

ರಾಮದುರ್ಗ: ಭೂ ಮಾಲೀಕರಿಗೆ ಹೈಕೋರ್ಟ್ ಆದೇಶದಂತೆ ಪರಿಹಾರ ನೀಡದೆ ಇರುವ ಪಟ್ಟಣದ ಲೋಕೋಪಯೋಗಿ ಇಲಾಖೆ ಕಾರ್ಯಾಲಯದ ಪೀಠೋಪಕರಣಗಳನ್ನು ಬೆಳಗಾವಿ ಜಿಲ್ಲಾ ನ್ಯಾಯಾಲಯದ ಆದೇಶದಂತೆ ಸೋಮವಾರ ಜಪ್ತಿ ಮಾಡಲಾಯಿತು.
ಪಟ್ಟಣದ ವಕೀಲ ಶಿವಾನಂದ ಸಾಗಶೆಟ್ಟಿ ಅವರ ಮಾಲೀಕತ್ವದ ಜಮೀನನ್ನು ಲೋಕೋಪಯೋಗಿ ಇಲಾಖೆ ನ್ಯಾಯಾಲಯದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಸ್ವಾಧೀನಪಡಿಸಿಕೊಂಡಿತ್ತು. ಸರ್ಕಾರ ನೀಡುತ್ತಿರುವ ಪರಿಹಾರ ಸ್ಥಳೀಯ ಜಮೀನಿನ ಮಾರುಕಟ್ಟೆ ಬೆಲೆಗಿಂತ ಕಡಿಮೆ ಇದೆ. ಹೆಚ್ಚಿನ ಪರಿಹಾರ ನೀಡಬೇಕು ಎಂದು ಭೂ ಮಾಲೀಕರು ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು.
ಭೂ ಮಾಲೀಕರ ವಾದ ಮನ್ನಿಸಿದ ಜಿಲ್ಲಾ ನ್ಯಾಯಾಲಯ ಬಡ್ಡಿ ಸೇರಿ ಸುಮಾರು 58 ಕೋಟಿ ರೂ. ಭೂ ಮಾಲೀಕರಿಗೆ ಪರಿಹಾರ ನೀಡಬೇಕೆಂದು ನ್ಯಾಯಾಲಯ ಆದೇಶ ನೀಡಿತ್ತು. ಆದೇಶ ನೀಡಿ ಹಲವು ದಿನ ಕಳೆದರೂ ಲೋಕೋಪಯೋಗಿ ಇಲಾಖೆ ಪರಿಹಾರ ನೀಡಲು ವಿಳಂಬ ನೀತಿ ಅನುಸರಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಲಯ ಜಪ್ತಿಗೆ ಆದೇಶ ನೀಡಿದೆ.
ಜಿಲ್ಲಾ ನ್ಯಾಯಾಲಯದ ಆದೇಶದಂತೆ ಸ್ಥಳೀಯ ನ್ಯಾಯಾಲಯದ ಬೇಲೀಫ್‌ಗಳಾದ ಮುತ್ತಪ್ಪ ಜಂಜೇಲಿ, ಎಸ್.ಎಸ್. ಗಣಮುಖಿ ಅವರುಗಳು ಲೋಕೋಪಯೋಗಿ ಇಲಾಖೆಯ ಕಾರ್ಯಾಲಯದಲ್ಲಿರುವ ಗಣಕಯಂತ್ರ, ಪ್ರಿಂಟರ್, ಅಲೆಮಾರಿ, ಟೇಬಲ್ ಸೇರಿ ಇತರ ಪೀಠೋಪಕರಣ ಜಪ್ತ್ತಿ ಮಾಡಿ, ನ್ಯಾಯಾಲಯಕ್ಕೆ ಒಪ್ಪಿಸಿದರು.