

ಹರಿಪ್ರಸಾದ್ ನಂದಳಿಕೆ ಕಾರ್ಕಳ
ರಾಷ್ಟ್ರೀಯ ಹೆದ್ದಾರಿ 169ರ ಕಾಮಗಾರಿಯ ಸಂದರ್ಭ ಕಡಿಯಲಾಗಿದ್ದ ಮರಗಳಿಗೆ ಪರ್ಯಾಯವಾಗಿ ಹೆದ್ದಾರಿಯುದ್ದಕೂ ಸಾಲು ಗಿಡಗಳನ್ನು ನೆಡಲು ಅರಣ್ಯ ಇಲಾಖೆ ಯೋಜನೆ ಸಿದ್ಧಪಡಿಸಿದ್ದು, ಕಡಿದ ಮರಗಳ ಬದಲಿಗೆ ಹತ್ತುಪಟ್ಟು ಹೆಚ್ಚು ಗಿಡಗಳನ್ನು ನೆಡಲಾಗುತ್ತಿದೆ.
ಸುಪ್ರೀಂ ಕೋರ್ಟ್ ಆದೇಶದ ಅನ್ವಯ, ಕಡಿದ ಮರಗಳ ಹತ್ತುಪಟ್ಟು ಹೆಚ್ಚು ಗಿಡಗಳು ನೆಡುವಂತೆ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಮತ್ತು ಪರಿಸರವಾದಿಗಳು ಹೆದ್ದಾರಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಸ್ಪಂದನೆ ರೂಪದಲ್ಲಿ ಅರಣ್ಯ ಇಲಾಖೆಯು ಕಾರ್ಕಳ ಹಾಗೂ ಮೂಡಬಿದಿರೆ ವಲಯ ವ್ಯಾಪ್ತಿಯ 10 ಕಿ.ಮೀ. ವ್ಯಾಪ್ತಿಯಲ್ಲಿ ಮೂರು ಸಾವಿರ ಗಿಡಗಳನ್ನು ನೆಡಲು ಮುಂದಾಗಿದೆ.
ಮೂರು ಸಾವಿರ ಗಿಡಗಳ ನಾಟಿ: ಕಾಮಗಾರಿ ಮುಗಿಯದ ಪ್ರದೇಶ, ಸರ್ವಿಸ್ ರೋಡ್ ಹಾಗೂ ವಿದ್ಯುತ್ ಲೈನ್‌ಗಳು ಹಾದುಹೋಗುವ ಸ್ಥಳಗಳನ್ನು ಹೊರತುಪಡಿಸಿದ ಪ್ರದೇಶದಲ್ಲಿ ಗಿಡಗಳ ನಾಟಿ ಕಾರ್ಯ ನಡೆಯಲಿದೆ. ಕಾರ್ಕಳ ವಲಯದ 3 ಕಿ.ಮೀ. ವ್ಯಾಪ್ತಿ ಹಾಗೂ ಮೂಡುಬಿದಿರೆ ವಲಯದ 7 ಕಿ.ಮೀ. ವ್ಯಾಪ್ತಿಯ ಹೆದ್ದಾರಿ ಬದಿಯಲ್ಲಿ ಗಿಡಗಳನ್ನು ನಡೆಲಾಗುತ್ತದೆ. ಪ್ರತೀ ಕಿಲೋ ಮೀಟರ್‌ಗೆ ಎರಡೂ ಬದಿಗಳಲ್ಲಿ ಗಿಡ ನೆಡುವುದಕ್ಕಾಗಿ ಅರಣ್ಯ ಇಲಾಖೆಗೆ ಈಗಾಗಲೇ 3 ಲಕ್ಷ ರೂ. ಪಾವತಿಸಿದ್ದು, ಈ ಮೊತ್ತದಲ್ಲಿ ಮೂರು ಸಾವಿರ ಗಿಡಗಳ ನಾಟಿ ಕಾರ್ಯ ನಡೆಯಲಿದೆ.
ಸಾವಿರಾರು ಮರಗಳ ನಾಶ: ಕಾರ್ಕಳ ತಾಲೂಕಿನ ಸಾಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಲ್ಕೇರಿ ಬೈಪಾಸ್ ಸರ್ಕಲ್‌ನಿಂದ ಮಂಗಳೂರಿನ ಬಿಕರ್ನಕಟ್ಟೆಯವರೆಗೆ 45 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಗಾಗಿ ರಸ್ತೆಯ ಎರಡು ಬದಿಗಳಲ್ಲಿದ್ದ ಸಾವಿರಾರು ಮರಗಳನ್ನು ಅರಣ್ಯ ಇಲಾಖೆ ಮೂಲಕ ರಾಷ್ಟ್ರೀಯ ಹೆದ್ದಾರಿ ಇಲಾಖೆ ಕಡಿದಿತ್ತು. ಇದೀಗ ಪರ್ಯಾಯವಾಗಿ ಗಿಡಗಳ ನಾಟಿ ಕಾರ್ಯ ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಹಾಗೂ ಪರಿಸರ ಪ್ರಿಯರಲ್ಲಿ ಸಂತಸ ಮೂಡಿಸಿದೆ.
ಈಗಾಗಲೇ ಮೀಸಲು ಅರಣ್ಯ ಪ್ರದೇಶದಲ್ಲಿ ಜಾಗವನ್ನೂ ಕಾದಿರಿಸಲಾಗಿದೆ. ಮೂಡಬಿದಿರೆ, ಕಾರ್ಕಳದ ಹೆರ್ಮುಂಡೆ ಹಾಗೂ ಹೆಬ್ರಿಯ ಅರಣ್ಯ ಪ್ರದೇಶದಲ್ಲಿ ಪಶು ಪಕ್ಷಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಹಲಸು, ವಾವು, ನೇರಳೆ, ಹೆಬ್ಬಲಸು ಸಹಿತ ಹಲವು ಹಣ್ಣಿನ ಸಸಿಗಳನ್ನು ನೆಡಲು ಅರಣ್ಯ ಇಲಾಖೆ ಸಿದ್ಧತೆ ನಡೆಸುತ್ತಿದೆ.
ಹೆದ್ದಾರಿ ಅಧಿಕಾರಿಗಳು ಹಾಗೂ ಹೋರಾಟ ಸಮಿತಿ, ಸಾರ್ವಜನಿಕರ ಜತೆ ವಾತುಕತೆ ನಡೆಸಿ ಸಾಣೂರು ಭಾಗದಿಂದ 10ಕಿ.ಮೀ ವ್ಯಾಪ್ತಿಯಲ್ಲಿ 3 ಸಾವಿರ ಗಿಡಗಳನ್ನು ನೆಡುವ ಯೋಜನೆ ರೂಪಿಸಲಾಗಿದೆ. ಕಡಿದ ಮರಗಳ ಬದಲಿಗೆ ಸಸಿಗಳನ್ನು ನೆಡಲಾಗುತ್ತಿದ್ದು, ಚೀಂಕ್ರಮಲೈ ಅರಣ್ಯ ವಲಯದಲ್ಲಿ ಈಗಾಗಲೇ 7 ಎಕರೆ ಜಾಗದಲ್ಲಿ ಸುವಾರು ಅರ್ಧದಷ್ಟು ಪ್ಲಾಂಟೇಶನ್ ಕಾರ್ಯ ಮುಗಿದಿದೆ. ಮುಂದಿನ ದಿನಗಳಲ್ಲಿ ಕಾರ್ಕಳ, ಹೆಬ್ರಿ, ಮೂಡುಬಿದಿರೆ ವಲಯದಲ್ಲಿ ಮತ್ತಷ್ಟು ಸಸಿಗಳನ್ನು ನೆಡಲಾಗುತ್ತದೆ. ಶ್ರೀಧರ್, ಎಸಿಎಫ್, ಮೂಡಬಿದಿರೆ ವಲಯ. ಕಾಲ ಕಾಲಕ್ಕೆ ಇಲಾಖೆ ಮತ್ತು ಸಾರ್ವಜನಿಕರ ಸಹಭಾಗಿತ್ವದ ಜಂಟಿ ಸರ್ವೆ ನಡೆಸಿ ನೆಟ್ಟ ಗಿಡಗಳು ಮತ್ತು ಬೆಳೆಯುತ್ತಿರುವ ಮರಗಳ ಟ್ರೀ ಆಡಿಟ್ ನಡೆಸಬೇಕು. ಹೆದ್ದಾರಿ ಬದಿಗಳಲ್ಲಿ ಸಾಲು ಮರಗಳು ಬೆಳೆದು ಪ್ರಕೃತಿ ಸೌಂದರ್ಯ ಹೆಚ್ಚುತ್ತದೆ. ಸಾಣೂರು ನರಸಿಂಹ ಕಾಮತ್, ಸಾಣೂರು ಗ್ರಾ.ಪಂ ವಾಜಿ ಅಧ್ಯಕ್ಷ. https://www.vijayavani.net/installation-of-the-brahmabaidarkala-statue-in-marali-area https://www.vijayavani.net/its-important-to-stay-active-even-after-retirement