

ಮಂಡ್ಯ: ಜಿಲ್ಲೆಯಲ್ಲಿ ಮಾ.3 ರಿಂದ 6 ರವರೆಗೆ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಯಶಸ್ವಿಗೆ ಎಲ್ಲರ ಸಹಕಾರ ಮುಖ್ಯ ಎಂದು ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್ ತಿಳಿಸಿದರು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಎಲ್ಲ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಜವಾಬ್ದಾರಿಯುತವಾಗಿ ನಿರ್ವಹಿಸಿ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ ಮಾತನಾಡಿ, ಪೋಲಿಯೋ ವೈರಾಣುಗಳು ನೀರು, ಆಹಾರದ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಲೋಳೆಯಿಂದ ಬಾಯಿ, ಮೂಗು ಮೂಲಕ ಹರಡಬಹುದು. ಅಲ್ಲದೆ ಸೋಂಕು ಪೀಡಿತ ರೋಗಿಯ ಸಾಮಿಪ್ಯದಿಂದಲೂ ಹರಡಬಹುದಾಗಿದೆ. ಪೋಲಿಯೋ ವೈರಾಣು ದೇಹಕ್ಕೆ ಪ್ರವೇಶವಾದ ಬಳಿಕ ರಕ್ತ, ರಕ್ತನಾಳಗಳ ಮೂಲಕ ಹರಡುತ್ತವೆ. ಹೆಚ್ಚು ವೃದ್ದಿಸಲಾರಂಭಿಸುತ್ತದೆ. ವೈರಾಣು ದೇಹ ಸೇರಿದ ಬಳಿಕ ಸಾಮಾನ್ಯವಾಗಿ 7-14 ದಿನಗಳಲ್ಲಿ ಜ್ವರ, ಬಳಲಿಕೆ, ತಲೆನೋವು, ವಾಂತಿ ಹಾಗೂ ಕೈಕಾಲು ನೋವು ಕಾಣಿಸಲಾರಂಭಿಸುತ್ತದೆ ಎಂದರು.
ಮಾ.3ರಂದು ಐದು ವರ್ಷದೊಳಗಿನ ಮಕ್ಕಳಿಗೆ ಎಲ್ಲ ಶಾಲೆಗಳಲ್ಲಿಯೂ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಲಾಗುವುದು. 4 ರಿಂದ 6 ವರೆಗೆ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಪಡೆಯದಿರುವ ಮಕ್ಕಳನ್ನು ಹುಡುಕಿ ಪೋಲಿಯೋ ಲಸಿಕೆ ನೀಡಲಾಗುವುದು. 2ರಂದು ಎಲ್ಲ ಶಾಲೆಗಳಲ್ಲಿಯೂ ಜಾಗೃತಿ ಜಾಥಾ ನಡೆಸಬೇಕು. ಯಾವುದೇ ಮಕ್ಕಳು ಪಲ್ಸ್ ಪೋಲಿಯೋ ಲಸಿಕೆಯಿಂದ ವಂಚಿತರಾಗಬಾರದು. ಅನಕ್ಷರಸ್ಥ ಕುಟುಂಬ, ಕೂಲಿ ಕಾರ್ಮಿಕರು ಹಾಗೂ ಸ್ಲಂ ಕುಟುಂಬಗಳನ್ನು ಹುಡುಕಿ ಅಲ್ಲಿರುವಂತಹ ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆಯನ್ನು ಹಾಕಬೇಕು ಎಂದರು.
ಇಲಿ ಜ್ವರ ರೋಗದ ಬಗ್ಗೆ ಮಾತನಾಡಿದ ಅವರು, ಇಲಿ ಜ್ವರವು ಸಾಮಾನ್ಯವಾಗಿ ಜ್ವರ, ಚಳಿ, ತಲೆನೋವು, ಮಾಂಸ ಖಂಡಗಳಲ್ಲಿ ನೋವು ಕಾಣಿಸಿಕೊಳ್ಳುವ ಲಕ್ಷಣ ಹೊಂದಿದೆ. ತೀವ್ರತರ ರೋಗಗಳಲ್ಲಿ ಜಾಂಡಿಸ್(ಕಾಮಾಲೆ) ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕಡಿಮೆ ಮೂತ್ರ ವಿಸರ್ಜನೆ ಹಾಗೂ ರಕ್ತ ಸ್ರಾವವಾಗುವುದು ರೋಗದ ಲಕ್ಷಣವಾಗಿದೆ. ಈ ರೋಗಕ್ಕೆ ಯಾವುದೇ ಲಸಿಕೆ ಇಲ್ಲ. ರೋಗ ದೃಢ ಪಟ್ಟಲ್ಲಿ ನಿರ್ದಿಷ್ಟ ಚಿಕಿತ್ಸೆ ಇದೆ. ರೋಗಲಕ್ಷಣಗಳು ಕಾಣಿಸಿದ ಮೊದಲ ಏಳು ದಿನದಲ್ಲಿ ಪಡೆದ ರಕ್ತದ ಸಿರೋಲಜಿಕಲ್ ಪರೀಕ್ಷೆಯಿಂದ ಹಾಗೂ ಲಕ್ಷಣ ಕಾಣಿಸಿದ 10 ದಿನದ ನಂತರ ಪಡೆದ ಮೂತ್ರದ ಪರೀಕ್ಷೆಯಿಂದ ರೋಗವನ್ನು ದೃಢೀಕರಿಸಬಹುದು ಎಂದು ವಿವರಿಸಿದರು.
ಸಭೆಯಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ರೋಟರಿ ಅಧ್ಯಕ್ಷೆ ಬಿ.ಎಸ್.ಅನುಪಮಾ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಮಂಗಳಾ, ಶಶಾಂಕ್ ಇತರರಿದ್ದರು.