ಜಿಲ್ಲೆಯಲ್ಲಿ ಪಿಯುಸಿ ಪೂರಕ ಪರೀಕ್ಷೆಯು ಸುಸೂತ್ರವಾಗಿ ನಡೆಸಲು ಸಹಕರಿಸಿ: ಅಪರ ಜಿಲ್ಲಾಧಿಕಾರಿ ಡಾ.ನಾಗರಾಜು ಸೂಚನೆ

Puc
Published on

ಮಂಡ್ಯ: ಜಿಲ್ಲೆಯಲ್ಲಿ ಪಿಯುಸಿ ಪೂರಕ ಪರೀಕ್ಷೆಯು ಆ.12 ರಿಂದ 25 ರವರೆಗೆ ನಡೆಯಲಿದೆ. ಪರೀಕ್ಷೆಯು ಸುಸೂತ್ರವಾಗಿ ನಡೆಯಲು ಸಹಕರಿಸಿ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಿಯುಸಿ ಪೂರಕ ಪರೀಕ್ಷೆಯ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಂಡ್ಯ ತಾಲೂಕಿನ 3, ನಾಗಮಂಗಲ 1, ಮಳವಳ್ಳಿ 1, ಮದ್ದೂರು 1, ಕೆ.ಆರ್.ಪೇಟೆ 1, ಶ್ರೀರಂಗಪಟ್ಟಣ 1, ಪಾಂಡವಪುರ 1 ಸೇರಿದಂತೆ ಒಟ್ಟು 9 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಅಧೀಕ್ಷಕರು, ಪ್ರಶ್ನೆ ಪತ್ರಿಕಾ ಪಾಲಕರು, ವಿಶೇಷ ಜಾಗೃತ ದಳದ ಸದಸ್ಯರು, ನೋಡಲ್ ಅಧಿಕಾರಿಗಳು, ತ್ರಿಸದಸ್ಯ ಕಮಿಟಿ ಮಾಡಿಕೊಳ್ಳಲಾಗಿದೆ ಎಂದರು.

ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಇರುವ ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚುವಂತೆ ತಿಳಿಸಲಾಗಿದೆ. ಪರೀಕ್ಷೆಯನ್ನು ಯಾವುದೇ ಲೋಪದೋಷಗಳಿಲ್ಲದೇ ನಡೆಸಲು ಸಹಕರಿಸಬೇಕು. ಅಧಿಕಾರಿಗಳನ್ನು ವೀಕ್ಷಕರನ್ನಾಗಿ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ನೇಮಕ ಮಾಡಿಲಾಗಿದೆ. ಬಹಳ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿ. ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳಿಗೆ ಕುಡಿಯುವ ನೀರು, ಶೌಚಗೃಹ ಹಾಗೂ ಇನ್ನಿತರ ಅಗತ್ಯ ಸೌರ್ಯಗಳು ಸಮಯಕ್ಕೆ ಸರಿಯಾಗಿ ಒದಗಿಸಲು ಅಗತ್ಯ ಕ್ರಮಕೈಗೊಳ್ಳಿ ಎಂದರು. ಜಿಲ್ಲಾಧಿಕಾರಿ ಕಚೇರಿಯ ಹಿರಿಯ ಸಹಾಯಕ ಸ್ವಾಮಿಗೌಡ, ಬಿಇಒಗಳಾದ ಮಹಾದೇವ, ಚಂದ್ರಕಾಂತಾ, ಚಿಕ್ಕಸ್ವಾಮಿ, ಜಿಲ್ಲಾ ಖಜಾನೆಯ ಉಪನಿರ್ದೇಶಕ ಸಿದ್ದಲಿಂಗಸ್ವಾಮಿ, ಪ್ರಾಂಶುಪಾಲ ಎಸ್. ಮಲ್ಲೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net