ಕಾಫಿ ಬೆಳೆಗಾರರ ೧೦ ಹೆಚ್‌ಪಿ ತನಕದ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್

18mdk02
Published on

ಮಡಿಕೇರಿ:

ಕಾಫಿ ಬೆಳೆಗಾರರಿಗೆ ೧೦ ಹೆಚ್‌ಪಿ ತನಕದ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಕೊಡುವ ಯೋಜನೆ ಜಾರಿ ಮಾಡಿದ್ದು, ಈ ಹಿಂದಿನ ಬಾಕಿ ಲೆಕ್ಕಕ್ಕೆ ತೆಗೆದುಕೊಳ್ಳಬಾರದು ಎಂದು ಸೆಸ್ಕ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು. ಕೊಡಗು ಜಿಲ್ಲಾಡಳಿತ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯ ಫಲಾನುಭವಿಗಳ ಸಮ್ಮೇಳನ ಹಾಗೂ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭ ಉದ್ಘಾಟಿಸಿ ಶನಿವಾರ ಮಾತನಾಡಿದರು.


ಉಳಿದ ಕೃಷಿಕರಿಗೆ ಇರುವಂತೆ ತಮಗೂ ಉಚಿತ ವಿದ್ಯುತ್ ನೀಡುವಂತೆ ಕಾಫಿ ಬೆಳೆಗಾರರು ಹಲವು ವರ್ಷಗಳಿಂದ ಬೇಡಿಕೆ ಇಟ್ಟುಕೊಂಡು ಬಂದಿದ್ದರು. ಇದೀಗ ತಮ್ಮ ಸರಕಾರ ಕಾಫಿ ಬೆಳೆಗಾರರಿಗೂ ಉಚಿತ ವಿದ್ಯುತ್ ನೀಡುವ ಯೋಜನೆ ಜಾರಿಗೆ ತರುವ ಮೂಲಕ ಅವರ ಬೇಡಿಕೆಗಳಿಗೆ ಸ್ಪಂದಿಸಿದೆ ಎಂದರು.
ಭೂಮಿಯ ಪ್ರಮಾಣ ಮೊದಲಿದ್ದಷ್ಟೇ ಇದೆ. ಆದರೆ ಅವಲಂಬಿತರ ಸಂಖ್ಯೆ ಹೆಚ್ಚಾಗುತ್ತಿದೆ. ದೇಶಕ್ಕೆ ಆಹಾರ ಸುರಕ್ಷತೆ ಇರಲು ರೈತರೇ ಕಾರಣ. ರೈತರ ಆದಾಯ ಹೆಚ್ಚಾದರೆ ನಾಡಿಗೆ ಶಕ್ತಿ ತುಂಬಿದಂತೆ. ಈ ಹಿನ್ನೆಲೆಯಲ್ಲಿ ಅನ್ನದಾತರಿಗೆ ಶಕ್ತಿ ತುಂಬಲು ಸರಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಬೀಜ, ಗೊಬ್ಬರ ಖರೀದಿಗೆ ೧೦ ಸಾವಿರ ರೂ. ಸಹಾಯ ನೀಡಲಾಗುತ್ತಿದೆ. ರೈತರಿಗೆ ಜೀವನ ಜ್ಯೋತಿ ಆರೋಗ್ಯ ವಿಮೆ ಜಾರಿ ಮಾಡಲಾಗಿದೆ. ನಿಂತು ಹೋಗಿದ್ದ ಯಶಸ್ವಿನಿ ಯೋಜನೆಗೆ ಮರು ಚಾಲನೆ ನಿಡಲಾಗಿದೆ. ಕೊಡಗಿನಲ್ಲಿ ೫೦,೬೨೩ ಮಂದಿ ರೈತರು ಕೃಷಿ ಸಮ್ಮಾನ್ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು.
ಕೊಡಗಿನ ನೈಸರ್ಗಿಕ ಪರಿಸ್ಥಿತಿಗೆ ಅನುಗುಣವಾಗಿ ೧೦೦ ಕೋಟಿ ವಿಶೇಷ ಪ್ಯಾಕೇಜ್ ಒದಗಿಸಲಾಗಿದೆ. ಸಾಮಾನ್ಯ ಅನುದಾನದ ಜೊತೆಗೆ ಈ ಪ್ಯಾಕೇಜ್ ಕೂಡ ಜಿಲ್ಲೆಗೆ ಸಿಗಲಿದೆ.

ಕೊಡವ ಜನಾಂಗದ ಅಭಿವೃದ್ಧಿಗೆ ೧೦ ಕೋಟಿ ನೀಡಲಾಗಿದೆ. ಮುಂದಿನ ವರ್ಷವೂ ಇಷ್ಟೇ ಮೊತ್ತವನ್ನು ಒದಗಿಸಲಾಗುವುದು. ಕೊಡವ ಜನಾಂಗಕ್ಕೆ ಬೆಂಗಳೂರಿನಲ್ಲಿ ೭ ಎಕರೆ ಜಾಗ ರಿಯಾಯಿತಿ ದರದಲ್ಲಿ ನೀಡಲಾಗಿದೆ.


ಪ್ರವಾಸೋದ್ಯಮದಲ್ಲಿ ಹೆಸರು ಮಾಡಿರುವ ಕೊಡಗನ್ನು ಮೈಸೂರು ಸರ್ಕೀಟ್‌ನಲ್ಲಿ ಸೇರಿಸಲಾಗಿದ್ದು, ಅಂತಾರಾಷ್ಟ್ರೀಯ ಪ್ರವಾಸಿ ನಕಾಶೆಯಲ್ಲಿ ಗುರುತಿಸುವಂತೆ ವ್ಯವಸ್ಥೆ ಮಾಡಲಾಗಿದೆ. ತಾವು ಹಿಂದೆ ಕೊಟ್ಟ ಮಾತಿನಂತೆ ಕೊಡಗನ್ನು ಸ್ವಿಡ್ಜರ್‌ಲ್ಯಾಂಡ್ ರೀತಿಯಲ್ಲಿ ಅಭಿವೃದ್ಧಿಪಡಿಸಲು ಬದ್ಧವಾಗಿರುವುದಾಗಿ ಹೇಳಿದರು.
ಕೊಡಗಿನ ವಿಶೇಷ ಮಣ್ಣನ್ನು ಪ್ರಧಾನಿ ನೆನಪಿಸಿಕೊಂಡಿದ್ದರು. ಸೇನೆಗೆ ಇಲ್ಲಿನ ಕೊಡುಗೆಯೂ ಗಣನೀಯವಾಗಿದ್ದು, ಮಾಜಿ ಸೈನಿಕರಿಗೆ ಸೈನಿಕ ಮಂಡಳಿಯಿಂದ ಆರೋಗ್ಯ, ಶಿಕ್ಷಣ, ಮನೆ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುವುದು.


ಮೊದಲು ದುಡ್ಡೇ ದೊಡ್ಟಪ್ಪ ಎನ್ನುವ ಮಾತಿತ್ತು. ಈಗ ದುಡಿಮೆಯೇ ದೊಡ್ಡಪ್ಪ ಎನ್ನುವುದಕ್ಕೆ ಮಹತ್ವ ಸಿಕ್ಕಿದೆ. ಹಾಗಾಗಿ ದುಡಿಮೆಗೆ ಮಹತ್ವ ಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಕರ್ನಾಟಕದ ಪ್ರಗತಿಯಲ್ಲಿ ಶ್ರೀಸಾಮಾನ್ಯನೂ ಬೆಳವಣಿಗೆ ಕಂಡಿದ್ದಾನೆ. ಎಲ್ಲರ ಜೀವನ ಹಸನುಗೊಳಿಸುವ ನಾನಾ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಸರ್ಕಾರ ಮತ್ತು ಜನರ ನಡುವಿನ ಸಂಬಂಧ ಮತ್ತಷ್ಟು ಉತ್ತಮಗೊಳ್ಳಲು ಈ ಫಲಾನುಭವಿಗಳ ಸಮಾವೇಶ ಆಯೋಜಿಸಲಾಗಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ೩೦ಕ್ಕೂ ಹೆಚ್ಚು ಉದ್ಘಾಟನೆಗಳು ಮತ್ತು ೧೫ ಕ್ಕೂ ಹೆಚ್ಚು ಶಂಕುಸ್ಥಾಪನಾ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಯ ಫಲಾನುಭವಿಗಳಿಗೆ ಇದೇ ವೇಳೆ ಸಾಂಕೇತಿಕವಾಗಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ಎಂ. ರವಿಕಾಳಪ್ಪ, ನಗರಸಭೆ ಅಧ್ಯಕ್ಷೆ ಎನ್.ಪಿ. ಅನಿತಾ, ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಎಸ್.ಪಿ. ಕೆ. ರಾಮರಾಜನ್, ಜಿ.ಪಂ. ಸಿಇಒ ಡಾ. ಆಕಾಶ್ ಎಸ್. ವೇದಿಕೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net