

ಗೋಕರ್ಣ: ಮಂಗಳವಾರ ರಥಸಪ್ತಮಿ ಪರ್ವ ದಿನದಂದು ಶ್ರೀ ಮಹಾಬಲೇಶ್ವರ ಮಹಾರಥಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಹಾರಥೋತ್ಸವದ ಯಶಸ್ಸಿಗೆ ವೇದೋಕ್ತ ಪ್ರಾರ್ಥನೆ ಸಲ್ಲಿಸಲಾಯಿತು.
ನಂತರ ಸೇರಿದ್ದ ಅಪಾರ ಭಕ್ತರು ಸ್ವಸ್ಥಾನ ರಥದ ಮನೆಯಿಂದ ಮಹಾರಥವನ್ನು ಸಂಭ್ರಮದಿಂದ ಎಳೆದು ಹೊರಕ್ಕೆ ತಂದರು. ಕ್ಷೇತ್ರದ ಪರಂಪರೆಯಂತೆ ಮಹಾಶಿವರಾತ್ರಿ ಉತ್ಸವದಲ್ಲಿ ಎಳೆಯಲಾಗುವ ಅತ್ಯಂತ ಎತ್ತರದ ಮಹಾರಥದ ಕಟ್ಟೋಣ ಕಾರ್ಯದ ಶುಭಾರಂಭವನ್ನು ರಥ ಸಪ್ತಮಿಯಂದು ಪ್ರಾರಂಭಿಸಲಾಗುತ್ತದೆ. ಈ ವೇಳೆ ಕ್ಷೇತ್ರದ ಪದ್ಧತಿಯಂತೆ ಮಂದಿರದ ಪ್ರಧಾನ ಅರ್ಚಕರು, ಉಪಾಧಿವಂತ ವೈದಿಕರು, ಮಂದಿರ ಮೇಲುಸ್ತುವಾರಿ ಸಮಿತಿಯ ಸದಸ್ಯರು, ಹಾಲಕ್ಕಿ ಒಕ್ಕಲಿಗರು, ವಿಶ್ವಕರ್ಮರು, ಮೀನುಗಾರ ಸಮಾಜದ ಗಾಬೀತ ಮತ್ತು ಖಾರ್ವಿ ಸಮಾಜದವರು ತಮ್ಮ ತಮ್ಮ ಪರಂಪರಾಗತ ಸೇವಾ ಕರ್ತವ್ಯಗಳನ್ನು ನಿಭಾಯಿಸಿದರು.
ವಾರ್ಷಿಕ ಶ್ರೀ ಮಹಾಬಲೇಶ್ವರ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಫೆ.21ರಂದು ಪ್ರಾರಂಭವಾಗುವುದು. ಫೆ. 26ರಂದು ಮಹಾಶಿವರಾತ್ರಿ ಜಾಗರಣೆ, ಫೆ.27ರಂದು ಮಾಘ ಮಹಾ ಅಮಾವಾಸ್ಯೆ ಕಾರ್ಯಕ್ರಮ ನಡೆಯುವುದು. ಫೆ.28ರಂದು ಮಧ್ಯಾಹ್ನ 2.30ರ ವೇಳೆಗೆ ಶ್ರೀ ಮಹಾಬಲೇಶ್ವರ ಮಹಾರಥೋತ್ಸವ ಸಂಪನ್ನವಾಗುವುದು.