಿ, ಮೆಣಸಿನಕಾಯಿ ಸೇರಿ ವಿವಿಧ ವಾಣಿಜ್ಯ ಬೆಳೆಗಳಿಗೆ ಪಂಪ್‌ಸೆಟ್ ನೀರು ಬೇಕೇಬೇಕು. ಆದರೆ, ಹಳೇ ಕಾಲದ ವಿದ್ಯುತ್ ಲೈನ್‌ಗಳು, ಅವೈಜ್ಞಾನಿಕ ಸಂಪರ್ಕಗಳು, ಹಣದ ಬೇಡಿಕೆ ರೈತರ ಜೀವಹಿಂಡುತ್ತಿವೆ.

ರೈತರ ಪಂಪ್‌ಸೆಟ್‌ಗಳಿಗೆ ಪ್ರತ್ಯೇಕ ಜಾಲ ಮಾಡಿದ್ದು ನಿತ್ಯ ಗರಿಷ್ಠ 6ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ವಿದ್ಯುತ್ ಕಡಿತ, ಗಾಳಿಗೆ ಲೈನ್ ಜಂಪ್, ನಾನಾ ರಿಪೇರಿ ಸೇರಿ ವಿವಿಧ ಕಾರಣದಿಂದ ಒಂದೆರಡು ಗಂಟೆ ವಿದ್ಯುತ್ ಕಡಿತವಾಗುತ್ತಿದೆ. ಈ ಹಿಂದೆ 5-8ರೈತರ ಪಂಪ್‌ಸೆಟ್‌ಗಳಿಗೆ ಒಂದೇ ಟಿಸಿ ಕೂಡಿಸಿ ಸಂಪರ್ಕ ಕಲ್ಪಿಸಲಾಗುತ್ತಿತ್ತು. ನದಿದಂಡೆ ಹಾಗೂ ಗಂಗಾಕಲ್ಯಾಣ ಯೋಜನೆಯಡಿ ಬೋರ್‌ವೆಲ್ ಕೊರೆಸಿಕೊಂಡ ರೈತರಿಗೆ ಪ್ರತ್ಯೇಕ ಟಿಸಿ ನೀಡಲಾಗಿದೆ.

ಸಾರ್ವಜನಿಕರ ಟಿಸಿ ಸುಟ್ಟರೆ ನಾಲ್ಕೈದು ರೈತರು ಸೇರಿ ರಿಪೇರಿ ಮಾಡಿಸುತ್ತಾರೆ. ಆದರೆ, ಗಂಗಾಕಲ್ಯಾಣಿ, ವೈಯಕ್ತಿಕ ಟಿಸಿ ಸುಟ್ಟರೆ ನರಕಯಾತನೆ ಅನುಭವಿಸಬೇಕು. ಅರ್ಜಿ ನೀಡಿ ಜೆಸ್ಕಾಂಗೆ ಅಲೆಯಬೇಕು. ಟಿಸಿ ಬಿಡಿಸಿಕೊಂಡು ಜೆಸ್ಕಾಂ ನೀಡಬೇಕು. ಬದಲಿ ಟಿಸಿ ಪಡೆದು ಮತ್ತೆ ಕೂಡಿಸಲು ರೈತರ ಜೀವ ಹೋಗಿಬಂದಂತಾಗುತ್ತೆ. ಹಣ ನೀಡಿದರೆ ಬೇಗ ರಿಪೇರಿ ಮಾಡಿದರೆ ಕೈಬಿಸಿ ಮಾಡದಿದ್ದರೆ 3ರಿಂದ 6ತಿಂಗಳಾದರೂ ದುರಸ್ತಿ ಆಗಲ್ಲ ಎಂದು ರೈತರು ನೋವು ತೋಡಿಕೊಳ್ಳುತ್ತಿದ್ದಾರೆ.

ಕೊತ್ತದೊಡ್ಡಿಯಲ್ಲಿ ಕೆಲ ರೈತರು ಟಿಸಿ ಸುಟ್ಟು 3ತಿಂಗಳು ಕಳೆದರೂ ರಿಪೇರಿ ಮಾಡಿಲ್ಲ. ರೈತರು ಅರ್ಜಿ ಸಲ್ಲಿಸಿ ಕಚೇರಿಗೆ ನಿತ್ಯ ಅಲೆಯುತ್ತಾರೆ. ಟಿಸಿ ರಿಪೇರಿಗೆ ಕೊಂಡೊಯ್ದಿಲ್ಲ. ಇನ್ನು ಗುಂಡುಗುರ್ತಿಯಲ್ಲಿ ಹಲವು ದಿನಗಳಿಂದ ಟಿಸಿ ಸುಟ್ಟರೂ ರಿಪೇರಿ ಮಾಡಿಲ್ಲ. ನಗರಗುಂಡದಲ್ಲಿ ಪಂಪ್‌ಸೆಟ್ ಸಂಪರ್ಕ ಕಲ್ಪಿಸುವ ಹಳೇಲೈನ್ ಪದೇಪದೆ ಹಾಳಾಗುತ್ತಿದೆ. ಮಳೆ, ಗಾಳಿಗೆ ಜಂಪ್‌ಆದರೆ ಜೆಸ್ಕಾಂಗೆ ದೂರು ನೀಡಿ ಎಲ್‌ಸಿ ತೆಗೆದುಕೊಂಡು ರಿಪೇರಿ ಮಾಡಬೇಕು. ಇದಕ್ಕೆ ಒಂದುದಿನ ಸಮಯ ಹಿಡಿಯಲಿದೆ. ವಾರದಲ್ಲಿ ಎರಡ್ಮೂರು ಸಲ ಹೀಗೆ ಆಗುತ್ತಿದ್ದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ.

ಮಾರ್ಚ್‌ನಲ್ಲಿ ನಮ್ಮ ಜಮೀನಿನಲ್ಲಿ ಟಿಸಿ ಸುಟ್ಟಿದೆ. ಲೈನ್‌ಮ್ಯಾನ್ ಸೇರಿ ಅಧಿಕಾರಿಗಳಿಗೆ ದಾಖಲೆ ನೀಡಿ ಅರ್ಜಿ ಸಲ್ಲಿಸಿದ್ದೇವೆ. ಒಂದುದಿನ ಬಂದು ನೋಡಿಕೊಂಡು ಹೋದವರು 3ತಿಂಗಳು ಕಳೆದರೂ ಟಿಸಿ ದುರಸ್ತಿ ಮಾಡಿಲ್ಲ. ಮುಂಗಾರು ಬಿತ್ತನೆಗೆ ಸಮಸ್ಯೆಯಾಗಿದ್ದು ಯಾರಿಗೆ ಹೇಳಿದರೂ ಹೊಸ ಟಿಸಿ ಬರುತ್ತಿಲ್ಲ.

ಎಂ.ಹನುಮಂತ್ರಾಯ ನಾಯಕ

ಕೊತ್ತದೊಡ್ಡಿ ರೈತ

ಪಂಪ್‌ಸೆಟ್ ಟಿಸಿ ಸುಟ್ಟ ರೈತರು ಅರ್ಜಿ ಸಲ್ಲಿಸಿದರೆ ಹೊಸ ಟಿಸಿ ನೀಡುತ್ತೇವೆ. ಕೆಲವು ತಾಂತ್ರಿಕ ಕಾರಣದಿಂದ ತಡವಾಗಿರಬಹುದು. ರೈತರ ಟಿಸಿ ರಿಪೇರಿಗೆ ಯಾವುದೇ ಶುಲ್ಕ ಇರುವುದಿಲ್ಲ. ಮಳೆ, ಗಾಳಿಗೆ ವಿದ್ಯುತ್ ಕಡಿತವಾಗುತ್ತೆ. ಲೈನ್ ಕ್ಲಿಯರ್ ಮಾಡಿಕೊಂಡು ಪೂರೈಕೆ ಮಾಡುತ್ತೇವೆ.

ಶ್ರೀನಿವಾಸ್

ಜೆಸ್ಕಾಂ ಎಇಇ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net