

ಕುಶಾಲನಗರ:
ಕುಶಾಲನಗರ-ಕೊಪ್ಪ ಗಡಿಯಲ್ಲಿ ಕಾವೇರಿ ನದಿ ದಂಡೆಯಲ್ಲಿನ ಕಾವೇರಿ ಮಾತೆಗೆ ತುಲಾಸಂಕ್ರಮಣದ ಅಂಗವಾಗಿ ಇಲ್ಲಿನ ಬಾರವಿ ಕನ್ನಡ ಸಂಘದ ವತಿಯಿಂದ ಶುಕ್ರವಾರ ವಿಶೇಷ ಅಲಂಕಾರ ಮತ್ತು ಮಹಾಪೂಜೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಸುತ್ತಮುತ್ತಲಿನ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಸೇರಿದ್ದು, ಎಲ್ಲರಿಗೂ ಪ್ರತೀ ವರ್ಷದಂತೆ ಈ ವರ್ಷವೂ ಕಾವೇರಿ ತೀರ್ಥ ವಿತರಿಸಿ ಅನ್ನದಾನ ನೆರವೇರಿಸಲಾಯಿತು.
ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ, ಎಸ್‌ಎಲ್‌ಎನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಾತಪ್ಪನ್ ಮತ್ತಿತರರು ಭಾಗಿಯಾಗಿ ಪೂಜೆ ಸಲ್ಲಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಬಾರವಿ ಸಹೋದರರು, ಕೊಡಗಿನ ಕುಲದೈವ ಕಾವೇರಿ ಸಂಕ್ರಮಣದ ಅಂಗವಾಗಿ ಪ್ರತೀ ವರ್ಷದಂತೆ ಈ ವರ್ಷವೂ ಕೊಡಗು ಮತ್ತು ಮೈಸೂರು ಜಿಲ್ಲೆಯ ಭಕ್ತರಿಗೆ ಹತ್ತು ಸಾವಿರ ಬಾಟಲಿಗಳಷ್ಟು ಕಾವೇರಿ ತೀರ್ಥ ವಿತರಿಸಲಾಗಿದೆ. ಸಮಾರು 8 ಸಾವಿರ ಜರಿಗೆ ಅನ್ನದಾನ ಕಾರ್ಯ ಭಕ್ತರ ನೆರವಿನಿಂದ ಮಾಡಲಾಗಿದೆ. ನಾಡಿನಾದ್ಯಂತ ಉತ್ತಮ ಮಳೆ ಬೆಳೆಯಾಗಿ ನಾಡು ಸಮೃದ್ಧವಾಗಲೆಂದು ಮಹಾತಾಯಿ ಕಾವೇರಿಯಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಲಾಯಿತು ಎಂದರು.
ರವಿಚಂದ್ರನ್ ಕನ್ನಡ ಸಂಘದ ಪದಾಧಿಕಾರಿಗಳಾದ ವಿಜೇಂದ್ರಪ್ರಸಾದ್, ರವೀಂದ್ರ ಪ್ರಸಾದ್, ಬಬೀಂದ್ರಪ್ರಸಾದ್, ಕಾವೇರಿ ಮಹಾ ಆರತಿ ಬಳಗದ ಸಂಚಾಲಕ ಎಂ.ಎನ್. ಚಂದ್ರಮೋಹನ್,
ಗಣಪತಿ ದೇವಾಲಯ ಸಮಿತಿಯ ಚಂದ್ರು, ತಾ.ಪಂ. ಮಾಜಿ ಸದಸ್ಯ ಮಹದೇವ್, ಅಡುಗೆ ರುದ್ರ,
ಮೊದಲಾದವರಿದ್ದರು.
ಅರ್ಚಕ ಕೃಷ್ಣಮೂರ್ತಿ ಭಟ್ ಪೂಜಾ ವಿದಿ-ವಿಧಾನ ನಡೆಸಿಕೊಟ್ಟರು.