

ಉಡುಪಿ: ಪದವಿ ಪೂರ್ವ ಶಿಕ್ಷಣ ಇಲಾಖೆ 20 ಅಂಶಗಳ ಮಾರ್ಗಸೂಚಿ ಜಾರಿಗೊಳಿಸಿದ್ದು, ಈ ಕಾರ್ಯಕ್ರಮವನ್ನು ಪ್ರತಿ 15 ದಿನಕ್ಕೊಮ್ಮೆ ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ಸರ್ಕಾರದ ಸುತ್ತೋಲೆಯ ಎಲ್ಲಾ ಅಂಶಗಳನ್ನು ಜಾರಿಗೆ ತಂದಿದ್ದೇವೆ. ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ತಂಡವಾಗಿ ಕೆಲಸ ಮಾಡಿದ್ದರಿಂದ ಉತ್ತಮ ಲಿತಾಂಶ ಲಭಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಕಳೆದ ವರ್ಷದ ಫಲಿತಾಂಶದ ಮೇಲೆ ಸಾಕಷ್ಟು ಅಧ್ಯಯನ ನಡೆಸಿ, ನೋಡಲ್ ಆಫೀಸರ್ಗಳನ್ನು ನೇಮಕ ಮಾಡಿ, ಶಾಲೆಯಲ್ಲಿ ವಿಶೇಷ ತರಗತಿಗಳನ್ನು ನಡೆಸಿ, ಹಿಂದಿನ ಐದು ವರ್ಷಗಳ ಫಲಿತಾಂಶ ಪರಾಮರ್ಶೆ ಮಾಡಿ ಕೆಲಸ ಮಾಡಿದ್ದೇವೆ. ಶೈಕ್ಷಣಿಕ ವರ್ಷದ ಆರಂಭದಿಂದ ಪ್ರಥಮ ಸ್ಥಾನದ ಗುರಿಯನ್ನು ಇಟ್ಟಿಕೊಂಡು ಪಪೂ ಇಲಾಖೆ ಮತ್ತು ಕಾಲೇಜಿನ ಶಿಕ್ಷಕರು ತಂಡವಾಗಿ ಕೆಲಸ ಮಾಡಿದ್ದಾರೆ. ಜಿಪಂ ಸಿಇಓ, ಎಸ್ಪಿ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಪರೀಕ್ಷೆಯ ಸಂದರ್ಭ ಉತ್ತಮವಾಗಿ ಕೆಲಸಗಳನ್ನು ಮಾಡಿದ್ದರಿಂದ ಈ ಫಲಿತಾಂಶ ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
ಉಡುಪಿ ಜಿಲ್ಲೆ ಶೈಕ್ಷಣಿಕವಾಗಿ ಸಾಕಷ್ಟು ಮುಂದಿದ್ದು, ಜಿಲ್ಲೆಯ ಮಕ್ಕಳ ಸಾಧನೆ ನಿಜಕ್ಕೂ ಮೆಚ್ಚುವಂಥದ್ದಾಗಿದೆ. ಮಕ್ಕಳ ಭವಿಷ್ಯ ಉಜ್ವಲವಾಗಲಿ. ಪ್ರಥಮ ಸ್ಥಾನ ಪಡೆಯಲು ಶ್ರಮಿಸಿದ ಎಲ್ಲಾ ಅಧಿಕಾರಿಗಳು, ಶಿಕ್ಷಕರು ಹಾಗೂ ಪೋಷಕರಿಗೆ ಧನ್ಯವಾದಗಳು. -ಲಕ್ಷ್ಮಿ ಹೆಬ್ಬಾಳ್ಕರ್, ಉಡುಪಿ ಉಸ್ತುವಾರಿ ಸಚಿವೆ