

ಬೆಳಗಾವಿ: ಗ್ರಾಪಂ ಚುನಾವಣೆ ಅಖಾಡ ದಿನೇದಿನೆ ರಂಗೇರುತ್ತಿದ್ದು, ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಲಕ್ಷಾಂತರ ರೂ. ಖರ್ಚು ಮಾಡಲು ಮುಂದಾಗಿದ್ದಾರೆ. ಲೆಕ್ಕ ಪರಿಶೋಧನೆ ಮಾಡದೆ ಇರುವುದನ್ನೇ ಬಂಡವಾಳ ಮಾಡಿಕೊಂಡಿರುವ ಬಹುತೇಕ ಅಭ್ಯರ್ಥಿಗಳು, ಗೆಲ್ಲಲು ತೆರೆಮರೆಯಲ್ಲಿ ತಂತ್ರ ನಡೆಸಿದ್ದಾರೆ.
ಪ್ರಚಾರದ ಲೆಕ್ಕ ನೀಡಬೇಕೆಂಬ ನಿಯಮ ಇಲ್ಲದ್ದರಿಂದ ಇದನ್ನೇ ವರದಾನವನ್ನಾಗಿ ಮಾಡಿಕೊಂಡ ಸ್ಪರ್ಧಿಗಳು ಗೆಲುವಿಗೆ ಹಣ ಹಂಚಿಕೆ ಮಾಡಲೂ ಮುಂದಾಗಿದ್ದಾರೆ.
ದೇಗುಲಕ್ಕೆ ದೇಣಿಗೆ: ಪ್ರತಿ ವಾರ್ಡ್‌ಗಳಲ್ಲಿ 5ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವುದರಿಂದ ಮತದಾರರನ್ನು ಸೆಳೆಯಲು ಬಾಡೂಟ, ಸಾರಿಗೆ ವೆಚ್ಚ ಸೇರಿ ಇನ್ನಿತರ ಖರ್ಚು ಸೇರಿ ಒಬ್ಬೊಬ್ಬ ಅಭ್ಯರ್ಥಿಯೂ ಕನಿಷ್ಠ 2 ರಿಂದ 3.5 ಲಕ್ಷ ರೂ. ವರೆಗೆ ಖರ್ಚು ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು, ಅವಿರೋಧವಾಗಿ ಆಯ್ಕೆಗೊಳ್ಳುವ ಅಭ್ಯರ್ಥಿಗಳು ಗ್ರಾಮದ ದೇಗುಲಕ್ಕೆ 2 ರಿಂದ 4 ಲಕ್ಷ ರೂ. ವರೆಗೆ ದೇಣಿಗೆ ನೀಡುತ್ತಿರುವುದೂ ತಿಳಿದು ಬಂದಿದೆ.
ಪಕ್ಷಗಳೇ ಕಾರಣ: 30 ವರ್ಷಗಳಿಂದ ಗ್ರಾಪಂ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳು ನೇರವಾಗಿ ಭಾಗವಹಿಸುತ್ತಿರಲಿಲ್ಲ. ಹಾಗಾಗಿ ಅಭ್ಯರ್ಥಿಗಳ ಚುನಾವಣಾ ಪ್ರಚಾರದ ವೆಚ್ಚ 20 ಸಾವಿರ ರೂ. ದಾಟುತ್ತಿರಲಿಲ್ಲ. ಆದರೆ, ಇದೀಗ ಪ್ರಮುಖ ರಾಜಕೀಯ ಪಕ್ಷಗಳು ಗ್ರಾಪಂ ಹಿನ್ನೆಲೆಯಲ್ಲಿ ನಿಂತು ಅಭ್ಯರ್ಥಿಗಳನ್ನು ಹುರಿಗೊಳಿಸುತ್ತಿರುವುದು ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಲು ಮತ್ತು ಪ್ರಚಾರದ ವೆಚ್ಚದ ದುಪ್ಪಟ್ಟಾಗಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗವು ಪ್ರಚಾರದ ವೆಚ್ಚ ನಿಗದಿಪಡಿಸಬೇಕು. ಇಲ್ಲದಿದ್ದರೆ ಆರ್ಥಿಕ ಸಬಲರು ಮತ ಖರೀದಿಸುವ ಸಾಧ್ಯತೆ ಹೆಚ್ಚಿದೆ. 300 ರಿಂದ 400 ಮತಗಳಿರುವ ಒಂದು ವಾರ್ಡ್‌ನಲ್ಲಿ ಕನಿಷ್ಠ 5 ರಿಂದ 8 ಜನ ಸ್ಪರ್ಧಿಸುತ್ತಿದ್ದಾರೆ. ಒಬ್ಬೊಬ್ಬ ಅಭ್ಯರ್ಥಿ ಕನಿಷ್ಠ 2.5 ರಿಂದ 3 ಲಕ್ಷ ರೂ. ವರೆಗೆ ಖರ್ಚು ಮಾಡುತ್ತಾರೆ, ಅಂದರೆ ಒಂದು ವಾರ್ಡ್‌ನಲ್ಲಿ 25 ರಿಂದ 30 ಲಕ್ಷ ರೂ. ಖರ್ಚು ಮಾಡಿದಂತಾಗುತ್ತದೆ. ಹಾಗಾಗಿ ಚುನಾವಣೆ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ವಕೀಲ ಸುರೇಶ ಕುದರಿ, ಮಾರುತಿ ಎನ್.ಗೌಡರ್ ವಿನಂತಿಸಿದ್ದಾರೆ.
ಜಿಲ್ಲೆಯ 477 ಗ್ರಾಪಂ ವ್ಯಾಪ್ತಿಯ ಮೊದಲ ಹಂತದಲ್ಲಿ ಬೆಳಗಾವಿ, ಖಾನಾಪುರ, ಹುಕ್ಕೇರಿ, ಬೈಲಹೊಂಗಲ, ಕಿತ್ತೂರು, ಗೋಕಾಕ ಮತ್ತು ಮೂಡಲಗಿ ತಾಲೂಕಿನ 259 ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ. ಈ ವ್ಯಾಪ್ತಿಯ 3,779 ಸದಸ್ಯ ಸ್ಥಾನಗಳ ಪೈಕಿ 3,393 ಸ್ಥಾನಗಳಿಗೆ ಒಟ್ಟು 7,176 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಎರಡನೇ ಹಂತದಲ್ಲಿ ಹುಕ್ಕೇರಿ, ಚಿಕ್ಕೋಡಿ, ಸವದತ್ತಿ, ರಾಮದುರ್ಗ, ಅಥಣಿ, ರಾಯಬಾಗ, ಕಾಗವಾಡ, ನಿಪ್ಪಾಣಿ ತಾಲೂಕುಗಳಲ್ಲಿ ಡಿ. 12ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಡಿ.16 ಕೊನೆಯ ದಿನ.
ಚುನಾವಣಾ ಆಯೋಗವು ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಪಂ ಚುನಾವಣೆಗಳಲ್ಲಿ ವೆಚ್ಚ ನಿಗದಿಪಡಿಸಿದೆ. ಆದರೆ, ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ದೈನಂದಿನ ವೆಚ್ಚ ಪರಿಶೀಲಿಸಲು ಲೆಕ್ಕ ಪರಿಶೋಧಕರು ಮತ್ತು ಲೆಕ್ಕಿಗರನ್ನು ನೇಮಕ ಮಾಡುವುದಿಲ್ಲ. ಹೀಗಾಗಿ ಅವರಿಗೆ ಚುನಾವಣಾ ಪ್ರಚಾರದ ವೆಚ್ಚ ನಿಗದಿ ಇಲ್ಲ. | ಎಂ.ಜಿ. ಹಿರಮೇಠ, ಜಿಲ್ಲಾ ಚುನಾವಣಾಧಿಕಾರಿ
| ಮಂಜುನಾಥ ಕೋಳಿಗುಡ್ಡ, ಬೆಳಗಾವಿ