

ಮಡಿಕೇರಿ:
ಬುಧವಾರ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಕೊಡಗು ೫ನೇ ಸ್ಥಾನಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಶೇ. ೯೨.೧೩ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ೨೦೨೩ಕ್ಕೆ ಹೋಲಿಸಿದರೆ ಈ ವರ್ಷ ಶೇಕಡವಾರು ಪ್ರಮಾಣ ಏರಿಕೆ ಆಗಿದೆ. ಕಳೆದ ವರ್ಷ ಕೊಡಗಿನಲ್ಲಿ ಶೇ. ೯೦.೫೫ ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಜಿಲ್ಲೆ ರಾಜ್ಯದಲ್ಲಿ ೩ನೇ ಸ್ಥಾನ ಪಡೆದುಕೊಂಡಿತ್ತು.
೨೦೨೨ನೇ ಸಾಲಿನಲ್ಲಿ ಕೊಡಗು ಆರನೇ ಸ್ಥಾನದಲ್ಲಿತ್ತು. ೨೦೨೨ಕ್ಕೆ ಹೋಲಿಸಿದರೆ ೨೦೨೩ರಲ್ಲಿ ಜಿಲ್ಲೆಯ ಒಟ್ಟಾರೆ ಫಲಿತಾಂಶ ಶೇ.೧೭.೨೩ ರಷ್ಟು ಹೆಚ್ಚಳವಾಗಿತ್ತು. ಈ ಬಾರಿ ಈ ಪ್ರಮಾಣ ೧.೫೮ರಷ್ಟು ಹೆಚ್ಚಳ ಕಂಡುಬಂದಿದೆ. ಜಿಲ್ಲೆಯಲ್ಲಿ ೪,೫೭೬ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೪,೨೧೬ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದ ೮೦೪ ವಿದ್ಯಾರ್ಥಿಗಳ ಪೈಕಿ ೬೭೧ (ಶೇ. ೮೩.೪೬), ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ ೨,೩೫೧ ವಿದ್ಯಾರ್ಥಿಗಳಲ್ಲಿ ೨,೧೯೬ (ಶೇ ೯೩.೪೧) ಹಾಗೂ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದ ೧,೪೨೧ ವಿದ್ಯಾರ್ಥಿಗಳ ಪೈಕಿ ೧,೩೪೯ (ಶೇ ೯೪.೯೩) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ೩೮೫ ಖಾಸಗಿ ಅಭ್ಯರ್ಥಿಗಳ ಪೈಕಿ ೨೨೨ (ಶೇ ೫೭.೬೬) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪುನರಾವರ್ತಿತಾ ೧೪೦ ಅಭ್ಯರ್ಥಿಗಳ ಪೈಕಿ ೭೧ (ಶೇ ೫೦.೭೧) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ ಮಡಿಕೇರಿ ಸಂತ ಜೋಸೆಫರ ಪಿಯು ಕಾಲೇಜಿನ ಹೇಮಾವತಿ ಎಸ್. ೫೭೪ ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದರೆ, ಸಿದ್ದಾಪುರ ಇಕ್ರಾ ಪಿಯು ಕಾಲೇಜಿನ ಸಫ್ನ ಪಿ.ಐ. ೫೭೨ ಅಂಕ ಗಳಿಸಿ ದ್ವಿತೀಯ ಹಾಗೂ ಮಡಿಕೇರಿ ಸಂತ ಜೋಸೆಫರ ಪಿಯು ಕಾಲೇಜಿನ ಶ್ರೀ ನಂದಾ ಎಸ್. ೫೭೧ ಅಂಕ ಗಳಿಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾನೆ.
ವಾಣಿಜ್ಯ ವಿಭಾಗದಲ್ಲಿ ಗೋಣಿಕೊಪ್ಪ ವಿದ್ಯಾನಿಕೇತನ ಪ.ಪೂ. ಕಾಲೇಜಿನ ಚರಿಸ್ಮ ಜಾನ್ಸನ್ ೫೯೧ ಅಂಕ ಗಳಿಸಿ ಪ್ರಥಮ, ಗೋಣಿಕೊಪ್ಪ ಸರ್ವ ದೈವತಾ ಪಿ.ಯು. ಕಾಲೇಜಿನ ರಶ್ಮಿತ ಕೆ.ಕೆ. ೫೮೯ ಅಂಕ ಗಳಿಸಿ ದ್ವಿತೀಯ ಹಾಗೂ ಪೊನ್ನಂಪೇಟೆ ಸಂತ ಅಂತೋಣಿ ಪಿ.ಯು. ಕಾಲೇಜಿನ ಬಿಂದು ಐ. ಮತ್ತು ಕೊಟ್ಟಮುಡಿ ಮರ್ಕಜ್ ಪಿ.ಯು. ಕಾಲೇಜಿನ ಜೂವೇರಿಯಾ ಪಿ. ಝಡ್. ತಲಾ ೫೮೮ ಅಂಕ ಗಳಿಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಮಡಿಕೇರಿ ಸಂತ ಮೈಕಲರ ಪಿಯು ಕಾಲೇಜಿನ ಡಿಯಾನ ನವೀನ್ ಎ. ೫೯೨ ಅಂಕ ಗಳಿಸಿ ಪ್ರಥಮ, ಇದೇ ಸಂಸ್ಥೆಯ ಜೀವನ್ ಡಿ.ಪಿ. ಮತ್ತು ಪೊನ್ನಂಪೇಟೆ ಹಳ್ಳಿಗಟ್ಟು ಕೂರ್ಗ್ ಇನ್ಸಿಟ್ಯೂಟ್ ಆಫ್ ಪಿಯು ಕಾಲೇಜಿನ ಸಿಂಚು ಹೆಚ್.ಆರ್. ತಲಾ ೫೮೮ ಅಂಕ ಗಳಿಸಿ ದ್ವಿತೀಯ ಹಾಗೂ ಗೋಣಿಕೊಪ್ಪ ವಿದ್ಯಾನಿಕೇತನ ಪಿಯು ಕಾಲೇಜಿನ ಕಾವೇರಮ್ಮ ಎಂ.ಎಂ. ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.