

ಮಂಡ್ಯ: ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯು ಶೇ.77.47ರೊಂದಿಗೆ 20ನೇ ಸ್ಥಾನ ಪಡೆದುಕೊಂಡಿರುವುದು ಅಭಿನಂದನೀಯ. ಆದರೆ ಮತ್ತಷ್ಟು ಸುಧಾರಿಸಿ ರಾಜ್ಯದಲ್ಲಿ ಉನ್ನತ ಸ್ಥಾನಕ್ಕೆ ಏರಿಸಲು ಹೆಚ್ಚಿನ ಕಾರ್ಯಚಟುವಟಿಕೆ ಮತ್ತು ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಇದರೊಂದಿಗೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಟಾಪ್ ಐದರ ಪಟ್ಟಿಯೊಳಗೆ ಜಿಲ್ಲೆಯ ಹೆಸರು ಬರುವಂತಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸಲಹೆ ನೀಡಿದ್ದಾರೆ.
ಈ ಕುರಿತು ಪಿಯು ಮಂಡಳಿ ನಿರ್ದೇಶಕರು, ಜಿಲ್ಲಾಧಿಕಾರಿ ಮತ್ತು ಡಿಡಿಪಿಯು ಅವರಿಗೆ ಪತ್ರ ಬರೆದಿರುವ ಅವರು, ಕಳೆದ ಬಾರಿ 29ನೇ ಸ್ಥಾನದಲ್ಲಿದ್ದ ಮಂಡ್ಯ ಜಿಲ್ಲೆ ಈ ಬಾರಿ ಗಣನೀಯ ಪ್ರಗತಿ ಸಾಧಿಸಿ 20ನೇ ಸ್ಥಾನವನ್ನು ಪಡೆದುಕೊಂಡಿದೆ. ಇದು ಉತ್ತಮ ಎನ್ನಿಸಿದರೂ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕಿದೆ. ಮುಂದಿನ ಶೈಕ್ಷಣಿಕ ಅವಧಿಯಲ್ಲಿ ಮತ್ತಷ್ಟು ಶ್ರಮ ವಹಿಸಿದರೆ ಹೆಚ್ಚಿನ ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ಉತ್ತಮ ಸ್ಥಾನವನ್ನು ನಿರೀಕ್ಷಿಸಬಹುದಾಗಿದೆ. ಕಳೆದ ಬಾರಿ ಫಲಿತಾಂಶ ಕುಸಿತಗೊಂಡಿದ್ದಾಗ ಅದನ್ನು ಗಂಭೀರವಾಗಿ ಪರಿಗಣಿಸಿ ಕೆಡಿಪಿ ಸಭೆ ಮತ್ತು ಸರ್ಕಾರದ ಹಂತದಲ್ಲಿ ವಿಚಾರವನ್ನು ಗಮನಕ್ಕೆ ತಂದು ಅಗತ್ಯ ಕ್ರಮಗಳಿಗೆ ಒತ್ತಾಯಿಸಿದ್ದೆ. ಆಗ ಸಿಎಂ, ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಪಿಯು ನಿರ್ದೇಶಕರಿಗೆ ಪತ್ರ ಬರೆದು ಫಲಿತಾಂಶ ಪ್ರಗತಿ ಬಗ್ಗೆ ಕ್ರಮ ಕೈಗೊಳ್ಳವಂತೆ ಸಲಹೆ ನೀಡಿದ್ದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಹಾಗೂ ಅಧಿಕಾರಿಗಳು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದರು ಎಂದಿದ್ದಾರೆ.
ಕಳೆದ ಬಾರಿಗಿಂತ ಉತ್ತಮ ಫಲಿತಾಂಶವನ್ನು ಪಡೆದಿದ್ದೇವೆ ಎಂದು ಮೈಮರೆಯದೆ ಮುಂದಿನ ಸಾಲಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನೀಲನಕ್ಷೆ ಸಿದ್ಧಪಡಿಸಿ ಕಾರ್ಯರೂಪಕ್ಕೆ ತರಲು ಶ್ರಮ ವಹಿಸಿ ಬೇಕಿದೆ. ಎಲ್ಲರೂ ಮಕ್ಕಳನ್ನು ಮುಂದಿನ ಬಾರಿಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡಬೇಕಿದೆ. ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಬೆಳೆಯಲು ಉತ್ತಮ ಅವಕಾಶಗಳಿವೆ. ಜತೆಗೆ ಮೂಲ ಸೌಕರ್ಯಗಳೂ ಸಾಕಷ್ಟಿವೆ. ಏನಾದರೂ ಸಮಸ್ಯೆಗಳಿದ್ದಲ್ಲಿ ಮತ್ತು ಅಗತ್ಯವಾಗಿ ಬೇಕಾದ ಸೌಲಭ್ಯಗಳನ್ನು ಪಡೆಯಲು ಸರ್ಕಾರದ ಜತೆ ವ್ಯವಹರಿಸಿ ನಮ್ಮ ಗಮನಕ್ಕೆ ತಂದರೆ ಪರಿಹರಿಸಲು ಸಾಧ್ಯವಾದಷ್ಟು ಶಕ್ತಿಮೀರಿ ಪ್ರಯತ್ನವನ್ನು ಮಾಡಲಾಗುವುದು. ಆ ಕಾರಣ ಜಿಲ್ಲೆಯ ಮಕ್ಕಳ ಭವಿಷ್ಯ ನಮಗೆಲ್ಲರಿಗೂ ಮುಖ್ಯವಾಗಿದೆ ಎಂದಿದ್ದಾರೆ.