ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ

Pulse polio vaccine
ಬಾಗಲಕೋಟೆ ನಗರದ ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಲ್ಸ್ ಪೋಲೀಯೋ ಲಸಿಕಾ ಕಾರ್ಯಕ್ರಮದ ಕುರಿತು ಜಿಲ್ಲಾಮಟ್ಟದ ಕಾರ್ಯಪಡೆಯ ಸಮಿತಿ ಸಭೆಯಲ್ಲಿ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಸುವರ್ಣ ಕುಲಕರ್ಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಕುಮಾರ ಯರಗಲ್ಲ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಡಿ.ಬಿ. ಪಟ್ಟಣಶೆಟ್ಟಿ, ವಿಶ್ವ ಆರೋಗ್ಯ ಸಂಸ್ಥೆಯ ಡಾ. ಮುಕುಂದ ಗಲಗಲಿ ಇತರರಿದ್ದರು.
Published on

ಬಾಗಲಕೋಟೆ: ಜಿಲ್ಲೆಯಾದ್ಯಂತ ಮಾ. 3 ರಿಂದ ನಾಲ್ಕು ದಿನಗಳ ಕಾಲ ಪಲ್ಸ್ ಪೋಲೀಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಲ್ಸ್ ಪೋಲೀಯೋ ಲಸಿಕಾ ಕಾರ್ಯಕ್ರಮದ ಕುರಿತು ಜಿಲ್ಲಾಮಟ್ಟದ ಕಾರ್ಯಪಡೆ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪಲ್ಸ್ ಪೋಲೀಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮಾ.3 ರಂದು ಬೂತ್‌ಮಟ್ಟದಲ್ಲಿ ನಡೆಸಲಾಗುತ್ತಿದ್ದು, ನಂತರದ ಮೂರು ದಿನ ಮನೆ ಮನೆಗೆ ತೆರಳಿ ಪೋಲೀಯೋ ಲಸಿಕೆ ಹಾಕಲಾಗುತ್ತಿದೆ ಎಂದರು.

ಪೋಲೀಯೋ ಒಂದು ಮಾರಕ ರೋಗವಾಗಿದ್ದು, 5 ವರ್ಷದೊಳಗಿನ ಯಾವುದೇ ಮಗು ಈ ಕಾರ್ಯಕ್ರಮದಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಈ ಲಸಿಕಾ ಕಾರ್ಯಕ್ರಮಕ್ಕೆ ಗ್ರಾ.ಪಂ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಕಾಳಜಿ ವಹಿಸಿ, ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಲಸಿಕಾ ಕೇಂದ್ರಗಳಿಗೆ ಕರೆದುಕೊಂಡು ಬರತಕ್ಕದ್ದು. ನಗರ, ಸ್ಲಂ ಪ್ರದೇಶಗಳಲ್ಲಿ ವಿಶೇಷ ಗಮನ ಹರಿಸಬೇಕು. ಅಲ್ಲದೇ ಜಿಲ್ಲೆಯ ಕಬ್ಬು ಕಡೆಯುವ ಗ್ಯಾಂಗ್‌ನ ಮತ್ತು ಇಟ್ಟಂಗಿ ಬಟ್ಟಿಯಲ್ಲಿನ ಮಕ್ಕಳು ಸಹ ಲಸಿಕೆಯಿಂದ ವಂಚಿತರಾಗದಂತೆ ಕ್ರಮವಹಿಸಬೇಕು. ಸಂಘ ಸಂಸ್ಥೆಗಳ ಸಹಕಾರ ಪಡೆದು ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಪಾಲಕರು ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು ಎಂದರು ಮನವಿ ಮಾಡಿದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಸುವರ್ಣ ಕುಲಕರ್ಣಿ ಮಾತನಾಡಿ, ನಗರ ಪ್ರದೇಶದಲ್ಲಿ 76348 ಹಾಗೂ ಗ್ರಾಮೀಣ ಪ್ರದೇಶದಲ್ಲಿ 149661 ಸೇರಿ ಒಟ್ಟು 226009 ಮಕ್ಕಳಿದ್ದು, 418458 ಕುಟುಂಬಗಳಿವೆ. ಲಸಿಕಾ ಕಾರ್ಯಕ್ಕೆ ಒಟ್ಟು 1302 ಬೂತ್‌ಗಳನ್ನು ಸ್ಥಾಪಿಸಲಾಗಿದೆ. ಅಲ್ಲದೇ 80 ಮೊಬೈಲ್ ಟೀಮ್‌ಗಳನ್ನೂ ಕೂಡ ಸ್ಥಾಪಿಸಲಾಗಿದೆ. ಪ್ರತಿ ಬೂತ್‌ಗೆ ಇಬ್ಬರು ಸದಸ್ಯರು, ಐದು ತಂಡಕ್ಕೆ ಒಬ್ಬ ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದು, ಪ್ರತಿ ಬೂತ್ ಮಟ್ಟದ ವ್ಯಾಪ್ತಿಯಲ್ಲಿ ಬರುವ ಮನೆಗಳಿಗೆ ತೆರಳಿ ತಪ್ಪದೇ ಪೋಲೀಯೋ ಹನಿ ಹಾಕಲಿದ್ದಾರೆ ಎಂದರು.

ಲಸಿಕಾ ಕಾರ್ಯಕ್ರಮಕ್ಕೆ 2842 ಸಿಬ್ಬಂದಿಗಳು, 263 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಬಾಗಲಕೋಟೆ 40266, ಬಾದಾಮಿ, 40946, ಬೀಳಗಿ 23136, ಹುನಗುಂದ 43256, ಮುಧೋಳ 49592 ಹಾಗೂ ಜಮಖಂಡಿ 76352 ಸೇರಿ ಜಿಲ್ಲೆಯಾದ್ಯಂತ ಒಟ್ಟು 273548 ಹನಿ ಪೋಲೀಯೋ ಹನಿ ಹಾಕಲಾಗುತ್ತದೆ. ಈ ಕಾರ್ಯಕ್ರಮಕ್ಕೆ 77 ವಾಹನಗಳು ಅವಶ್ಯವಿದ್ದು, ಈಗಾಗಲೇ 28 ಇಲಾಖೆ ವಾಹನಗಳಿದ್ದು, ಹೆಚ್ಚುವರಿ 49 ವಾಹನಗಳು ಅವಶ್ಯಕತೆ ಇದರುವುದಾಗಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಕುಮಾರ ಯರಗಲ್ಲ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಡಿ.ಬಿ. ಪಟ್ಟಣಶೆಟ್ಟಿ, ವಿಶ್ವ ಆರೋಗ್ಯ ಸಂಸ್ಥೆಯ ಡಾ. ಮುಕುಂದ ಗಲಗಲಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಕುಸುಮಾ ಮಾಗಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ದಯಾನಂದ ಕರೆನ್ನವರ, ರೋಟರಿ ಕ್ಲಬ್‌ನ ಪ್ರತಿನಿಧಿ ಪರಾಂಡೆ, ಚಿಕ್ಕ ಮಕ್ಕಳ ತಜ್ಞ ಡಾ. ರಮೇಶ ಪೋಳ, ಆಯಾ ತಾಲೂಕಾ ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net