

ಮಡಿಕೇರಿ
ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮಹತ್ವದ ಘಟ್ಟಗಳಲ್ಲಿ ಒಂದಾದ ಪಿಯುಸಿ ಫಲಿತಾಂಶ ಏ.೧೦ರಂದು ಪ್ರಕಟವಾಯಿತು. ಸಾಮಾನ್ಯವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಪ್ರದರ್ಶಿಸುವ ಕೊಡಗು ಈ ಬಾರಿಯ ಪಿಯುಸಿ ಫಲಿತಾಂಶದಲ್ಲಿ ೫ನೇ ಸ್ಥಾನಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಶೇ. ೯೨.೧೩ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ೨೦೨೩ಕ್ಕೆ ಹೋಲಿಸಿದರೆ ಈ ವರ್ಷ ಶೇಕಡವಾರು ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಕಳೆದ ವರ್ಷ ಕೊಡಗಿನಲ್ಲಿ ಶೇ. ೯೦.೫೫ ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಜಿಲ್ಲೆ ರಾಜ್ಯದಲ್ಲಿ ೩ನೇ ಸ್ಥಾನ ಪಡೆದುಕೊಂಡಿತ್ತು.
೨೦೨೨ನೇ ಸಾಲಿನಲ್ಲಿ ಕೊಡಗು ಆರನೇ ಸ್ಥಾನದಲ್ಲಿತ್ತು. ೨೦೨೨ಕ್ಕೆ ಹೋಲಿಸಿದರೆ ೨೦೨೩ರಲ್ಲಿ ಜಿಲ್ಲೆಯ ಒಟ್ಟಾರೆ ಫಲಿತಾಂಶ ಶೇ.೧೭.೨೩ ರ?್ಟು ಹೆಚ್ಚಳವಾಗಿತ್ತು. ಈ ಬಾರಿ ಈ ಪ್ರಮಾಣ ಶೇ. ೧.೫೮ರಷ್ಟು ಹೆಚ್ಚಳ ಕಂಡುಬಂದಿದೆ. ಜಿಲ್ಲೆಯಲ್ಲಿ ೪,೫೭೬ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೪,೨೧೬ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ ೮೦೪ ವಿದ್ಯಾರ್ಥಿಗಳ ಪೈಕಿ ೬೭೧ (ಶೇ. ೮೩.೪೬), ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ ೨,೩೫೧ ವಿದ್ಯಾರ್ಥಿಗಳಲ್ಲಿ ೨,೧೯೬ (ಶೇ ೯೩.೪೧) ಹಾಗೂ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ ೧,೪೨೧ ವಿದ್ಯಾರ್ಥಿಗಳ ಪೈಕಿ ೧,೩೪೯ (ಶೇ ೯೪.೯೩) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ೩೮೫ ಖಾಸಗಿ ಅಭ್ಯರ್ಥಿಗಳ ಪೈಕಿ ೨೨೨ (ಶೇ ೫೭.೬೬) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪುನರಾವರ್ತಿತಾ ೧೪೦ ಅಭ್ಯರ್ಥಿಗಳ ಪೈಕಿ ೭೧ (ಶೇ ೫೦.೭೧) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಈ ಬಾರಿ ರಾಜ್ಯಮಟ್ಟದ ಪ್ರಮುಖ ರ‌್ಯಾಂಕ್‌ಗಳು ಕೊಡಗಿಗೆ ಬಂದಿಲ್ಲ. ಕೊಡಗಿನಿಂದ ಹೊರಗೆ ಹೋಗಿ ಮೈಸೂರು, ಮಂಗಳೂರು, ಬೆಂಗಳೂರು, ಮೂಡಬಿದಿರೆ ಸೇರಿ ವಿವಿಧೆಡೆ ಕಾಲೇಜುಗಳಲ್ಲಿ ಪಿಯುಸಿ ವ್ಯಾಸಂಗ ಮಾಡಿದ ಕೊಡಗಿನ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ. ಆದರೆ ಕೊಡಗಿನ ಕಾಲೇಜುಗಳಲ್ಲಿ ಇಂತಹ ಆಶಾದಾಯಕ ಫಲಿತಾಂಶ ಕಂಡುಬಂದಿಲ್ಲ. ಕೊಡಗು ಕೂಡ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಏನು ಮಾಡಬಹುದು. ಯಾವ ರೀತಿಯ ಕ್ರಮಗಳನ್ನು ಅನುಸರಿಸುವುದರಿಂದ ಪಿಯುಸಿಯಲ್ಲಿ ಜಿಲ್ಲೆ ಒಳ್ಳೆಯ ರ‌್ಯಾಂಕ್ ಗಳಿಸಬಹುದು ? ಈ ಬಗ್ಗೆ ವಿಜಯವಾಣಿ ಓದುಗರು ಇಂದಿನ ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಈಗಿರುವ ಶಿಕ್ಷಣ ಪದ್ಧತಿ ಅದ್ಭುತವಾಗಿದೆ. ಕೆಲವು ಬಾರಿ ಸಣ್ಣಪುಟ್ಟ ವ್ಯತ್ಯಾಸವಾಗುತ್ತದೆ. ಈಗ ಶಿಕ್ಷಕರ ಮೇಲೆ ಅನಾವಶ್ಯಕ ಒತ್ತಡ ಹೇರದೆ ತಮ್ಮಷ್ಟಕ್ಕೆ ತಾವು ಕೆಲಸ ಮಾಡಲು ಬೀಡಬೇಕು.
ಕನ್ನಿಕಾ ನಾಗ್, ಗೃಹಿಣಿ, ಜನತಾ ಕಾಲೋನಿ, ಕುಶಾಲನಗರ.
ವಿದ್ಯಾರ್ಥಿಗಳ ಕಲಿಕೆಗೆ ಅನುಗುಣವಾಗಿ ಮೊದಲು ವಿದ್ಯಾರ್ಥಿಗಳನ್ನು ಉತ್ತಮ, ಮಧ್ಯಮ ಹಾಗೂ ಸಾಧಾರಣವೆಂದು ವಿಭಾಗಿಸಿ ಮಧ್ಯಮ ಮತ್ತು ಸಾಧಾರಣ ವರ್ಗದ ವಿದ್ಯಾರ್ಥಿಗಳ ಕಡೆ ಹೆಚ್ಚಿನ ಗಮನ ಕೊಟ್ಟು ಅವರ ಕಲಿಕಾ ಮಟ್ಟ ಹೆಚ್ಚಿಸಿ, ಉತ್ತಮ ಕಲಿಕಾ ಮಟ್ಟದ ವಿದ್ಯಾರ್ಥಿಗಳೊಂದಿಗೆ ಸಮಗೊಳಿಸಿದಾಗ ಉತ್ತಮವಾದ ಫಲಿತಾಂಶ ಪಡೆಯಲು ಸಾಧ್ಯ. ಇದರೊಂದಿಗೆ ಕಲಿಯುವಂತಹ ವಿದ್ಯಾರ್ಥಿಗಳ ಮೇಲೆ ಯಾವುದೇ ರೀತಿಯ ಒತ್ತಡಗಳನ್ನು ಹಾಕದೆ ಸ್ವ ಇಚ್ಚೆಯಿಂದ ಕಲಿಕೆಯಲ್ಲಿ ತೊಡಗುವ ಹಾಗೆ ಮಾಡಬೇಕು.
ಕರಣ್ ಕುಮಾರ್, ಮುಖ್ಯಸ್ಥ, ಆದಿಶಕ್ತಿ ಟ್ಯುಟೋರಿಯಲ್, ವಿರಾಜಪೇಟೆ
ಉತ್ತಮ ಫಲಿತಾಂಶ ಪಡೆಯಲು ಮೊದಲು ಕಾಲೇಜುಗಳಲ್ಲಿರುವ ಉಪನ್ಯಾಸಕರ ಕೊರತೆ ನೀಗಿಸಬೇಕು. ಪ್ರತಿ ಕಾಲೇಜಿನಲ್ಲಿ ಪ್ರತಿ ವಿಷಯದ ಉಪನ್ಯಾಸಕರು ಸಿಕ್ಕಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕಲಿಕಾ ಮಟ್ಟ ಹೆಚ್ಚುತ್ತದೆ. ಹೆಚ್ಚಿನ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಇದ್ದು ನಿಯೋಜನೆ ಆಧಾರದ ಮೇಲೆ ಮೂರು ದಿನಗಳು ಮಾತ್ರ ಲಭ್ಯವಿರುತ್ತಾರೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕಲಿಕೆಯಲ್ಲಿ ದೊಡ್ಡ ತೊಡಕುಂಟಾಗುತ್ತದೆ. ಅದರಿಂದ ಉಪನ್ಯಾಸಕರನ್ನು ನೇಮಿಸುವುದು ಸೂಕ್ತ
ವಿದ್ಯಾಶ್ರೀ ಬಿ. ವಿ., ಬೇಟೋಳಿ, ವಿರಾಜಪೇಟೆ
ಕೊಡಗಿನಲ್ಲಿ ದ್ವಿತೀಯ ಪಿಯುಸಿ ಪಲಿತಾಂಶ ಐದನೇ ಸ್ಥಾನಕ್ಕಿಳಿದಿದೆ. ಮೂರನೇ ಸ್ಥಾನದಲ್ಲಿ ಇದ್ದ ಫಲಿತಾಂಶ ಐದಕ್ಕೆ ಇಳಿಯಬಾರದಿತ್ತು. ಮೊದಲನೇ ಸ್ಥಾನಕ್ಕೆರಬೇಕು. ಈ ನಿಟ್ಟಿನಲ್ಲಿ ಕಾಲೇಜುಗಳು ಹೆಚ್ಚುವರಿ ಶಿಕ್ಷಣವನ್ನು ನೀಡಬೇಕು, ತುಂಬಾ ಹಿಂದುಳಿದ ಮಕ್ಕಳನ್ನು ಗುರ್ತಿಸಿ ಅವರಿಗೆ ವಿಶೇಷ ತರಗತಿ ನಡೆಸಲು ಮುಂದಾಗಬೇಕು.
ಮಂಜುನಾಥ್, ಶಿಕ್ಷಕ, ಶನಿವಾರಸಂತೆ.
ಮಕ್ಕಳು ಎಸ್. ಎಸ್. ಎಲ್. ಸಿ. ಪಾಸಾದ ತಕ್ಷಣ ಪಿಯುಸಿ ಸೇರಿದಾಗ ಪ್ರಾರಂಭದಿಂದಲೇ ಅವರು ಯಾವ ವಿಷಯದಲ್ಲಿ ಹಿಂದೆ ಉಳಿದಿದ್ದಾರೆ ಎನ್ನುವುದಕ್ಕೆ ಉತ್ತರವನ್ನು ಶಿಕ್ಷಕರು ಮತ್ತು ಪೋಷಕರು ಕಂಡು ಹಿಡಿಯಬೇಕು. ಆ ದಿಕ್ಕಿನಲ್ಲಿ ಆ ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕು. ಕಂಠಪಾಠ ಮಾಡಿಸುವ ಬದಲು ಮಕ್ಕಳಿಗೆ ಅರ್ಥವಾಗುವ ರೀತಿ ಬೋಧನೆ ಮಾಡಬೇಕು. ಇದರಿಂದ ಮಕ್ಕಳ ಅಂಕ ಹೆಚ್ಚುತ್ತದೆ. ಪೋಷಕರು ಸಹ ಮಕ್ಕಳು ಮನೆಗೆ ಬಂದ ಮೇಲೆ ಏನು ಮಾಡುತ್ತಿದ್ದಾರೆ ಎಂದು ಪರಿಶೀಲನೆ ನಡೆಸಬೇಕು. ಕಾಲೇಜು ಸೇರಿಸಿದ ನಂತರ ನಮ್ಮ ಜವಾಬ್ದಾರಿ ಮುಗಿಯಿತು ಎಂದು ಸುಮ್ಮನಾಗಬಾರದು.
ಯತೀಶ್, ಶಿಕ್ಷಕ, ಶನಿವಾರಸಂತೆ
ಕೊಡಗು ಪಿಯುಸಿ ಫಲಿತಾಂಶ ೩ನೇ ಸ್ಥಾನದಿಂದ ೫ನೇ ಸ್ಥಾನಕ್ಕೆ ಕುಸಿದಿದ್ದರೂ ಶೇಕಡಾವಾರು ಪ್ರಮಾಣ ತೀವ್ರವಾಗಿ ಕುಸಿದಿಲ್ಲ. ಆದರೆ ಮತ್ತೊಂದೆಡೆ ಇತರ ಜಿಲ್ಲೆಗಳ ಫಲಿತಾಂಶಗಳಲ್ಲಿ ಸುಧಾರಣೆ ಕಂಡು ಬಂದಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಕಲಿಕೆ ನಿರಂತರ ಪ್ರಕ್ರಿಯೆ. ಇದರಲ್ಲಿ ನಿಯಮಿತ ಪರಿಷ್ಕರಣೆ ಅಗತ್ಯವಿದೆ. ಮಕ್ಕಳು ಅಧ್ಯಯನ ಮಾಡುವಾಗ ಪರೀಕ್ಷೆಯ ದೃಷ್ಟಿಕೋನದಿಂದ ಅಧ್ಯಯನ ಮಾಡಬಾರದು. ಜ್ಞಾನವನ್ನು ಪಡೆದುಕೊಳ್ಳಲು ಅಧ್ಯಯನ ಮಾಡಬೇಕು. ಕಲಿಯುವ ವಿಷಯಗಳನ್ನು ತಿಳಿದುಕೊಳ್ಳಬೇಕು. ಆಗ ಅವರು ಕಲಿತದ್ದನ್ನು ಎಂದಿಗೂ ಮರೆಯುವುದಿಲ್ಲ. ಪ್ರಶ್ನೆ ಯಾವ ಸ್ವರೂಪದಲ್ಲಿ ಕಾಣಿಸಿಕೊಂಡರೂ ಅದನ್ನು ಎದುರಿಸಲು ವಿದ್ಯಾರ್ಥಿಗಳಿಗೆ ಇದರಿಂದ ಸಾಧ್ಯವಾಗುತ್ತದೆ. ಮಾರ್ಚ್, ಏಪ್ರಿಲ್‌ನಲ್ಲಿ ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬ ಮತ್ತು ಮುಸ್ಲಿಮರಿಗೆ ರಂಜಾನ್ ಕೂಡ ವಿದ್ಯಾರ್ಥಿಗಳ ಕಲಿಕೆ ಮೇಲೆ ಪರಿಣಾಮ ಬೀರಿರಬಹುದು.
ಪ್ರೊ. ಕಾಂಡಂಡ ಉಷಾ ಜೋಯಪ್ಪ, ಉಪಾಧ್ಯಕ್ಷೆ, ಪದವಿಪೂರ್ವ ಕಾಲೇಜು, ನಾಪೋಕ್ಲು
ಕೊಡಗಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಬೇಕು. ಪ್ರತಿ ವಿಷಯಗಳಿಗೂ ಶಿಕ್ಷಕರು ಇದ್ದು ನಿಗದಿತ ಸಮಯದಲ್ಲಿ ಪಾಠಗಳು ಮುಕ್ತಾಯವಾಗಬೇಕು. ವಿಶೇಷ ತರಗತಿಗಳು ನಡೆಯಬೇಕು. ಈ ಹಂತದಲ್ಲೇ ಮುಂದಿನ ಅಭ್ಯಾಸಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು. ಕಲಿಯುವ ಮಕ್ಕಳಿಗೆ ಸರ್ಕಾರ ಸೂಕ್ತ ಸೌಲಭ್ಯ ಒದಗಿಸಿದರೆ ಮಾತ್ರ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.
ಸುರೇಶ್ ಶೆಟ್ಟಿ, ಸದಸ್ಯ, ಚೌಡ್ಲು ಗ್ರಾ.ಪಂ., ಸೋಮವಾರಪೇಟೆ.
ಕೊಡಗು ಶೈಕ್ಷಣಿಕವಾಗಿ ಸಾಕಷ್ಟು ಮುಂದುವರೆದಿರುವ ಜಿಲ್ಲೆ. ಆದರೂ ಪಿಯುಸಿಯಲ್ಲಿ ರಾಜ್ಯದಲ್ಲಿ ೫ ನೇ ಸ್ಥಾನದಲ್ಲಿದೆ. ಇನ್ನಷ್ಟು ಉತ್ತಮ ಫಲಿತಾಂಶಕ್ಕಾಗಿ ಕೊಡಗಿನ ಪ್ರತಿಭಾನ್ವಿತ ವಿದ್ಯಾರ್ಥಿಗಳ ವಲಸೆ ತಡೆಗಟ್ಟಬೇಕು. ಪ್ರಮುಖವಾಗಿ ಈಗಿರುವಂತಹ ಕಾಲೇಜುಗಳಲ್ಲಿ ಪಠ್ಯದ ಜತೆಯಲ್ಲಿ ಸಿಇಟಿ, ಎನ್‌ಇಇಟಿ, ಜೆಇಇ ಉತ್ತಮ ಕೋಚಿಂಗ್ ವ್ಯವಸ್ಥೆ ಮಾಡಬೇಕು. ಗ್ರಾಮೀಣ ಭಾಗಗಳಲ್ಲಿರುವ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ನೀಗಿಸಬೇಕು. ಕೊಡಗಿನ ವಸತಿ ಕಾಲೇಜುಗಳಲ್ಲಿ ಪ್ರತೀ ವರ್ಷ ಉತ್ತಮ ಫಲಿತಾಂಶ ಬರುತಿದ್ದು ಮತ್ತಷ್ಟು ವಸತಿ ಕಾಲೇಜುಗಳನ್ನ ಆರಂಭಿಸಿದರೆ ಬಡ ಪ್ರತಿಭಾ ವಂತ ವಿದ್ಯಾರ್ಥಿಗಳಿಗೆ ಆಸರೆಯಾಗಿ ಶೈಕ್ಷಣಿಕವಾಗಿ ಉತ್ತಮ ಸ್ಥಾನ ಪಡೆಯಲು ಅನುಕೂಲವಾಗುವುದು.