ಓದುಗರನ್ನು ಹಿಡಿದಿಟ್ಟುಕೊಳ್ಳುವ ವರದಿಗಳು ಪ್ರಕಟವಾಗಲಿ

26Kush01
ಕುಶಾಲನಗರ ವಿವೇಕಾನಂದ ಕಾಲೇಜು ಸಭಾಂಗಣದಲ್ಲಿ ಶನಿವಾರ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿಹಬ್ಬ ಸಂಭ್ರಮದ ಪ್ರಯುಕ್ತ ಆಯೋಜಿಸಿದ್ದ ಪರಿಸರ ಮತ್ತು ಮಾಧ್ಯಮ ವಿಷಯಗಳ ಸಂವಾದ ಕಾರ್ಯಕ್ರಮವನ್ನು ಕ್ಲಾರಾ ರೇಷ್ಮಾ ಉದ್ಘಾಟಿಸಿದರು. ಮಹೇಶ್ ಅಮೀನ್, ಚಂದ್ರಮೋಹನ್, ಪ್ರಭುದೇವ, ನಾಗರಾಜ್ ಶೆಟ್ಟಿ, ಶಿವರಾಜ್, ಗಣೇಶ್ ಇತರರು ಇದ್ದರು.
Published on

ಕುಶಾಲನಗರ: ಪತ್ರಿಕೆಗಳು ಓದುಗರನ್ನು ಹಿಡಿದಿಟ್ಟುಕೊಳ್ಳುವಂತಹ ವರದಿಗಳನ್ನು ನಿರಂತರವಾಗಿ ಪ್ರಕಟಿಸಬೇಕು ಎಂದು ಕುಶಾಲನಗರ ವಿವೇಕಾನಂದ ಎಜುಕೇಷನ್ ಟ್ರಸ್ಟ್ ಆಡಳಿತ ಅಧಿಕಾರಿ ಮಹೇಶ್ ಅಮೀನ್ ಅಭಿಪ್ರಾಯ ವ್ಯಕ್ತಪಡಿಸಿದರು.


ಕುಶಾಲನಗರ ವಿವೇಕಾನಂದ ಕಾಲೇಜು ಸಭಾಂಗಣದಲ್ಲಿ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕಾಲೇಜು ಆಡಳಿತ ಮಂಡಳಿ ಸಹಯೋಗದೊಂದಿಗೆ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿಹಬ್ಬ ಸಂಭ್ರಮದ ಪ್ರಯುಕ್ತ ಪರಿಸರ ಮತ್ತು ಮಾಧ್ಯಮ ವಿಷಯಗಳ ಬಗ್ಗೆ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮೊಬೈಲ್‌ನಲ್ಲಿ ಮುಳುಗಿರುವ ಯುವ ಪೀಳಿಗೆ ಓದುವ ಹವ್ಯಾಸವನ್ನು ಮರೆತಂತಿದೆ ಎಂದು ವಿಷಾದ ವ್ಯಕ್ತಪಡಿಸಿದರು.


ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ಮಾತನಾಡಿ, ವಿದ್ಯಾರ್ಥಿಗಳು ದಿನನಿತ್ಯದ ಆಗುಹೋಗುಗಳ ಬಗ್ಗೆ ಅರಿವು ಪಡೆಯಬೇಕು. ಪತ್ರಿಕೆಯನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಈ ಮೂಲಕ ಸಾಮಾನ್ಯ ಜ್ಞಾನ ಗಳಿಸಲು ಸಾಧ್ಯ ಎಂದರಲ್ಲದೆ, ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ಹೊಂದಬೇಕು ಎಂದರು.


ಕಾಲೇಜಿನ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಮಾನ್ಯಾ, ಪರಿಸರ ಸಂರಕ್ಷಣೆ ಬಗ್ಗೆ ಮತ್ತು ಎಂಜಿಎಂ ಪದವಿ ಕಾಲೇಜಿನ ವಿದ್ಯಾರ್ಥಿನಿ ಖುಷಿ ‘ಮಾಧ್ಯಮ ಹಾಗೂ ಸಮಾಜ’ ಕುರಿತು ವಿಷಯ ಮಂಡಿಸಿದರು.


ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ನಿರ್ದೇಶಕ ಟಿ.ಆರ್.ಪ್ರಭುದೇವ್ ಮಾತನಾಡಿದರು.


ಸನ್ಮಾನ: ಕಳೆದ ಸಾಲಿನ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಬಿ.ಎಸ್.ತನುಷಾ ಪಾಲಕರನ್ನು ಮತ್ತು ವಾಣಿಜ್ಯ ವಿಭಾಗದಲ್ಲಿ ಹೆಚ್ಚಿನ ಅಂಕ ಗಳಿಸಿದ ಎಂ.ವೈ.ನಿಹಾರಿಕಾ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.


ವಿವೇಕಾನಂದ ಪಿಯು ಕಾಲೇಜಿನ ಪ್ರಾಂಶುಪಾಲೆ ಕ್ಲಾರಾ ರೇಷ್ಮಾ ಅಧ್ಯಕ್ಷತೆ ವಹಿಸಿದ್ದರು. ಪರಿಸರ ಮತ್ತು ಮಾಧ್ಯಮ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು. ಖಜಾಂಚಿ ಕುಡೆಕಲ್ ಗಣೇಶ್, ಜಿಲ್ಲಾ ನಿರ್ದೇಶಕ ಶಂಶುದ್ಧೀನ್, ಸಂಘದ ನಿರ್ದೇಶಕರಾದ ವಿನೋದ್, ಮಹಮ್ಮದ್ ಮುಸ್ತಾಫಾ, ಜಯಪ್ರಕಾಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net