ಶಿಕ್ಷಕನಿಗೆ ಪಲ್ಸರ್ ಬೈಕ್ ಗಿಫ್ಟ್

10sgr1
ಕಳೆದ 16 ವರ್ಷ ತಮ್ಮೂರಿನ ಶಾಲೆಯಲ್ಲಿ ಕಾರ್ಯನಿರ್ವಹಿಸಿದ ಶಿಕ್ಷಕನಿಗೆ ವಳೂರು ಗ್ರಾಮಸ್ಥರು ಕೊಟ್ಟ ಬೈಕ್ ಗಿಫ್ಟ್.
Published on

ಸಾಗರ: ಸರ್ಕಾರಿ ಶಾಲೆ ಎಂದರೆ ಅಸಡ್ಡೆಯ ಕಣ್ಣಿನಿಂದ ನೋಡುವವರ ಸಂಖ್ಯೆಯೇ ಹೆಚ್ಚು. ಮಲೆನಾಡಿನ ಅತ್ಯಂತ ಕುಗ್ರಾಮವಾದ ಸಾಗರ ತಾಲೂಕಿನ ವಳೂರು ಸರ್ಕಾರಿ ಶಾಲೆಯಲ್ಲಿ 16 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕ ಸಂತೋಷ್ ಕಾಂಚನ್ ವರ್ಗಾವಣೆಗೊಂಡಾಗ ಮೊನ್ನೆ ಅವರಿಗೆ ಊರಿನ ಜನರು, ಹಳೆಯ ವಿದ್ಯಾರ್ಥಿಗಳು, ಮಕ್ಕಳ ಪಾಲಕರು ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿ ಕೊಡುಗೆಯಾಗಿ ಬೈಕ್ ನೀಡಿ ಹೊಸ ಭಾಷ್ಯವನ್ನೇ ಬರೆದರು.
ಕೊಡಚಾದ್ರಿ ಶ್ರೇಣಿಯ ತಳಭಾಗದ ದಟ್ಟ ಕಾನನದ ಮಧ್ಯೆ ಇದೆ ವಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ರಾತ್ರಿಯಾಯಿತೆಂದರೆ ಕಾಡುಪ್ರಾಣಿಗಳ ಕೂಗು, ಸಂಚಾರ ಎಲ್ಲವೂ ಇಲ್ಲಿ ಸಾಮಾನ್ಯ. ಇಂತಹ ಶಾಲೆಯಲ್ಲಿ ಒಟ್ಟು 13 ವಿದ್ಯಾರ್ಥಿಗಳಿದ್ದಾರೆ. ಕಳೆದ 16 ವರ್ಷಗಳಲ್ಲಿ ಈ ಶಿಕ್ಷಕ ಸಂತೋಷ್ ಎಂದೂ ವರ್ಗವಣೆಗೆ ಅರ್ಜಿ ಸಲ್ಲಿಸಿದವರಲ್ಲ. ಕೌಟುಂಬಿಕ ಕಾರಣಕ್ಕಾಗಿ ಇತ್ತೀಚೆಗೆ ಕುಂದಾಪುರದ ವಾರಾಹಿ ಸರ್ಕಾರಿ ಶಾಲೆಗೆ ವರ್ಗಾವಣೆಯಾಗಿದ್ದಾರೆ. ಹೀಗೊಂದು ಬೀಳ್ಕೊಡುಗೆ ನಡೆಯುತ್ತದೆ ಎಂದು ಸಂತೋಷ್ ಅಂದುಕೊಂಡಿರಲಿಲ್ಲ.
ಸಭಾ ಕಾರ್ಯಕ್ರಮ ನಡೆಯುತ್ತಿದ್ದಾಗ ಹೊಸ ಪಲ್ಸರ್ ಬೈಕ್‌ಗೆ ಪೂಜೆ ಮಾಡಿ ಅದನ್ನು ಸಂತೋಷ್‌ಗೆ ಕೊಟ್ಟೇಬಿಟ್ಟರು. ಅವರ ಕುಟುಂಬದವರನ್ನು ಊರಿನ ಜನ, ಶಾಲೆಯ ಮಕ್ಕಳು ಬೈಕ್ ಮೇಲೆ ಕೂರಿಸಿ ಚಪ್ಪಾಳೆ ತಟ್ಟಿ ಸಂಭ್ರಮಿಸುವುದರ ಜತೆಗೆ ಆನಂದಬಾಷ್ಪವನ್ನೂ ಸುರಿಸಿದರು. ಸರ್ಕಾರಿ ಶಾಲೆಯ ಶಿಕ್ಷಕರ ಘನತೆ ಮತ್ತು ಸಂಬಂಧ ಇಲ್ಲಿ ವ್ಯಕ್ತಗೊಂಡಿತ್ತು. ಈ ಕ್ಷಣವನ್ನು ನೋಡಿದವರು ಮಂತ್ರಮುಗ್ಧರಾದರು.
ಕಾಡಿನ ಮಧ್ಯೆ ಇರುವ ಈ ಶಾಲೆಯಲ್ಲಿಯೇ ಉಳಿದು ರಾತ್ರಿಯೂ ಮಕ್ಕಳಿಗೆ ಪಾಠ ಮಾಡಿದ್ದಾರೆ. ಅವರ ವಾಸ್ತವ್ಯವೂ ಅಲ್ಲೇ. 24 ಗಂಟೆಯೂ ಮಕ್ಕಳಿಗೆ ಸಿಗುತ್ತಾರೆ. ಇದೊಂದು ಅತ್ಯಂತ ಹಿಂದುಳಿದ ಗ್ರಾಮ. ಕುಣಬಿ ಸಮುದಾಯದವರೇ ಇಲ್ಲಿ ಹೆಚ್ಚು. ಕೂಲಿ ಮಾಡಿ ಬದುಕು ಕಟ್ಟಿಕೊಳ್ಳಬೇಕಾದ ಇಲ್ಲಿಯ ಜನಕ್ಕೆ ಅಕ್ಷರ ಕಲಿಸುವುದೇ ಒಂದು ಸವಾಲು. ತಾಲೂಕು ಕೇಂದ್ರ ಸಾಗರದಿಂದ ಈ ಊರು ತಲುಪಬೇಕು ಎಂದರೆ ಸುಮಾರು 80 ಕಿಮೀ ಸಾಗಬೇಕು. ಶರಾವತಿ ಹಿನ್ನೀರು ದಾಟಿ ಹೋದರೆ 65 ಕಿಮೀ, ಹೊಸನಗರದಿಂದ 85 ಕಿಮೀ, ಕೊಲ್ಲೂರಿನಿಂದ 15 ಕಿಮೀ ಆಗುತ್ತದೆ. ಇಂತಹ ಪ್ರದೇಶದಲ್ಲಿ ಜೀವವನ್ನು ಕೈಯಲ್ಲಿ ಹಿಡಿದೇ ಬದುಕು ನಡೆಸಬೇಕು. ಇಂತಹ ದುರ್ಗಮ ಪ್ರದೇಶದಲ್ಲೇ ಇದ್ದುಕೊಂಡು ಕಾಂಚನ್ 2007ರಿಂದಲೂ ಶಾಲೆಯನ್ನು ಮುನ್ನಡೆಸಿರುವುದೇ ಒಂದು ಸಾಹಸ.
ಮುಂದುವರಿದ ರಾತ್ರಿ ವಾಸ್ತವ್ಯ: ಪ್ರಸ್ತುತ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ನಯನಾ ಅವರೂ ಶಾಲೆಯಲ್ಲೇ ವಾಸ್ತವ್ಯ ಮಾಡಿ ದಿನದ 24 ಗಂಟೆಯೂ ಮಕ್ಕಳಿಗೆ ಲಭ್ಯವಿದ್ದು ಪಾಠ ಮಾಡುತ್ತಾರೆ. ಒಂದು ಕಾಲದಲ್ಲಿ ಈ ಶಾಲೆಗೆ ವಿದ್ಯುತ್ ವ್ಯವಸ್ಥೆ ಇರಲಿಲ್ಲ, ಈಗ ಅದು ಲಭ್ಯವಾಗಿದೆ. ಸಂಜೆ ಶಾಲೆಯಿಂದ ಮನೆಗೆ ಹೋದ ಮಕ್ಕಳು ಊಟ ಮುಗಿಸಿ ಮತ್ತೆ ಶಾಲೆಗೆ ಬರುತ್ತಾರೆ. ಅಲ್ಲಿ ಶಿಕ್ಷಕಿ ನಯನಾ ಅವರು ಪಾಠ ಮಾಡಿ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.
ಬೇಕಿದೆ ವೈಫೈ ವ್ಯವಸ್ಥೆ: ಕರೊನಾ ಸಂದರ್ಭದಲ್ಲಿ ಎಲ್ಲ ಶಾಲೆಗಳಿಗೆ ವೈಫೈ ವ್ಯವಸ್ಥೆ ಮಾಡಲಾಯಿತು. ಆದರೆ ಈ ಸೌಲಭ್ಯದಿಂದ ವಳೂರು ಮತ್ತು ಮುರಳ್ಳಿ ಶಾಲೆಗಳು ದೂರ ಉಳಿದಿವೆ. ಇಲ್ಲಿ ಸಂಪರ್ಕ ವ್ಯವಸ್ಥೆ ಇಲ್ಲ. ಇದು ವಸತಿ ಶಾಲೆಯಾದರೆ ಸಮೀಪದ ಆವಿಗೆ, ಮುರಳ್ಳಿ, ಮರಾಠಿ, ಇಕ್ಕಿಬೀಳು ಮೊದಲಾದ ಊರಿನ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಅನುಕೂಲವಾಗುತ್ತದೆ. ಇಲ್ಲವಾದರೆ ಅವರು ಕೊಲ್ಲೂರಿಗೆ ತೆರಳಬೇಕಾಗುತ್ತದೆ. 2007ರಲ್ಲಿ ಗೋಪಾಲಕೃಷ್ಣ ಬೇಳೂರು ಶಾಸಕರಾಗಿದ್ದಾಗ ಇಲ್ಲಿಯೇ ಗ್ರಾಮ ವಾಸ್ತವ್ಯ ಮಾಡಿದ್ದರು. ಈಗ ಮತ್ತೆ ಶಾಸಕರಾದ ಬೇಳೂರು ಇಲ್ಲಿಗೆ ವೈಫೈ ವ್ಯವಸ್ಥೆ ಮತ್ತು ವಸತಿ ಶಾಲೆ ಮಾಡಿಕೊಡಬೇಕು ಎಂಬುದು ಜನತೆಯ ಒತ್ತಾಯ.
ಆಂಬುಲೆನ್ಸ್ ಆಗಿತ್ತು ಮೇಷ್ಟ್ರ ಬೈಕ್: ಶಿಕ್ಷಕ ಸಂತೋಷ್ ಕಾಂಚನ್ 16 ವರ್ಷಗಳಿಂದ ನಮ್ಮ ಊರಿನ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದವರು. ನಮ್ಮ ಊರಿನಲ್ಲಿ ಯಾವುದೇ ವಾಹನಗಳಿರಲ್ಲಿಲ್ಲ. ಆಗ ಶಿಕ್ಷಕ ಸಂತೋಷ್ ತಮ್ಮ ಬೈಕ್ ಮೂಲಕವೇ ಮಕ್ಕಳನ್ನು ಪ್ರತಿಭಾ ಕಾರಂಜಿಗೆ, ಯಾರಿಗಾದರೂ ಅನಾರೋಗ್ಯ ಉಂಟಾದರೆ ಗ್ರಾಮಸ್ಥರನ್ನು ಕರೆದೊಯ್ಯುಲು ಹಗಲು, ರಾತ್ರಿ ಎನ್ನದೆ ಬರುತ್ತಿದ್ದರು. ಸಮಸ್ಯೆಯಾಯಿತು ಎಂದರೆ ಶಿಕ್ಷಕರ ಬೈಕ್ ಆಂಬುಲೆನ್ಸ್‌ಗೆ ಮೊರೆ ಹೋಗುತ್ತಿದ್ದೆವು. ಅವರ ವಾಹನವನ್ನು ಬೈಕ್ ಆಂಬುಲೆನ್ಸ್ ಎಂದೇ ಕರೆಯಲಾಗುತ್ತಿತ್ತು ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಎಚ್.ಎನ್.ಮಂಜುನಾಥ್. ಅವರ ಸೇವೆಯನ್ನು ನಾವು ವರ್ಣಿಸಲು ಸಾಧ್ಯವಿಲ್ಲ. ಮಕ್ಕಳನ್ನು ಸರ್ಕಾರಿ ಶಾಲೆಗೆ ತಂದು ಅಕ್ಷರ ಕಲಿಸಿ ಉದ್ಧಾರ ಮಾಡಿದ ಇವರಿಗೆ ನಾವು ಕೊಟ್ಟ ಕೊಡುಗೆ ಏನೂ ದೊಡ್ಡದಲ್ಲ. ನಮ್ಮ ಊರು ಬಿಟ್ಟು ಬೇರೆಡೆ ಹೋಗುತ್ತಿದ್ದಾರೆ ಎನ್ನುವ ಬೇಸರ ನಮಗಿದೆ. ಆದರೆ ಅವರಿಗೆ ಸದಾ ಒಳ್ಳೆಯದಾಗಲಿ ಎಂದು ಹಾರೈಸಿದರು.
ಗಮನ ಸೆಳೆದಿದ್ದ ವಿಜಯವಾಣಿ: 2013ರಲ್ಲಿ ‘ವಿಜಯವಾಣಿ’ ಕಾನನದೊಳ್ ಶಾಲೆ ಶಾಲೆಯೊಳ್ ಶಿಕ್ಷಕ ಎನ್ನುವ ವಿಶೇಷ ಲೇಖನವನ್ನು ಶಿಕ್ಷಕರ ದಿನಾಚರಣೆಯೆಂದು ಪ್ರಕಟಿಸಿತ್ತು. ಅದರ ಫಲಶ್ರುತಿಯಾಗಿ ಆಗ ಶಾಲೆಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಂಪೌಂಡ್ ನಿರ್ಮಾಣ, ಕೆಲವು ಮೂಲ ಸೌಕರ್ಯಗಳನ್ನು ಸರ್ಕಾರ ಕಲ್ಪಿಸಿರುವುದು ಇಲ್ಲಿ ಉಲ್ಲೇಖನೀಯ.
ನಾನು ವಳೂರು ಶಾಲೆಯಲ್ಲಿ 16 ವರ್ಷ ಶಿಕ್ಷಕನಾಗಿ ಕೆಲಸ ಮಾಡಿದ್ದೇನೆ. ಕಳೆದ ವರ್ಷವೇ ನನಗೆ ವರ್ಗಾವಣೆ ಆಗಿತ್ತು. ಇಲ್ಲಿಯ ಮಕ್ಕಳ ಪ್ರೀತಿ, ಪಾಠದ ಸಮಸ್ಯೆ, ಗ್ರಾಮಸ್ಥರ ಒತ್ತಾಸೆ ಮೇಲೆ ಮುಂದುವರಿದೆ. ಈ ಊರನ್ನು ಬಿಟ್ಟುಹೋಗಲು ಸಾಧ್ಯವೇ ಇಲ್ಲ. ಆದರೆ ಕೌಟುಂಬಿಕ ಕಾರಣದಿಂದ ಕುಂದಾಪುರದ ವಾರಾಹಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ನನ್ನ ಕೆಲಸ ಆರಂಭಿಸಿದ್ದೇನೆ. ಈ ಊರಿನ ಮಕ್ಕಳು, ಪಾಲಕರು ನನ್ನನ್ನು ಕೋರಿದರೆ ಭಾನುವಾರವಾದರೂ ಬಂದು ಬೋಧನೆ ಮಾಡುತ್ತೇನೆ. ಊರಿನ ಮತ್ತು ಮಕ್ಕಳ ಋಣ ತೀರಿಸಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಸಂತೋಷ್ ಕಾಂಚನ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net