ಬದುಕಿನ ಪರೀಕ್ಷೆಯಲ್ಲಿ ಫೇಲಾದ ಸಾಧಕ

Rakshit Angadi
Published on

ಪರಶುರಾಮ ಭಾಸಗಿ ವಿಜಯಪುರ

ದ್ವಿತೀಯ ಪಿಯುಸಿ ಕೊನೇ ಪರೀಕ್ಷೆಗೂ ಮುನ್ನವೇ ಕೊನೆಯುಸಿರೆಳೆದ ಅಂಧ ಸಾಧಕನೋರ್ವ ತಾನು ಬರೆದ 5 ವಿಷಯಗಳ ಪರೀಕ್ಷೆಯಲ್ಲಿ ಸಾಧಿಸಿದ್ದು ಶೇ. 90 ಫಲಿತಾಂಶ !
ಇಲ್ಲಿನ ಪ್ರೇರಣಾ ಶಾಲೆ ವಿದ್ಯಾರ್ಥಿ ರಕ್ಷಿತ್ ಅಂಗಡಿ ಇಂಥದ್ದೊಂದು ಸಾಧನೆ ಮೆರೆದಿದ್ದಾರಾದರೂ ಇನ್ನೊಂದು ವಿಷಯದ ಪರೀಕ್ಷೆಗೆ ಮುನ್ನವೇ ದೇವರು ಬದುಕಿನ ಪರೀಕ್ಷೆಯೊಡ್ಡಿಬಿಟ್ಟ. ಕೊನೇ ಪರೀಕ್ಷೆ ಬರೆಯಬೇಕೆಂಬ ಉತ್ಕಟೇಚ್ಛೆ ಹೊಂದಿರುವಾಗಲೇ ರಕ್ಷಿತ್ ಕೊನೆಯುಸಿರೆಳೆದು ಬಿಟ್ಟ. ಇದೀಗ ಆತನ ಫಲಿತಾಂಶ ಕಂಡ ಜನ ದೇವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಏನಾಯಿತು ರಕ್ಷಿತ್‌ಗೆ?

ಜಿ.ಪಂ.ಸದಸ್ಯೆ ದಾನಮ್ಮ ಗುರುಲಿಂಗಪ್ಪ ಅಂಗಡಿ ಅವರ ಪುತ್ರ ರಕ್ಷಿತ್ ಶೆಟ್ಟಿ ಹುಟ್ಟು ಅಂಧನಾದರೂ ಕಣ್ಣಿದ್ದವರನ್ನೂ ಮೀರಿಸುವ ಮಹಾ ಚತುರ. ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯು ಮುಗಿಸಲು ಸಾಕಷ್ಟು ತಯಾರಿ ಮಾಡಿಕೊಂಡಿದ್ದ ರಕ್ಷಿತ್ ಐದು ಪರೀಕ್ಷೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದನು. ಮೊದಲೈದು ಪರೀಕ್ಷೆ ಜತೆಯಲ್ಲಿಯೇ ಕೊನೆಯ ಪರೀಕ್ಷೆ ಬರೆದಿದ್ದರೆ ಇಷ್ಟೊತ್ತಿಗಾಗಲೇ ಅತ್ಯುನ್ನತ ದರ್ಜೆಯಲ್ಲಿ ರಕ್ಷಿತ್ ತೇರ್ಗಡೆಯಾಗಿರುತ್ತಿದ್ದನು. ಆದರೆ, ಕರೋನಾದಿಂದಾಗಿ ಪರೀಕ್ಷೆ ಮುಂದೂಡಲ್ಪಟ್ಟಿತು. ಕೊನೆಯ ಪರೀಕ್ಷೆ ಇಂಗ್ಲಿಷ್ ಬರೆಯುವ ಮುನ್ನವೇ ಅಂದರೆ ಪರೀಕ್ಷೆ ಇನ್ನೆರೆಡು ದಿನವಿರುವಾಗಲೇ ರಕ್ಷಿತ್ ಹೃದಯಾಘಾತಕ್ಕೊಳಗಾದನು.

ರಕ್ಷಿತ್ ಸಾಧನೆ ವಿವರ

ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದ ರಕ್ಷಿತ್ ಭಾರತ ಸರ್ಕಾರ ನಡೆಸುವ ಎನ್‌ಟಿಎಸ್‌ಇ (ರಾಷ್ಟ್ರ ಮಟ್ಟದ ಪ್ರತಿಭಾ ಅನ್ವೇಷಣೆ ಪರೀಕ್ಷೆ)ಯಲ್ಲಿ ಪ್ರಥಮ ಸ್ಥಾನ ಪಡೆದಿದ್ದನು. ಮೊಬೈಲ್ ಮತ್ತು ಕಂಪ್ಯೂಟರ್‌ಗಳನ್ನು ಲೀಲಾಜಾಲವಾಗಿ ಬಳಸುತ್ತಿದ್ದ ಈತ ವಿದ್ಯುತ್ ಪರಿಕರಗಳನ್ನೂ ರಿಪೇರಿ ಮಾಡುತ್ತಿದ್ದನು. ತಂದೆ ಗುರುಲಿಂಗಪ್ಪ ಅವರ ಉದ್ಯಮದಲ್ಲೂ ಸಹಾಯ ಮಾಡುತ್ತಿದ್ದನು. ಕಾರ್ ರಿಪೇರಿ ಮಾಡುವುದರಲ್ಲಿ ನಿಪುಣನಾಗಿದ್ದ ರಕ್ಷಿತ್ ಮುಂದೆ ಐಎಎಸ್ ಪಾಸ್ ಮಾಡುವ ಅಗಾಧ ಕನಸು ಕಂಡಿದ್ದನು. ಆದರೆ, ಭಗವಂತ ಒಡ್ಡಿದ ಬದುಕಿನ ಪರೀಕ್ಷೆಯಲ್ಲಿ ರಕ್ಷಿತ್ ಫೇಲಾಗಿಬಿಟ್ಟನು.

ಫಲಿತಾಂಶದ ವಿವರ

  • ಕನ್ನಡ 90
  • ಭೌತಶಾಸ್ತ್ರ -90
  • ರಸಾಯನ ಶಾಸ್ತ್ರ-92
  • ಗಣಿತ ಶಾಸ್ತ್ರ -86
  • ಜೀವಶಾಸ್ತ್ರ-90
  • ಇಂಗ್ಲಿಷ್-
  • ಒಟ್ಟು- 448

ನನಗೆ ಇಬ್ಬರು ಮಕ್ಕಳಿದ್ದು ಇಬ್ಬರೂ ಅಂಧರಾಗಿದ್ದಾರೆ. ಅದರಲ್ಲಿ ರಕ್ಷಿತ್ ತುಂಬ ಚತುರ. ಆತನ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ಆತನ ಜಾಣ್ಮೆ, ಕಲಾ ಕೌಶಲ ನಮ್ಮನ್ನೆಲ್ಲಾ ಮೂಕವಿಸ್ಮಿತರನ್ನಾಗಿಸಿತ್ತು. ಇನ್ನೊಂದು ಪರೀಕ್ಷೆ ಮುಗಿಸಿದ್ದರೆ ಪಿಯುಸಿ ಪರೀಕ್ಷೆಯಲ್ಲಿ ಶೇ. 90 ರಷ್ಟು ಸಾಧನೆ ಮಾಡಿರೋನು. ಆದರೇನು ಮಾಡೋದು ವಿಧಿ ಆತನ ಬಾಳನ್ನೇ ಕಸಿದುಕೊಂಡಿತು.
ಗುರುಲಿಂಗಪ್ಪ ಅಂಗಡಿ, ತಂದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net