

ತುಮಕೂರು: ತಿಪಟೂರು ನಗರಸಭೆ ಸೇರಿ ಜಿಲ್ಲೆಯ 4 ಪುರಸಭೆ, 3 ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.
4 ಪುರಸಭೆ ಹಾಗೂ 3 ಪಟ್ಟಣ ಪಂಚಾಯಿತಿಗಳಿಗೆ 2018ರ ಆಗಸ್ಟ್ 30ರಂದು ಚುನಾವಣೆ ನಡೆದು 2 ವರ್ಷಗಳಾಗಿದ್ದರೂ ಈವರೆಗೆ ಚುನಾಯಿತ ಮಂಡಳಿ ಅಸ್ತಿತ್ವಕ್ಕೆ ಬಂದಿರಲಿಲ್ಲ. ಇನ್ನು ತಿಪಟೂರು ನಗರಸಭೆಗೆ 2019ರ ಮೇ ಅಲ್ಲಿ ಚುನಾವಣೆ ನಡೆದಿತ್ತು. ತಿಪಟೂರು ಹೊರತುಪಡಿಸಿ ಉಳಿದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಅಧಿಸೂಚನೆಯನ್ನು 2018ರ ಸೆ.3ರಂದು ಹೊರಡಿಸಿತ್ತು. ಈ ಬಗ್ಗೆ ಹೈಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಕೆಯಾಗಿತ್ತು. ಹಾಗಾಗಿ, 2019ರಲ್ಲಿ ಸರ್ಕಾರ ಈ ಮೀಸಲಾತಿ ಅಧಿಸೂಚನೆ ಹಿಂಪಡೆದಿತ್ತು. ಅಂದಿನಿಂದ ಈವರೆಗೆ ಮೀಸಲಾತಿ ಪ್ರಕಟಣೆ ವಿಳಂಬದಿಂದಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದಿದ್ದವರಿಗೆ ಅಧಿಕಾರ ಅನುಭವಿಸುವ ಭಾಗ್ಯ ದೊರೆತಿರಲಿಲ್ಲ.
ತಿಪಟೂರು ನಗರಸಭೆ: ತಿಪಟೂರು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮೀಸಲಾತಿ ಪ್ರಕಟಿಸಲಾಗಿದ್ದು, ಉಭಯ ಸ್ಥಾನಗಳು ‘ಸಾಮಾನ್ಯ’ ವರ್ಗದ ಪಾಲಾಗಿದೆ. ಒಟ್ಟು 31 ಸ್ಥಾನಗಳ ನಗರಸಭೆಯಲ್ಲಿ ಬಿಜೆಪಿ-11, ಕಾಂಗ್ರೆಸ್-09, ಜೆಡಿಎಸ್-05 (ಓರ್ವ ಸದಸ್ಯರು ಮೃತರಾಗಿದ್ದಾರೆ) ಹಾಗೂ 6 ಪಕ್ಷೇತರರಿದ್ದಾರೆ. ಯಾರಿಗೂ ಸ್ಪಷ್ಟ ಬಹುಮತ ಇಲ್ಲದ ಹಿನ್ನೆಲೆಯಲ್ಲಿ ಅತಿಹೆಚ್ಚು ಸ್ಥಾನ ಗೆದ್ದಿರುವ ಬಿಜೆಪಿ ನಗರಸಭೆ ಗದ್ದುಗೆ ಹಿಡಿಯಲು ಸರ್ವರೀತಿಯ ಪ್ರಯತ್ನ ಮಾಡಲಿದೆ.
4 ಪುರಸಭೆಗಳಿಗೆ ಮೀಸಲು: ಜಿಲ್ಲೆಯ 4 ಪುರಸಭೆ ಹಾಗೂ 3 ಪಟ್ಟಣ ಪಂಚಾಯಿತಿಗಳಿಗೆ ಆಗಸ್ಟ್ 30,2018ರಲ್ಲಿ ಚುನಾವಣೆ ನಡೆದಿತ್ತು. ಆದರೆ, ಮೀಸಲು ಸಂಬಂಧಿಸಿದಂತೆ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಸ್ಥಳೀಯ ಸಂಸ್ಥೆಗಳ ಮೀಸಲು ಪ್ರಕಟ ವಿಳಂಬವಾಗಿತ್ತು. ಹಾಗಾಗಿ, 2 ವರ್ಷಗಳಿಂದ ಚುನಾಯಿತ ಮಂಡಳಿ ಅಸ್ತಿತ್ವಕ್ಕೆ ಬಂದಿರಲಿಲ್ಲ. ಮಧುಗಿರಿ ಪುರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿರಿಸಲಾಗಿದೆ.
ಕುಣಿಗಲ್ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗ, ಉಪಾಧ್ಯಕ್ಷ ಸ್ಥಾನ-ಸಾಮಾನ್ಯಮಹಿಳೆ, ಚಿಕ್ಕನಾಯಕನಹಳ್ಳಿ ಪುರಸಭೆ ಅಧ್ಯಕ್ಷ-ಪರಿಶಿಷ್ಟ ಜಾತಿ, ಉಪಾಧ್ಯಕ್ಷ-ಬಿಸಿಎಂಎ (ಮಹಿಳೆ) ಹಾಗೂ ಪಾವಗಡ ಪುರಸಭೆ ಅಧ್ಯಕ್ಷ ಸ್ಥಾನ-ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನ-ಸಾಮಾನ್ಯ ಮಹಿಳೆ ಮೀಸಲು ಹೊರಡಿಸಲಾಗಿದೆ.
ಪಟ್ಟಣ ಪಂಚಾಯಿತಿ: ಕೊರಟಗೆರೆ ಪಪಂ ಅಧ್ಯಕ್ಷ ಸ್ಥಾನ ಪ.ಪಂಗಡ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ತುರುವೇಕೆರೆ ಪಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯವರ್ಗಕ್ಕೆ ಮೀಸಲಾಗಿದೆ. ಗುಬ್ಬಿ ಪಪಂ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
ಶಿರಾ ನಗರಸಭೆಗೆ ಚುನಾವಣೆ ನಡೆದಿಲ್ಲ !: ಶಿರಾ ನಗರಸಭೆ ಚುನಾಯಿತ ಮಂಡಳಿಯ ಅಧಿಕಾರವು 2018ರ ಏಪ್ರಿಲ್ 8ಕ್ಕೆ ಅಂತ್ಯಗೊಂಡಿದ್ದು ವಾರ್ಡ್ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಕೆಲವರು ಆಕ್ಷೇಪಣೆ ಸಲ್ಲಿಸಿದ್ದರಿಂದ ಚುನಾವಣೆಯ ನಡೆದಿರಲಿಲ್ಲ. ಹಾಗಾಗಿ, ಶಿರಾ ಬೈಎಲೆಕ್ಷನ್ ಬಳಿಕ ನಗರಸಭೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ.