

ಮೈಸೂರು: ಶಾಲಾ ಮತ್ತು ಕಾಲೇಜಿನ ಪಠ್ಯದಲ್ಲಿನ ಕಥೆ, ಕಾವ್ಯ, ಕಾದಂಬರಿ, ನಾಟಕಗಳನ್ನು ದೃಶ್ಯ ರೂಪಕ್ಕಿಳಿಸಿ ವಿದ್ಯಾರ್ಥಿಗಳಿಗೆ ತಲುಪಿಸುವುದರಿಂದ ಕಲಿಕೆ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂದು ದಕ್ಷಿಣ ವಲಯದ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಅಧೀಕ್ಷಕ ಡಾ.ಎ.ಎನ್. ಪ್ರಕಾಶ್‌ಗೌಡ ಅಭಿಪ್ರಾಯಪಟ್ಟರು.
ಅದಮ್ಯ ರಂಗಶಾಲೆ ಹಾಗೂ ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ನಗರದ ಹೂಟಗಳ್ಳಿಯ ದಕ್ಷ ಪಿಯು ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಪಿಯುಸಿ ಪಠ್ಯಾಧಾರಿತ ರಂಗ ಪ್ರದರ್ಶನ ಮತ್ತು ಸಮಾರೋಪ’ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಿದ್ಯಾಭ್ಯಾಸದ ಕಾಲದಲ್ಲಿ ಜ್ಞಾನಾರ್ಜನೆಯಷ್ಟೇ ಸಾಹಿತ್ಯ ಮತ್ತು ಸಂಸ್ಕೃತಿಯೂ ಮುಖ್ಯ. ಸಾಹಿತ್ಯದಲ್ಲಿ ಬದುಕಿಗೆ ಬೇಕಾದ ಒಳ್ಳೆಯ ವಿಚಾರಗಳಿರುತ್ತವೆ. ವಿದ್ಯಾರ್ಥಿಗಳು ಇಂತಹ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಂಗಾಭಿನಯದಿಂದ ಉತ್ತಮ ಆಲೋಚನೆಯೊಂದಿಗೆ ನಿರರ್ಗಳ ಮಾತುಗಾರಿಕೆಯ ಕಲೆ ಬೆಳೆಯುತ್ತದೆ. ಇದು ಪರೀಕ್ಷೆಯ ದೃಷ್ಟಿಯಿಂದಲೂ ಸಹ ಅನುಕೂಲವಾಗುತ್ತದೆ ಎಂದರು.
ತಮ್ಮ ಮಕ್ಕಳು ಚೆನ್ನಾಗಿ ಓದಲೆಂದು ತಂದೆ-ತಾಯಿ ಸವಲತ್ತು ಕಲ್ಪಿಸುತ್ತಾರೆ. ಹೆತ್ತವರ ಕನಸು ಮತ್ತು ನಿರೀಕ್ಷೆಗಳಿಗೆ ಪೂರವಾಗಿ ಯೋಜಿತವಾಗಿ ಓದಬೇಕು. ಅವರಿಗೆ ನಿರಾಸೆ ಮಾಡಬಾರದು. ಹೆತ್ತವರಿಗೆ ಗೌರವ ಕೊಡುವುದೇ ಅವರಿಗೆ ನೀಡುವ ನಿಜವಾದ ಉಡುಗೊರೆ. ಪರಿಶ್ರಮದಿಂದ ಓದಿ ಉತ್ತಮ ಅಧಿಕಾರಿ ಅಥವಾ ನೌಕರರಾಗಿ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ ಮಾತನಾಡಿ, ಯಾವಾಗಲೂ ಗ್ರಾಮೀಣ ವಿದ್ಯಾರ್ಥಿಗಳೇ ಹೆಚ್ಚು ಸಾಧನೆ ಮಾಡುವುದು. ಸಣ್ಣ ಹಿಡುವಳಿದಾರರು, ರೈತರ ಮಕ್ಕಳೇ ಉನ್ನತ ಅಧಿಕಾರಿಗಳಾಗಿ ಹೊರಹೊಮ್ಮುತ್ತಾರೆ. ಇಂದಿನ ಬಹುತೇಕ ಎಲ್ಲ ಅಧಿಕಾರಿಗಳು ಬಡ ಮತ್ತು ಮಧ್ಯಮ ವರ್ಗದಿಂದ ಬಂದವರು. ಅದರಲ್ಲೂ ಗ್ರಾಮೀಣ ಪ್ರದೇಶದವರು ಎಂಬುದು ವಿಶೇಷ ಎಂದರು.
ವಿದ್ಯಾರ್ಥಿ ಜೀವನದಲ್ಲಿ ತುಂಬಾ ಸಮಯ ಇರುತ್ತದೆ. ಸದುಪಯೋಗ ಮಾಡಿಕೊಳ್ಳುವ ಜತೆಗೆ ಕೆಟ್ಟ ಹವ್ಯಾಸಗಳ ತೊರೆದು ದೈಹಿಕ ಮತ್ತು ಮಾನಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ಚಿತ್ರನಟರ ಆದರ್ಶವಾಗಿ ಸ್ವೀಕರಿಸುವ ಬದಲು ಸಾಧಕರನ್ನು ಆದರ್ಶವಾಗಿ ಸ್ವೀಕರಿಸಬೇಕು. ಸರಳವಾದ ಜೀವನ ಕ್ರಮ ರೂಢಿಸಿಕೊಂಡು, ಬದುಕಿಗೆ ಗುರಿಗಳನ್ನಿಟ್ಟುಕೊಂಡು ಏಕಾಗ್ರತೆ ಮತ್ತು ಪರಿಶ್ರಮದಿಂದ ಓದಿ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಸಮಾರೋಪ ನುಡಿಗಳನ್ನಾಡಿದರು. ದಕ್ಷ ಪಿಯು ಮತ್ತು ಪದವಿ ಕಾಲೇಜಿನ ಅಧ್ಯಕ್ಷ ಡಾ.ಪಿ. ಜಯಚಂದ್ರರಾಜು, ಅದಮ್ಯ ರಂಗಶಾಲೆಯ ಕಾರ್ಯದರ್ಶಿ ಚಂದ್ರು ಮಂಡ್ಯ, ಪದಾಧಿಕಾರಿಗಳಾದ ಆರ್.ಎಸ್. ಸಹನಾ ಮತ್ತು ನಾಗೇಶ್ ಕಾವ್ಯಪ್ರಿಯಾ, ಕಾಲೇಜಿನ ಪ್ರಾಂಶುಪಾಲ ರತ್ನಾಕರ ಶಾನಭಾಗ, ಕನ್ನಡ ವಿಭಾಗದ ಮುಖ್ಯಸ್ಥೆ ಕೆ.ಪಿ.ವೀಣಾ ಇದ್ದರು.