

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಮಂಗಳವಾರ ಪೇಟೆ ಮೆಣಸಿನಕಾಯಿ ಓಣಿ ನಿವಾಸಿ, ಮನೋಹರ ಗ್ರಂಥಮಾಲಾ ವ್ಯವಸ್ಥಾಪಕ, ಬರಹಗಾರ ಡಾ. ರಮಾಕಾಂತ ಗೋವಿಂದ ಜೋಶಿ (89) ಶನಿವಾರ ನಿಧನ ಹೊಂದಿದರು.
ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.
ಡಾ. ರಮಾಕಾಂತ ಜೋಶಿ ಗುಜರಾತಿನ ಆನಂದ ವಿಶ್ವ ವಿದ್ಯಾಲಯದಿಂದ ಸ್ನಾತಕೋತ್ತರ ಮತ್ತು ಪಿಎಚ್.ಡಿ ಪದವಿ ಪಡೆದು ಕಿಟೆಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕ, ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ಗ್ರಂಥಗಳ ಸಂಪಾದನೆ ಜತೆಗೆ ಅನುವಾದ ಕಾರ್ಯ ಸಹ ಮಾಡಿದ್ದಾರೆ. ದೀನಾನಾಥ ಮಲ್ಹೋತ್ರಾ ಇಂಗ್ಲಿಷಿನಲ್ಲಿ ಬರೆದ ಬುಕ್ ಪಬ್ಲಿಷಿಂಗ್ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದು, ಪುಸ್ತಕ ಪ್ರಕಾಶನ ಪ್ರಪಂಚದಲ್ಲಿ ಅದೊಂದು ಅತ್ಯಂತ ಪ್ರಮುಖ ಕೃತಿ ಎನಿಸಿದೆ.
ಮನೋಹರ ಗ್ರಂಥಮಾಲಾದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದ ಇವರು, ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಕಾಶಕರಾಗಿ ಸಲ್ಲಿಸಿದ ಸೇವೆಗೆ ದಿಲ್ಲಿಯ ಭಾರತೀಯ ಪ್ರಕಾಶಕರ ಒಕ್ಕೂಟದ ವಿಶಿಷ್ಟ ಪ್ರಕಾಶಕ ಪ್ರಶಸ್ತಿ, ಆಳ್ವಾ ನುಡಿಸಿರಿ ಪ್ರಶಸ್ತಿ, ಕನಕದಾಸ ಪ್ರಶಸ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅತ್ಯುತ್ತಮ ಪ್ರಕಾಶನ ಸಂಸ್ಥೆ ಹೀಗೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಧಾರವಾಡ ಜಿಲ್ಲೆಯ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷರೂ ಆಗಿದ್ದರು.