

ಚಿಕ್ಕಬಳ್ಳಾಪುರ: ಗೌರಿಬಿದನೂರಿನ ಮಾದವನಗರದ ಬಳಿ ರೈಲ್ವೆ ಹಳಿ ದಾಟುವಾಗ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾಳೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಎನ್.ಎನ್.ಭವ್ಯ ಭಾಯಿ(18) ಮೃತೆ ವಿದ್ಯಾರ್ಥಿನಿ. ಗೌರಿಬಿದನೂರು ನಗರದಲ್ಲಿನ ಮನ್ಸಿಪಲ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಳು.
* ಅಸಲಿಗೆ ನಡೆದಿದ್ದೇನು?
ಗೌರಿಬಿದನೂರು ನಗರದಲ್ಲಿನ ಹಾಸ್ಟೆಲ್ ಭವ್ಯ ಭಾಯಿ ಉಳಿದುಕೊಂಡಿದ್ದಳು. ಇದರ ನಡುವೆ ಶುಕ್ರವಾರ ಕಾಲೇಜಿನಿಂದ ಹಾಸ್ಟೆಲ್ ಹೋಗುತ್ತಿದ್ದ ಸಂದರ್ಭದಲ್ಲಿ ಜತೆಯಲ್ಲಿದ್ದ ಸ್ನೇಹಿತೆ ಶಶಿಕಲಾಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಇದರಿಂದ ಸಮಾಧಾನಪಡಿಸಿ, ಒಂದೆಡೆ ಕುಳ್ಳರಿಸಿ ಜ್ಯೂಸ್ ತರಲು ಭವ್ಯ ಸಮೀಪದ ಅಂಗಡಿಗೆ ಹೋಗಿದ್ದಾಳೆ. ಇದೇ ವೇಳೆ ಒಂದು ಲೈನಿನಲ್ಲಿ ಗೂಡ್ಸ್ ರೈಲು ನಿಂತಿದೆ. ಇನ್ನೊಂದು ಲೈನಿನಲ್ಲಿ ಬೇರೆ ರೈಲು ಆಗಮಿಸಿದೆ. ಇದನ್ನು ಭವ್ಯ ಗಮನಿಸಿಲ್ಲ. ಅವಸರದಲ್ಲಿ ರೈಲನ್ನು ನೋಡದೇ ಹಳಿ ದಾಟಲು ಪ್ರಯತ್ನಿಸಿದ್ದಾಳೆ. ಆಗ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದ್ದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದು ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ, ಮರಣೋತ್ತೋರ ಪರೀಕ್ಷೆಗೆ ಕ್ರಮ ಕೈಗೊಂಡಿದ್ದಾರೆ. ಗೌರಿಬಿದನೂರು ನಗರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ನಿರ್ಲಕ್ಷ್ಯಕ್ಕೆ ಅವಘಡ ಹೆಚ್ಚಳ
ಗೌರಿಬಿದನೂರು ನಗರ ರೈಲ್ವೆ ಹಳಿಯ ಬಳಿ ಅಂಡರ್ ಪಾಸ್ ರಸ್ತೆ ಇದೆ. ಆದರೆ, ಇದರಲ್ಲಿ ಹಾದು ಹೋಗದೇ ಭವ್ಯ ಭಾಯಿ ನೇರವಾಗಿ ರೈಲು ಹಳಿ ದಾಟಲು ಹೋಗಿದ್ದೇ ಅವಘಡಕ್ಕೆ ಪ್ರಮುಖ ಕಾರಣ. ಬಹುತೇಕರು ಸಮಯ ಉಳಿತಾಯ ಮತ್ತು ಕಡಿಮೆ ದೂರ ಎಂಬ ನಿರ್ಲಕ್ಷ್ಯ ಭಾವನೆಯಲ್ಲಿ ಅಂಡರ್ ಪಾಸ್ ರಸ್ತೆ ಬಿಟ್ಟು ಹಳಿಯ ಮೇಲೆ ದಾಟುವಂತಹುದು ಹೆಚ್ಚಿಗೆ ಕಂಡು ಬರುತ್ತಿದ್ದು ಇದರ ಬಗ್ಗೆ ಜಾಗೃತಿ ಮೂಡಿಸಿ, ಅವಘಡಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದು ಪ್ರಜ್ಞಾವಂತರು ಒತ್ತಾಯಿಸಿದ್ದಾರೆ.