

ಮಡಿಕೇರಿ: ಕೇವಲ ಬರೆಯುವುದನ್ನು ಮಾತ್ರ ಸಾಹಿತ್ಯ ಸೇವೆ ಎಂದು ಹೇಳಲಾಗುವುದಿಲ್ಲ, ಬರಹವನ್ನು ಪ್ರಕಾಶನದ ರೂಪದಲ್ಲಿ ಹೊರತರುವುದು ಮತ್ತು ಜನರ ಮನೆಮನೆಗೆ ತಲುಪಿಸುವುದು ಕೂಡ ಸಾಹಿತ್ಯ ಸೇವೆ ಎಂದು ಹಿರಿಯ ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ ಅಭಿಪ್ರಾಯಪಟ್ಟರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಕೊಡವ ಮಕ್ಕಡ ಕೂಟದ ೮೪ನೇ ಪುಸ್ತಕ ಬಾಚರಣಿಯಂಡ ರಾಣು ಅಪ್ಪಣ್ಣರವರ ಪ್ರಕೃತಿ ಆರಾಧನೆ ಪಿಂಞ ಕೃಷಿ ಸಂಸ್ಕೃತಿ, ೮೫ನೇ ಪುಸ್ತಕ ಕೊಡಗ್‌ರ ವಾಣಿಜ್ಯ ಬೊಳೆ ಹಾಗೂ ೮೬ನೇ ಪುಸ್ತಕ ಬಾಚರಣಿಯಂಡ ಅಪ್ಪಣ್ಣ ಅವರ ಜನಪದ ಸಿರಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಸಾಹಿತಿಗಳಿಗೆ ಅಷ್ಟು ಪ್ರೋತ್ಸಾಹ ಸಿಗುತ್ತಿರಲಿಲ್ಲ. ಆದರೆ, ಪ್ರಸ್ತುತ ದಿನಗಳಲ್ಲಿ ದೃಶ್ಯ ಮಾಧ್ಯಮ, ಶ್ರವಣ ಮಾಧ್ಯಮ ಜನರಿಗೆ ಅದರ ಸಾರವನ್ನು ತಿಳಿಸಿ, ಇಂದಿನ ಸಮಾಜವನ್ನು ಜಾಗೃತ ಮಾಡುವಲ್ಲಿ ಮುಖ್ಯ ಪಾತ್ರವಹಿಸುತ್ತಿದೆ ಎಂದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎಂ.ಎ ಕೊಡವ ವಿದ್ಯಾರ್ಥಿಗಳಿಗೆ ಅಧ್ಯಯನ ನಡೆಸುವ ದೃಷ್ಟಿಯಿಂದ ತಮ್ಮ ಅನುಭವದ ವಿಷಯಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರತರಲಾಗಿದೆ. ಆಧುನೀಕರಣಗೊಳ್ಳುತ್ತಿರುವ ಸಮಾಜದಲ್ಲಿ ಹಳೆಯ ಕಾಲದ ಬದುಕು, ಸಂಸ್ಕೃತಿ, ಜನಪದ ಕ್ರೀಡೆ, ಜಾನಪದ ರಂಗಭೂಮಿ, ವೈದ್ಯ ಪದ್ಧತಿ ಸೇರಿದಂತೆ ವಿವಿಧ ಕ್ಷೇತ್ರದ ಮಾಹಿತಿಯನ್ನು ಜನಪದ ಸಿರಿ ಪುಸ್ತಕದಲ್ಲಿ ಲಿಖಿತ ರೂಪದಲ್ಲಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ದಾನಿಗಳ ಸಹಕಾರ ಮತ್ತು ಪ್ರೋತ್ಸಾಹದಿಂದ ಸಾಹಿತಿಗಳ ಬೆಳವಣಿಗೆ ಸಾಧ್ಯ. ಈ ನಿಟ್ಟಿನಲ್ಲಿ ಕೊಡವ ಮಕ್ಕಡ ಕೂಟ ನಿರಂತರವಾಗಿ ಸಾಹಿತ್ಯಾಸಕ್ತರನ್ನು ಪ್ರೋತ್ಸಾಹಿಸುವ ಮೂಲಕ ಹಲವು ವಿಷಯಗಳನ್ನು ಒಳಗೊಂಡ ಕನ್ನಡ, ಇಂಗ್ಲಿಷ್, ಕೊಡವ ಪುಸ್ತಕಗಳನ್ನು ಹೊರತಂದಿರುವುದು ಶ್ಲಾಘನೀಯ ಎಂದರು
ಹಿರಿಯ ಸಾಹಿತಿ ಬಾಚರಣಿಯಂಡ ರಾಣು ಅಪ್ಪಣ್ಣ ಮಾತನಾಡಿ, ಸಾಹಿತ್ಯ ಎನ್ನುವುದು ವ್ಯಕ್ತಿಯ ಮನದಾಳದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಇರುತ್ತದೆ. ಪ್ರೋತ್ಸಾಹ ನೀಡಿದರೆ ಮಾತ್ರ ಸಾಹಿತ್ಯದ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಹಿಂದಿನ ದಿನಗಳಲ್ಲಿ ಮಾಧ್ಯಮಗಳು ಅಷ್ಟು ಪ್ರಭಾವಿಯಾಗಿರಲಿಲ್ಲ್ಲ. ಪ್ರಸ್ತುತ ದೃಶ್ಯ ಮಾಧ್ಯಮ, ಸುದ್ದಿ ಮಾಧ್ಯಮ ಹೆಚ್ಚು ಪರಿಣಾಮಕಾರಿಯಾಗಿದ್ದು, ಎಲ್ಲಾ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದೆ ಎಂದರು.
ಕೃಷಿ ಕ್ರಾಂತಿಯಾಗಲಿ ಎನ್ನುವ ಉದ್ದೇಶದಿಂದ ಕೊಡಗ್‌ರ ವಾಣಿಜ್ಯ ಬೊಳೆ ಪುಸ್ತಕದಲ್ಲಿ ಪ್ರತಿಯೊಂದು ಬೆಳೆಗೆ ಸಂಬಂಧಿಸಿದ ಸಂಶೋಧನಾ ಕೇಂದ್ರ, ವೈಜ್ಞಾನಿಕ ಸಂಶೋಧನೆಯ ಫಲಿತಾಂಶ, ಬೇರೆ ಬೇರೆ ಬರಹಗಾರರ ಮತ್ತು ಸಂಶೋಧನಾ ಕೇಂದ್ರದ ಅಧಿಕಾರಿಗಳು ಪ್ರಕಟ ಪಡಿಸಿದ ಮಾಹಿತಿಯನ್ನು ಅಳವಡಿಸಲಾಗಿದೆ. ಪ್ರಕೃತಿ ಆರಾಧನೆ ಪಿಂಞ ಕೃಷಿ ಸಂಸ್ಕೃತಿ ಪುಸ್ತಕದಲ್ಲಿ ಕೊಡಗಿನ ಜನರ ಸಂಸ್ಕೃತಿಯ ಭಾಗವಾಗಿರುವ ಪ್ರಕೃತಿ ಪೂಜೆ, ಕೊಡವ ಮೂಲ, ಹಳೇ ಕಾಲದ ಬದುಕು, ಕೊಡಗಿನ ಬೆಳೆ, ವ್ಯವಸಾಯ ಕ್ರಮ, ಬೇಟೆ ಪದ್ಧತಿ, ವಿವಿಧ ಕಾಯಿಲೆಗಳು ಸೇರಿದಂತೆ ಹಲವು ವಿಚಾರಗಳಿವೆ ಎಂದು ತಿಳಿಸಿದರು.
ಕೊಡವ ಮಕ್ಕಡ ಕೂಟದ ವತಿಯಿಂದ ನಿರಂತರವಾಗಿ ಸಾಹಿತ್ಯಾಸಕ್ತರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವಾಗುತ್ತಿದೆ. ಕೊಡಗಿನ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕೂಟ ೧೦೦ ಕ್ಕೂ ಅಧಿಕ ಪುಸ್ತಕಗಳನ್ನು ಹೊರ ತರಲಿ ಎಂದು ಶುಭ ಹಾರೈಸಿದರು.
ಕೊಡಗ್‌ನ ವಾಣಿಜ್ಯ ಬೆಳೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕೊಡಗು ಸಾಮಾಜಿಕ ಅರಣ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಹಾಲಿ ಪ್ರಬಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಡುವಂಡ ಸುರೇಶ್ ಚಂಗಪ್ಪ, ಕೊಡವ ಮಕ್ಕಡ ಕೂಟ ಸುಮಾರು ೮೬ ಪುಸ್ತಕಗಳನ್ನು ಹೊರ ತಂದಿದೆ. ಜತೆಗೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದೆ. ಆ ಮೂಲಕ ಯುವ ಪೀಳಿಗೆಗೆ ಸಾಂಸ್ಕೃತಿಕ ಚಟುವಟಿಕೆ ಮತ್ತು ಹಿಂದಿನ ಆಚಾರ, ವಿಚಾರವನ್ನು ಮುಂದುವರೆಸಿಕೊಂಡು ಹೋಗಲು ಪ್ರೇರೆಪಿಸುತ್ತಿದೆ ಎಂದರು.
ಪ್ರಕೃತಿ ಆರಾಧನೆ ಪಿಂಞ ಕೃಷಿ ಸಂಸ್ಕೃತಿ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಜ್ಞಾನೋದಯ ಆಂಗ್ಲ ಮಾದ್ಯಮ ವಿದ್ಯಾಸಂಸ್ಥೆಯ ಆಡಳಿತಧಿಕಾರಿ ಹಾಗೂ ಪ್ರಾಂಶುಪಾಲರಾದ ಚೀಯಕಪೂವಂಡ ಶ್ವೇತನ್ ಚಂಗಪ್ಪ, ಅಪ್ಪಣ್ಣ ಹಾಗೂ ರಾಣು ಅಪ್ಪಣ್ಣ ಅವರು ವಿವಿಧ ದೇಶ ಸುತ್ತಿದ್ದು, ಎಲ್ಲಾ ವಿಚಾರಗಳನ್ನು ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ. ಇವರ ಜ್ಞಾನ ಅಪಾರ, ಇವರುಗಳು ಕೊಡಗಿನ ನಿಘಂಟು ಇದ್ದಂತೆ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ಕೊಡವ ಮಕ್ಕಡ ಕೂಟ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿದೆ. ಜಿಲ್ಲೆಯ ಹಲವು ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಒಟ್ಟು ೮೬ ಕೃತಿಗಳನ್ನು ಬಿಡುಗಡೆ ಮಾಡಲಾಗಿದ್ದು, ಏಪ್ರಿಲ್ ಅಂತ್ಯದೊಳಗೆ ೧೪ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿದ್ದು, ಈಗಾಗಲೇ ತಯಾರಿ ಹಂತದಲ್ಲಿದೆ. ಆ ಮೂಲಕ ಒಟ್ಟು ೧೦೦ ಪುಸ್ತಕಗಳನ್ನು ಬಿಡುಗಡೆಗೊಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಖಜಾಂಚಿ ಮೂವೇರ ಧರಣಿ ಗಣಪತಿ ಜನಪದ ಸಿರಿ ಪುಸ್ತಕ ಬಿಡುಗಡೆಗೊಳಿಸಿ, ಶುಭಹಾರೈಸಿದರು.