

ಗೊಳಸಂಗಿ: ಉತ್ತರ ಕರ್ನಾಟಕದ ಜೀವನಾಡಿ ಕೃಷ್ಣಾ ನದಿ ಉಗಮ ಸ್ಥಾನ ಮಹಾರಾಷ್ಟ್ರದ ಪಂಚಗಂಗಾ ಕ್ಷೇತ್ರದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ನೂರಾರು ರೈತರು ಜು.21 ರಂದು ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಿದ್ದಾರೆ.
ಪ್ರತಿವರ್ಷ ಕಡ್ಲಿಗರ ಹುಣ್ಣಿಮೆ ದಿನ ಬೆಳ್ಳುಬ್ಬಿ ದಂಪತಿ ಈ ಭಾಗದ ಕೃಷಿಕರೊಂದಿಗೆ ಮಹಾಬಲೇಶ್ವರಕ್ಕೆ ತೆರಳಿ ಕೃಷ್ಣೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುವ ಪದ್ಧತಿಯನ್ನು 15 ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದಾರೆ.
ಕೃಷ್ಣೆಗೆ ಪೂಜೆ ಸಲ್ಲಿಸಲು ಮಹಾಬಲೇಶ್ವರಕ್ಕೆ ಬರಲು ಆಸಕ್ತಿ ಇರುವ ವಿಜಯಪುರ-ಬಾಗಲಕೋಟೆ ಜಿಲ್ಲೆಗಳ ರೈತರು ಜು.20 ರಂದು ಬೆಳಗ್ಗೆ 11 ಗಂಟೆಗೆ ವಿಜಯಪುರದ ಅಥಣಿ ರಸ್ತೆಯಲ್ಲಿರುವ ಪ್ರವಾಸಿ ಮಂದಿರಕ್ಕೆ ಆಗಮಿಸಬೇಕು. ಅಲ್ಲಿಂದ ಮಧ್ಯಾಹ್ನ 12 ಗಂಟೆಗೆ ತಿಕೋಟಾ, ಬಾಬಾನಗರ, ಬಿಜ್ಜರಗಿ, ಕನಮಡಿ, ಜತ್ತ, ಕರಾಡ ಮೂಲಕ ಸಾತಾರ ನಗರ ತಲುಪಿ ಹಳೆಯ ಕೊಲ್ಹಾಪುರ ರಸ್ತೆಯ ಗುಡೋಲಿ ಬಳಿ ಇರುವ ಶಿವರಾಜ್ ಪೆಟ್ರೋಲ್ ಬಂಕ್ ಹತ್ತಿರದ ಅಕ್ಷತಾ ಮಂಗಲ ಭವನದಲ್ಲಿ ರಾತ್ರಿ ವಾಸ್ತವ್ಯ ಮಾಡಲಾಗುತ್ತದೆ.
21 ರಂದು ಬೆಳಗ್ಗೆ 6 ಗಂಟೆಗೆ ಗುರು ಪೂರ್ಣಿಮೆಯಂದು ಸಾತಾರದಿಂದ ಮಹಾಬಲೇಶ್ವರದ ಪಂಚಗಂಗಾ ಸನ್ನಿಧಿಗೆ ತೆರಳಿ 10 ಗಂಟೆಗೆ ಕೃಷ್ಣೆಯ ಉಗಮ ಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ವಿವಿಧ ಸ್ವಾಮೀಜಿಗಳು, ಸಾತಾರ ಶಾಸಕ, ಸಂಸದರು ಸೇರಿ ಹಲವು ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಮಹಾಬಲೇಶ್ವರಕ್ಕೆ ಆಗಮಿಸಲು ಅಪೇಕ್ಷಿಸುವ ರೈತರು ಆನಂದ ಬಿಸ್ಟಗೊಂಡ (ಮೊ.9845769 528), ವಿಜಯ ಬಾಟಿ (6360077801) ಮತ್ತು ಸಾತಾರದಲ್ಲಿ ರಮೇಶ ಕುಂಬಾರ (9922815920) ಅವರನ್ನು ಸಂಪರ್ಕಿಸಬೇಕೆಂದು ರೈತ ಮುಖಂಡ ಅಮರೇಶಗೌಡ ಪಾಟೀಲ ತಿಳಿಸಿದ್ದಾರೆ.