

ಹೊನ್ನಾವರ: ದೆಹಲಿಯ ಕರ್ತವ್ಯ ಪಥದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಮೃತವನ ನಿರ್ಮಾಣಕ್ಕೆ ಹೊನ್ನಾವರ ತಾಲೂಕಿನ ಪುಣ್ಯಸ್ಥಳದ ಮಣ್ಣು ಬಳಸಲಾಗುವುದು ಎಂದು ಬಿಜೆಪಿ ಹೊನ್ನಾವರ ಮಂಡಲದ ಅಧ್ಯಕ್ಷ ರಾಜೇಶ ಭಂಡಾರಿ ಹೇಳಿದರು.
ಪಟ್ಟಣದ ಶ್ರೀ ದಂಡಿನ ದುರ್ಗಾ ದೇವಿ ದೇವಸ್ಥಾನದಲ್ಲಿ ಬಿಜೆಪಿ ಹೊನ್ನಾವರ ಮಂಡಲದ ವತಿಯಿಂದ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನದ ರಥಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ರಥವು ಎರಡು ದಿನಗಳವರೆಗೆ ತಾಲೂಕಿನ ವಿವಿಧ ಭಾಗಗಳಲ್ಲಿ ಸಂಚರಿಸಿ ಪುಣ್ಯ ಸ್ಥಳಗಳಿಂದ, ನಿವೃತ್ತ ಯೋಧರ ಮನೆಗಳಿಂದ, ಪ್ರಮುಖ ದೇವಸ್ಥಾನಗಳಿಂದ ಮಣ್ಣು ಸಂಗ್ರಹಿಸಿ ಅಮೃತವನಕ್ಕೆ ಕಳಿಸಲಾಗುವುದು ಎಂದರು.
ಮಂಡಲದ ಪ್ರಧಾನ ಕಾರ್ಯದರ್ಶಿ ಸುರೇಶ ಹರಿಕಾಂತ, ಕಾರ್ಯಕ್ರಮದ ಸಂಚಾಲಕರಾದ ಬಿ.ಟಿ. ನಾಯ್ಕ, ಯೋಗೇಶ ಮೇಸ್ತ, ಜಿಲ್ಲಾ ಉಪಾಧ್ಯಕ್ಷೆ ಭಾಗ್ಯಾ ಲೋಕೇಶ, ಜಿಲ್ಲಾ ಕಾರ್ಯದರ್ಶಿ ವಿನೋದ ನಾಯ್ಕ, ವಿಜಯ ಕಾಮತ, ನಿಶಾ ಶೇಟ್, ಜಿ.ಜಿ. ಶಂಕರ, ಗಣೇಶ ಪೈ, ಎಂ.ಎಸ್. ಹೆಗಡೆ, ಗಣೇಶ ಸಾರಂಗ, ಉಮೇಶ ಸಾರಂಗ, ಹರೀಶ್ಚಂದ್ರ ನಾಯ್ಕ, ದಿನೇಶ ಶೇಟ್, ರವಿ ನಾಯ್ಕ, ಲೋಕೇಶ ಮೇಸ್ತ ಉಪಸ್ಥಿತರಿದ್ದರು.