

ಹೊಸದುರ್ಗ: ಪಟ್ಟಣದ ಕೋಟೆ ಈಶ್ವರಸ್ವಾಮಿ ದೇಗುಲದಲ್ಲಿ ಸೋಮವಾರ ಶ್ರಾವಣ ಕೊನೆಯ ಸೋಮವಾರ ಶಿವಪ್ರಿಯಾ ಸೇವಾ ಸಮಿತಿ ವತಿಯಿಂದ ವಿಶೇಷ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭಕ್ತರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು. ಮೂಲ ಈಶ್ವರಲಿಂಗಕ್ಕೆ ಮಹಾ ರುದ್ರಾಭಿಷೇಕ ನೆರವೇರಿಸಲಾಯಿತು.
ಪುಣ್ಯಾಹಃ, ಸ್ವಸ್ತಿ ವಾಚನ, ರುದ್ರ ಪಠಣ, ಶಿವಾಷ್ಟೋತ್ತರ, ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಮಹಾಮಂಗಳಾರತಿ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಈಶ್ವರ ಸ್ವಾಮಿಗೆ ವಿವಿಧ ಹೂವುಗಳು, ಹೂಮಾಲೆಗಳನ್ನು ಬಳಸಿ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ದುಂಡು ಮಲ್ಲಿಗೆ ಮಗ್ಗುಗಳನ್ನು ಬಳಸಿ ಮಾಡಲಾಗಿದ್ದ ಅಭರಣಗಳು ಗಮನ ಸೆಳೆದವು. ದೇವಾಲಯವನ್ನು ಸಂಪೂರ್ಣವಾಗಿ ಹೂವಿನ ಮಾಲೆಗಳಿಂದ ಅಲಂಕರಿಸಲಾಗಿತ್ತು.
ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪ್ರಧಾನ ಅರ್ಚಕ ಕರಿಸಿದ್ದಯ್ಯ ಇತರರು ಇದ್ದರು.