

ಬಸವನಬಾಗೇವಾಡಿ: ಜಿಲ್ಲೆಯ ರೈತರ ಅನುಕೂಲಕ್ಕಾಗಿ ಸಚಿವ ಶಿವಾನಂದ ಪಾಟೀಲ ಅವರು ಅಕ್ರಮ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲು ಒಂದುವಾರ ಕಾಲಾವಕಾಶ ನೀಡುವಂತೆ ಸೂಚಿಸಿದ್ದಾರೆ ಎಂದು ಹೆಸ್ಕಾಂ ಕಾರ್ಯ ಮತ್ತು ಪಾಲನೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಿದ್ಧರಾಮ ಬಿರಾದಾರ ತಿಳಿಸಿದ್ದಾರೆ.
ರೈತರು 2018ರಲ್ಲಿ 50 ರೂ. ಕಟ್ಟಿ ವಿದ್ಯುತ್ ಮೀಟರ್ ಆರ್.ಆರ್. ನಂಬರ್ ಮಾಡಿಕೊಂಡು ಭದ್ರತಾ ಠೇವಣಿ ಮತ್ತು ಅಭಿವೃದ್ಧಿ ಶುಲ್ಕ ತುಂಬಿದ ರೈತರಿಗೆ ಮೇ 16ರ ಒಳಗಾಗಿ ಸಕ್ರಮಗೊಳಿಸಲು ಸೂಚಿಸಲಾಗಿತ್ತು. ಆದರೆ, ಸಚಿವರು ಮೇ 23 ರವರೆಗೆ ಅವಧಿ ವಿಸ್ತರಿಸುವಂತೆ ಸೂಚಿಸಿದ್ದಾರೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.