

ವಿಜಯವಾಣಿ ಸುದ್ದಿಜಾಲ ಉಡುಪಿ
ಮಲ್ಪೆ ಮೀನುಗಾರಿಕಾ ಬಂದರು ಶೀಘ್ರ ಆಧುನೀಕರಣಗೊಳ್ಳಲಿದ್ದು ಈಗಾಗಲೇ 22 ಕೋಟಿ ರೂ.ಗೆ ಟೆಂಡರ್ ಆಗಿದ್ದು, ಕಾರ್ಯಾದೇಶ ಲಭಿಸಬೇಕಿದೆ. ಬಹುತೇಕ ಜೂನ್ ತಿಂಗಳಲ್ಲಿ ಶಿಲಾನ್ಯಾಸ ನಡೆಯಲಿದೆ ಎಂದು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಮಾಹಿತಿ ನೀಡಿದರು.
ಮಲ್ಪೆಯಲ್ಲಿ ಯಾಂತ್ರಿಕ (ಟ್ರಾಲ್) ದೋಣಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ವತಿಯಿಂದ ಮೀನುಗಾರಿಕಾ ಬಂದರಿನಲ್ಲಿ ನಿರ್ಮಿಸಿರುವ ಸಾರ್ವಜನಿಕ ಮಹಿಳಾ ಶೌಚಾಲಯ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ನಿಮಿತ್ತ ಮೇ 10ರಂದು ಬೆಳಗ್ಗೆ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಶೌಚಾಲಯವನ್ನು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಂಗಳೂರಿನ ಎಂಆರ್ಪಿಎಲ್ನ ಹಿರಿಯ ವ್ಯವಸ್ಥಾಪಕ ನಾಗರಾಜ ರಾವ್ ಕೆ. ಉದ್ಘಾಟಿಸಿದರು.
ಮೀನುಗಾರಿಕಾ ಇಲಾಖೆಯ ನಿರ್ದೇಶಕ ದಿನೇಶಕುಮಾರ್ ಕಳ್ಳೇರ, ಮಲ್ಪೆ ಮೀನುಗಾರರ ಸಂಘ ಅಧ್ಯಕ್ಷ ದಯಾನಂದ ಸುವರ್ಣ, ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿಯ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಇತರರಿದ್ದರು.
ಮಲ್ಪೆ ಯಾಂತ್ರಿಕ ದೋಣಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ರಾಮಚಂದ್ರ ಕುಂದರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪಾಧ್ಯಕ್ಷ ಪ್ರಕಾಶ ಬಂಗೇರ ವಂದಿಸಿದರು. ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ನಿರೂಪಿಸಿದರು.
ಮಲ್ಪೆ ಬಂದರಿನಲ್ಲಿ ಮೀನುಗಾರಿಕೆಯಲ್ಲಿ ತೊಡಗಿರುವ ಮಹಿಳೆಯರಿಗೆ ಈ ಶೌಚಾಲಯ ಬಹಳ ಅನುಕೂಲವಾಗಿದೆ. ಯಾವುದೇ ಸಾರ್ವಜನಿಕ ಘಟಕಗಳ ನಿರ್ವಹಣೆ, ಸ್ವಚ್ಛತೆಯೊಂದಿಗೆ ಪರಿಸರವನ್ನು ಕಾಪಾಡಿಕೊಳ್ಳಬೇಕು. ಇದು ನಮ್ಮೆಲ್ಲರ ಜವಾಬ್ದಾರಿಯೂ ಆಗಿದೆ. ಈ ನಾಗರಿಕ ಪ್ರಜ್ಞೆ ಎಲ್ಲರಿಗೂ ಅಗತ್ಯ. | ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ