

ತರೀಕೆರೆ: ಲಕ್ಕವಳ್ಳಿ ಭದ್ರಾ ಜಲಾಶಯ ಸಮೀಪದ ಶ್ರೀ ಶನೈಶ್ವರ ಸ್ವಾಮಿ ದೇಗುಲದ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದ್ದು, ಗ್ರಾಮಸ್ಥರು ನೂತನವಾಗಿ ಪ್ರತಿಷ್ಟಾಪಿಸಲು ಚಿಂತಿಸಿರುವ ಶ್ರೀಶನೈಶ್ವರ ಸ್ವಾಮಿಯವರ 32 ಅಡಿ ಎತ್ತರದ ಮೂರ್ತಿ ಸ್ಥಾಪನೆ ಸಲುವಾಗಿ ಕೊಪ್ಪಳ ತಾಲೂಕು ಅಂಜನಾದ್ರಿ ಬೆಟ್ಟದಿಂದ ವಾಹನದ ಮೂಲಕ ಭಾರಿ ಗಾತ್ರದ ಏಕಶಿಲೆಯನ್ನು ಹೊತ್ತು ತರಲಾಯಿತು.
ಶುಕ್ರವಾರ ಬೆಳಗ್ಗೆ ಲಕ್ಕವಳ್ಳಿ ಗ್ರಾಮ ಪ್ರವೇಶಿಸಿದ ಏಕಶಿಲೆ ಹೊತ್ತು ತಂದ ವಾಹನವನ್ನು ಗ್ರಾಪಂ ಆಡಳಿತದ ಜತೆ ಗ್ರಾಮಸ್ಥರು ವಾದ್ಯಗೋಷ್ಠಿಯೊಂದಿಗೆ ಬರ ಮಾಡಿಕೊಂಡು ವಿಶೇಷ ಪೂಜೆ ಸಲ್ಲಿಸಿದರು. ತಾಪಂ ಮಾಜಿ ಅಧ್ಯಕ್ಷೆ ಪದ್ಮಾವತಿ, ಗ್ರಾಪಂ ಅಧ್ಯಕ್ಷ ಅಬ್ದುಲ್ ರೆಹಮಾನ್, ಉಪಾಧ್ಯಕ್ಷೆ ನಿರ್ಮಲ, ಸದಸ್ಯರಾದ ಫಣಿರಾಜು ಜೈನ್, ಶ್ವೇತಾ, ಕಿರಣ್, ದೇವರಾಜ್, ಭವಾನಿ, ಶಿವಕಿರಣ್, ದೇಗುಲ ಜೀರ್ಣೋದ್ಧಾರ ಸಮಿತಿ ನಿರ್ದೇಶಕರಾದ ಎಲ್.ಟಿ.ಹೇಮಣ್ಣ, ಶ್ರೀನಿವಾಸ್, ಸುರೇಶ್, ರಾಜಶೇಖರ್, ಹರೀಶ್, ಬಾಲರಾಜು, ಪಿಎಸಿಎಸ್ ಅಧ್ಯಕ್ಷ ಎಲ್.ಎಸ್.ಸಂಜೀವ್‌ಕುಮಾರ್ ಮತ್ತಿತರರಿದ್ದರು.