

ಮಂಗಳೂರು/ಉಡುಪಿ: ಲಾಕ್‌ಡೌನ್‌ನಿಂದ ಬಾಕಿಯಾಗಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಗುರುವಾರ ದ.ಕ. ಜಿಲ್ಲೆಯ 51, ಉಡುಪಿ ಜಿಲ್ಲೆಯ 27 ಕೇಂದ್ರಗಳಲ್ಲಿ ಯಶಸ್ವಿಯಾಗಿ ನಡೆಯಿತು. ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ಮಾಸ್ಕ್ ಧರಿಸಿಕೊಂಡೇ ಪರೀಕ್ಷೆ ಬರೆದರು.
ದ.ಕ. ಜಿಲ್ಲೆಯಲ್ಲಿ 26,486 ಮಂದಿ ಪರೀಕ್ಷೆ ಬರೆದಿದ್ದು, 466 ಮಂದಿ ಗೈರಾದರು. ಶೀತ-ಜ್ವರ ಲಕ್ಷಣಗಳಿದ್ದ ಸುಳ್ಯದ ಓರ್ವ ಮತ್ತು ಪುತ್ತೂರಿನ ಮೂವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಯಿತು.
ಕಾಸರಗೋಡು ಜಿಲ್ಲೆಯ ವಿವಿಧ ಭಾಗಗಳಿಂದ ತಲಪಾಡಿ, ಬಾಯಾರು-ಮುಳಿಗದ್ದೆ, ಅಡ್ಕಸ್ಥಳ-ಸಾರಡ್ಕ, ಕೊಟ್ಯಾಡಿ-ಜಾಲ್ಸೂರು ಮೂಲಕ 1,137 ವಿದ್ಯಾರ್ಥಿಗಳು ದ.ಕ. ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದು, ಅವರು ಖಾಸಗಿ ಕಾಲೇಜುಗಳ ಹಾಗೂ ಕೆಎಸ್‌ಆರ್‌ಟಿಸಿಯ 50ಕ್ಕೂ ಅಧಿಕ ಬಸ್‌ಗಳ ಮೂಲಕ ಪರೀಕ್ಷಾ ಕೇಂದ್ರ ತಲುಪಿದರು.
ಉಡುಪಿ ಜಿಲ್ಲೆಯಲ್ಲಿ 13,454 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 163 ಮಂದಿ ಗೈರಾಗಿದ್ದರು. ಹೊರರಾಜ್ಯದ 23 ವಿದ್ಯಾರ್ಥಿಗಳು ಹಾಜರಾಗಿದ್ದರು. ಹೊರ ಜಿಲ್ಲೆಗಳಿಂದ ನೋಂದಾಯಿಸಿದ್ದ 161 ವಿದ್ಯಾರ್ಥಿಗಳಲ್ಲಿ ನಾಲ್ವರು ಗೈರಾಗಿದ್ದರು. ಕಂಟೇನ್ಮೆಂಟ್ ಜೋನ್‌ನಿಂದ ಬಂದ 9 ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ಉಡುಪಿ ಬೋರ್ಡ್ ಹೈಸ್ಕೂಲ್‌ಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎರಡೂ ಜಿಲ್ಲೆಗಳಲ್ಲಿ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಸೌಕರ್ಯ ಕಲ್ಪಿಸಲಾಗಿತ್ತು.
ವ್ಹೀಲ್‌ಚೇರ್‌ನಲ್ಲಿ ಪರೀಕ್ಷೆ
ಮಂಜೇಶ್ವರ: ವರ್ಕಾಡಿಯ ಸುಂಕದಕಟ್ಟೆ ಧರ್ಮನಗರದ ಇಬ್ರಾಹಿಂ ಎಂಬವರ ಪುತ್ರಿ, ಉಳ್ಳಾಲ ಹಜ್ರತ್ ಸಯ್ಯದ್ ಮದನಿ ಮಹಿಳಾ ಪಪೂ ಕಾಲೇಜಿನ ವಿದ್ಯಾರ್ಥಿನಿ ಆಯಿಷಾಳ ಕಾಲಿಗೆ ಕತ್ತಿ ತಾಗಿದ್ದರಿಂದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಹೀಗಾಗಿ ಪರೀಕ್ಷೆ ಬರೆಯುವ ಬಗ್ಗೆ ಚಿಂತೆಗೊಳಗಾಗಿದ್ದಳು. ವಿಷಯ ತಿಳಿದ ಕಾಸರಗೋಡು ಜಿಪಂ ಸದಸ್ಯ ಹರ್ಷಾದ್ ವರ್ಕಾಡಿ ಮಾತುಕತೆ ನಡೆಸಿದ ಬಳಿಕ ಪಿಯು ಶಿಕ್ಷಣ ಇಲಾಖೆ ವಿದ್ಯಾರ್ಥಿನಿಗೆ ವ್ಹೀಲ್‌ಚೇರ್ ಮೂಲಕ ಪರೀಕ್ಷೆ ಬರೆಯಲು ಅನುಮತಿ ನೀಡಿತ್ತು. ಅದರಂತೆ ಮನೆಯಿಂದ ತಲಪಾಡಿ ಗಡಿಯವರೆಗೆ ಕಾರಿನಲ್ಲಿ ಬಂದು, ಅಲ್ಲಿಂದ ಕಾಲೇಜಿನ ಪ್ರಾಂಶುಪಾಲೆ ಸಂಗೀತಾ ಅವರ ಕಾರಿನಲ್ಲಿ ತೊಕ್ಕೊಟ್ಟು ಪೆರ್ಮೆನ್ನೂರು ಸಂತ ಸೆಬಾಸ್ಟಿಯನ್ ಪಪೂ ಕಾಲೇಜು ತಲುಪಿ ಪರೀಕ್ಷೆ ಬರೆದಿದ್ದಾಳೆ.
ದೈಹಿಕ ಅಂತರ ಮರೆತರು
ಹಲವು ತಿಂಗಳ ಬಳಿಕ ಸ್ನೇಹಿತರನ್ನು ನೋಡುವ, ಮಾತನಾಡಿಸುವ ಭರದಲ್ಲಿ ವಿದ್ಯಾರ್ಥಿಗಳು ದೈಹಿಕ ಅಂತರ ಮರೆತಿದ್ದರು. ಒಂದೆಡೆ ಥರ್ಮಲ್ ಸ್ಕ್ರೀನಿಂಗ್ ಮೂಲಕ ಜ್ವರ ತಪಾಸಣೆ ನಡೆಸಿದರೆ, ಇನ್ನೊಂದೆಡೆ ಕೊನೇ ಕ್ಷಣದ ಸಿದ್ಧತೆ ವೇಳೆ, ನೋಟಿಸ್ ಬೋರ್ಡ್‌ನಲ್ಲಿ ತಮ್ಮ ಕೊಠಡಿಯನ್ನು ಹುಡುಕುವ ಭರದಲ್ಲಿ ಗುಂಪು ಗುಂಪಾಗಿ ಸೇರಿದ್ದರು. ಪರೀಕ್ಷೆ ಮುಗಿದ ಬಳಿಕವೂ ಹಲವು ಕೇಂದ್ರಗಳಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾಗಿತ್ತು.