

ಶಿವಮೊಗ್ಗ: ಕೆಲವೊಂದು ನಿಬಂಧನೆಗಳಿಗೆ ಒಳಪಟ್ಟು ಮೈದಾನವನ್ನು ಸಾರ್ವಜನಿಕರ ಬಳಕೆಗೆ ಬಿಟ್ಟುಕೊಡಲಾಗುವುದು. ಯಾರಿಗೂ ತೊಂದರೆ ಕೊಡುವುದು ನಮ್ಮ ಗುರಿಯಲ್ಲ. ಆ ಜಾಗವನ್ನು ಪವಿತ್ರವಾಗಿಡಬೇಕು ಎನ್ನುವುದು ನಮ್ಮ ಉದ್ದೇಶ ಎಂದು ಗಾಂಧಿಬಜಾರ್‌ನ ಮರ್ಕಜ್ ಸುನ್ನಿ ಜಾಮಿಯಾ ಮಸ್ಜಿದ್ ಅಧ್ಯಕ್ಷ ಮುನಾವರ್ ಪಾಷಾ ಹೇಳಿದರು.
ತಿಲಕ್ ನಗರದ ಮೈದಾನ ವಕ್ಫ್ ಆಸ್ತಿಗೆ ಸೇರಿದೆ. ಈಗಾಗಲೇ ಮುನ್ಸಿಪಾಲ್ ಖಾತೆ ಹೊಂದಿದೆ. ಅದರ ನಿರ್ವಹಣೆಯನ್ನು ಸುನ್ನಿ ಜಾಮೀಯಾ ಮಸೀದಿಯಿಂದ ಮಾಡಲಾಗುತ್ತಿದೆ. ಆದರೆ ಮೈದಾನವನ್ನು ಕಿಡಿಗೇಡಿಗಳು ಅಪವಿತ್ರಗೊಳಿಸುತ್ತಿದ್ದಾರೆ. ಮುಸ್ಲಿಮರ ಪವಿತ್ರ ಜಾಗದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವ ಸಲುವಾಗಿ ಸಮಿತಿ ಸಿಸಿ ಕ್ಯಾಮರಾ ಅಳವಡಿಸಿ ಅದನ್ನು ನಿರ್ವಹಣೆ ಮಾಡಲು ಹೊರಟಿದೆೆ. ಆದರೆ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಮೈದಾನದ ಮೂಲ ದಾಖಲೆಗಳನ್ನು ಒದಗಿಸುವಂತೆ ರಾಜ್ಯ ಕಮಿಟಿಗೆ ಪತ್ರ ಬರೆದಿದ್ದೇವೆ. ಯಾವುದೇ ಜಾಗ ವಕ್ಫ್ ಆಸ್ತಿ ಆಗುವ ಮುನ್ನ ಗೆಜೆಟ್ ನೋಟಿಫೀಕೇಷನ್ ಆಗುತ್ತದೆ. ಅದರ ಆಧಾರದ ಮೇಲೆ ಮೈದಾನ ವಕ್ಫ್ ಆಸ್ತಿಯಾಗಿದೆ. ಈ ಜಾಗ ನಮ್ಮದೆನ್ನುವುದಕ್ಕೆ ಮಹಾನಗರ ಪಾಲಿಕೆ ಮಾಡಿಕೊಟ್ಟ ಖಾತೆಯಿದೆ ಎಂದರು. ಪ್ರಮುಖರಾದ ಸಿರಾಜ್ ಅಹಮ್ಮದ್, ಸತ್ತಾರ್‌ಬೇಗ್, ನಿಸಾರ್ ಅಹಮ್ಮದ್, ಫೈರೋಜ್, ನಯಾಜ್ ಅಹಮ್ಮದ್ ಖಾನ್, ಪರ್ವೀಜ್ ಅಹಮ್ಮದ್ ಸುದ್ದಿಗೋಷ್ಠಿಯಲ್ಲಿದ್ದರು.