

ಕುಂದಗೋಳ: ತಾಲೂಕಿನ 26 ಗ್ರಾ.ಪಂ.ಗಳ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿಯನ್ನು ನೂತನ ಸದಸ್ಯರ ಸಮ್ಮುಖದಲ್ಲಿ ಪಟ್ಟಣದ ಸವಾಯಿ ಗಂಧರ್ವರ ಸ್ಮಾರಕ ಭವನದಲ್ಲಿ ಬುಧವಾರ ಘೊಷಿಸಲಾಯಿತು.
ರಾಜ್ಯ ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ 1993ರಿಂದ 2020 ರವರೆಗಿನ ಮೀಸಲಾತಿ ಪರಿಗಣಿಸಿ ಪುನರಾವರ್ತನೆಯಾಗದಂತೆ ಪ್ರಕಟಿಸಲಾಯಿತು. ಆರಂಭದಲ್ಲಿ ಅಧ್ಯಕ್ಷ ಸ್ಥಾನ, ನಂತರ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಘೊಷಿಸಲಾಯಿತು.
ತಾಲೂಕಿನ 26 ಗ್ರಾಮ ಪಂಚಾಯಿತಿ ಪೈಕಿ 2 ಪಂಚಾಯಿತಿ ಅಧ್ಯಕ್ಷ ಸ್ಥಾನ ಅನುಸೂಚಿತ ಜಾತಿಗೆ (ಎಸ್ಸಿ) ಮೀಸಲಾಗಿದ್ದವು. ಮೀಸಲಾತಿ ಪರಿಗಣಿಸಿದಾಗ 4 ಗ್ರಾ.ಪಂ. ಎಸ್ಸಿ ಮೀಸಲಾತಿಗೆ ಅರ್ಹವಾಗಿದ್ದವು. ಹೀಗಾಗಿ ಚೀಟಿ ಹಾಕಿ ಲಾಟರಿ ಎತ್ತಲಾಯಿತು. ಲಾಟರಿಯಲ್ಲಿ ಗುರುವಿನಹಳ್ಳಿ ಹಾಗೂ ಪಶುಪತಿಹಾಳ ಗ್ರಾಮ ಪಂಚಾಯಿತಿ ಎಸ್ಸಿ ಮೀಸಲಿಗೆ ಆಯ್ಕೆಯಾದವು.
ಇದೇ ರೀತಿ 2 ಅಧ್ಯಕ್ಷ ಸ್ಥಾನ ಅನುಸೂಚಿತ ವರ್ಗಕ್ಕೆ (ಎಸ್ಟಿ) ಮೀಸಲಾಗಿದ್ದವು. ಆದರೆ, ಈ ಮೀಸಲಾತಿ ಪಡೆಯಲು 11 ಗ್ರಾ.ಪಂ.ಗಳು ಅರ್ಹವಾಗಿದ್ದವು. ಹೀಗಾಗಿ ಚೀಟಿ ಹಾಕಿ ಲಾಟರಿ ಎತ್ತಿದಾಗ ಹಿರೇನರ್ತಿ ಮತ್ತು ಚಾಕಲಬ್ಬಿ ಗ್ರಾಪಂ ಎಸ್ಟಿ ಮೀಸಲಾತಿಗೆ ಆಯ್ಕೆಯಾದವು.
ಜಿಲ್ಲಾಧಿಕಾರಿ ನಿತೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ತಹಸೀಲ್ದಾರ್ ಬಸವರಾಜ ಮೇಳವಣಿಕಿ, ತಾಪಂ ಇಒ ಪ್ರಕಾಶ ಹಾಲಮ್ಮವರ, ಇತರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಲೂಕಿನ 26 ಗ್ರಾಮ ಪಂಚಾಯಿತಿ ಪೈಕಿ 23 ಪಂಚಾಯಿತಿಗೆ ಮಾತ್ರ ಚುನಾವಣೆ ನಡೆದಿದೆ. ಚಾಕಲಬ್ಬಿ, ಮಳಲಿ, ಪಶುಪತಿಹಾಳ ಗ್ರಾಪಂ ಅವಧಿ ಮುಗಿಯದ ಕಾರಣ ಚುನಾವಣೆ ನಡೆದಿಲ್ಲ. ಆದರೆ, ಎಲ್ಲ ಗ್ರಾಪಂಗೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಘೊಷಣೆಯಾಗಿದೆ.
ಮೂರು ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಮುಂಚಿತವಾಗಿ ಗೊತ್ತಾಗಿರುವುದರಿಂದ ಆಯಾ ಮೀಸಲು ಕ್ಷೇತ್ರದಲ್ಲಿ ತುರುಸಿನಿಂದ ಚುನಾವಣೆ ಜರುಗುವ ಸಾಧ್ಯತೆ ಇದೆ. ಈ ಕುರಿತು ಆಯಾ ಗ್ರಾಪಂನ ಕೆಲ ಸದಸ್ಯರು ಜಿಲ್ಲಾಧಿಕಾರಿ ನಿತೇಶ ಪಾಟೀಲ ಎದುರೇ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಜಿಲ್ಲಾಧಿಕಾರಿ, ಚುನಾವಣಾ ಆಯೋಗದ ಮಾರ್ಗಸೂಚಿಯಂತೆ 26 ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಿಸಲಾಗಿದೆ. ಇದರಲ್ಲಿ ನಮ್ಮದೇನು ಹಸ್ತಕ್ಷೇಪವಿಲ್ಲ ಎಂದು ಹೇಳಿದರು.
ಗ್ರಾಪಂವಾರು ಮೀಸಲಾತಿ ವಿವರ
ರೊಟ್ಟಿಗವಾಡ: ಹಿಂದುಳಿದ ಅ, ವರ್ಗ (ಅಧ್ಯಕ್ಷ ), ಸಾಮಾನ್ಯ ಮಹಿಳೆ (ಉಪಾಧ್ಯಕ್ಷ).
ಕಮಡೊಳ್ಳಿ: ಹಿಂದುಳಿದ ಅ ವರ್ಗ; ಎಸ್ಟಿ.
ಯಲಿವಾಳ: ಹಿಂದುಳಿದ ಅ ವರ್ಗ ; ಸಾಮಾನ್ಯ ಮಹಿಳೆ.
ಸಂಶಿ: ಹಿಂದುಳಿದ ಅ ವರ್ಗ ಮಹಿಳೆ; ಸಾಮಾನ್ಯ.
ಯರಗುಪ್ಪಿ: ಹಿಂದುಳಿದ ಅ ವರ್ಗ ಮಹಿಳೆ; ಸಾಮಾನ್ಯ.
ಕುಬಿಹಾಳ: ಹಿಂದುಳಿದ ಅ ವರ್ಗ ಮಹಿಳೆ; ಸಾಮಾನ್ಯ.
ಇಂಗಳಗಿ: ಹಿಂದುಳಿದ ಅ ವರ್ಗ ಮಹಿಳೆ; ಎಸ್ಸಿ.
ಹಿರೇಹರಕುಣಿ: ಹಿಂದುಳಿದ ಬ ವರ್ಗ; ಸಾಮಾನ್ಯ ಮಹಿಳೆ.
ಬೆಟದೂರ: ಹಿಂದುಳಿದ ಬ ವರ್ಗ; ಸಾಮಾನ್ಯ ಮಹಿಳೆ.
ಗುಡೇನಕಟ್ಟಿ: ಸಾಮಾನ್ಯ; ಎಸ್ಸಿ ಮಹಿಳೆ.
ಯರೇಬೂದಿಹಾಳ: ಸಾಮಾನ್ಯ; ಹಿಂದುಳಿದ ಅ ವರ್ಗ ಮಹಿಳೆ.
ಹಿರೇಗುಂಜಳ: ಸಾಮಾನ್ಯ; ಸಾಮಾನ್ಯ ಮಹಿಳೆ.
ಶಿರೂರ: ಸಾಮಾನ್ಯ; ಸಾಮಾನ್ಯ ಮಹಿಳೆ.
ರಾಮನಕೊಪ್ಪ: ಸಾಮಾನ್ಯ; ಹಿಂದುಳಿದ ಬ ವರ್ಗ ಮಹಿಳೆ.
ಬು ತರ್ಲಘಟ್ಟ: ಸಾಮಾನ್ಯ; ಎಸ್ಟಿ ಮಹಿಳೆ.
ಮತ್ತಿಗಟ್ಟಿ: ಸಾಮಾನ್ಯ; ಹಿಂದುಳಿದ ಅ, ವರ್ಗ ಮಹಿಳೆ.
ಕಳಸ: ಸಾಮಾನ್ಯ ಮಹಿಳೆ; ಸಾಮಾನ್ಯ.
ಹರ್ಲಾಪುರ: ಸಾಮಾನ್ಯ ಮಹಿಳೆ; ಸಾಮಾನ್ಯ.
ಗುಡಿಗೇರಿ: ಸಾಮಾನ್ಯ ಮಹಿಳೆ; ಸಾಮಾನ್ಯ.
ಗೌಡಗೆರೆ: ಸಾಮಾನ್ಯ ಮಹಿಳೆ; ಹಿಂದುಳಿದ ಅ ವರ್ಗ.
ದೇವನೂರು: ಸಾಮಾನ್ಯ ಮಹಿಳೆ; ಹಿಂದುಳಿದ ಅ ವರ್ಗ.
ಮಳಲಿ: ಸಾಮಾನ್ಯ ಮಹಿಳೆ; ಹಿಂದುಳಿದ ಬ ವರ್ಗ.
ಗುರುವಿನಹಳ್ಳಿ: ಎಸ್ಸಿ; ಹಿಂದುಳಿದ ಅ ವರ್ಗ ಮಹಿಳೆ.
ಪಶುಪತಿಹಾಳ: ಎಸ್ಸಿ ಮಹಿಳೆ; ಹಿಂದುಳಿದ ಅ ವರ್ಗ ಮಹಿಳೆ.
ಚಾಕಲಬ್ಬಿ: ಎಸ್ಸಿ; ಸಾಮಾನ್ಯ ಮಹಿಳೆ.
ಹಿರೇನರ್ತಿ: ಎಸ್ಸಿ ಮಹಿಳೆ; ಹಿಂದುಳಿದ ಅ ವರ್ಗ.