ಸ್ವಂತ ವಾಹನ ಬದಲು ಸಾರ್ವಜನಿಕ ಸಾರಿಗೆ: ಆಗಸ್ಟ್‌ನಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಚಾಲನೆ

electronic city
Published on

ಬೆಂಗಳೂರು: ರಾಜಧಾನಿಯಲ್ಲಿ ಸಂಚಾರ ಸಿಕ್ಕು ಪರಿಹರಿಸುವ ನಿಟ್ಟಿನಲ್ಲಿ ಸಮೂಹ ಸಾರಿಗೆ ಬಳಕೆಯನ್ನು ಉತ್ತೇಜಿಸಲು ಆಗಸ್ಟ್‌ನಿಂದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಪೈಕಿ ಹೆಚ್ಚಿನ ಮಂದಿ ಮೆಟ್ರೋ ಹಾಗೂ ಇತರ ಸಾರ್ವಜನಿಕ ವಾಹನ ಬಳಸಲು ನಿರ್ಧರಿಸಿದ್ದಾರೆ.

ಇಂಥದ್ದೊಂದು ಉಪಕ್ರಮಕ್ಕಾಗಿ ಇತ್ತೀಚಿಗೆ ಬಿಎಂಟಿಸಿ, ಬಿಎಂಆರ್‌ಸಿಎಲ್, ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರೀಸ್ ಅಸೋಸಿಯೇಷನ್ (ಇಎಲ್‌ಸಿಐಎ) ಹಾಗೂ ವರ್ಡ್ ರಿಸೋರ್ಸ್ ಇನ್‌ಸ್ಟಿಟ್ಯೂಟ್ - ಇಂಡಿಯಾ (ಡಬ್ಲ್ಯುಆರ್‌ಐ) ಸಹಯೋಗದಲ್ಲಿ ಚಿಂತನ, ಮಂಥನ ನಡೆಸಿತ್ತು. ಇದಕ್ಕೆ ಪೂರ್ವಭಾವಿಯಾಗಿ ಸ್ಟೇಷನ್ ಆಕ್ಸಿಸ್ ಮತ್ತು ಮೊಬಿಲಿಟಿ ಪ್ರೋಗ್ರಾಮ್ (ಸ್ಟ್ಯಾಂಪ್) ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸಮೂಹ ಸಾರಿಗೆಯಲ್ಲಿ ಪಯಣಿಸಲು ಬೇಕಾದ ವ್ಯವಸ್ಥೆ ರೂಪಿಸಿರುವ 4 ಸಂಸ್ಥೆಗಳಿಗೆ 1 ಲಕ್ಷ ಅಮೆರಿಕನ್ ಡಾಲರ್ ಬಹುಮಾನವನ್ನು ಬುಧವಾರ ಘೋಷಿಸಲಾಯಿತು.

ಕಮ್ಯೂಟ್‌ವರ್ಸ್, ಆರ್ಬಿಟ್ ವಾಲೆಟ್, ನಿಪ್ಪಾನ್ ಹಾಗೂ ಟುಮ್ಮೊಕ್ ಸಂಸ್ಥೆಗಳು ಆಗಸ್ಟ್‌ನಿಂದ ಪ್ರಯಾಣಿಕರಿಗೆ ತಮ್ಮ ಪ್ರಸ್ತಾವಗಳ ಮೂಲಕ ಸಮೂಹ ಸಂಚಾರಕ್ಕೆ ಅನುವು ಮಾಡಿಕೊಡಲಿವೆ. ನಗರದಿಂದ ಹೊಸೂರು ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್ಸ್ ಸಿಟಿಯತ್ತ ಸಂಚರಿಸಲು ದೊಡ್ಡ ಸಂಖ್ಯೆಯಲ್ಲಿ ವಾಹನಗಳನ್ನು ಬಳಸಲಾಗುತ್ತಿದೆ. ಇವುಗಳಲ್ಲಿ ವೈಯಕ್ತಿಕ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇದಕ್ಕೆ ಕಡಿವಾಣ ಹಾಕಿ ಮೆಟ್ರೋ ರೈಲು ಹಾಗೂ ಕಂಪನಿಗಳ ಬಸ್‌ಗಳಲ್ಲಿ ಪ್ರಯಾಣಿಸಲು ಪ್ರೇರೇಪಿಸಲಾಗುತ್ತಿದೆ ಎಂದು ಡಬ್ಲುೃಆರ್‌ಐನ ಫೆಲೋ ಶ್ರೀನಿವಾಸ್ ಅಲವಿಲ್ಲಿ ತಿಳಿಸಿದ್ದಾರೆ.

ಸಮೂಹ ಸಾರಿಗೆಯಲ್ಲಿ ಸಂಚರಿಸಲು ಬೇಕಾದ ವಿವಿಧ ಮಾದರಿಗಳನ್ನು ವಿಜೇತ ಸಂಸ್ಥೆಗಳು ರೂಪಿಸಿವೆ. ಇವುಗಳಲ್ಲಿ ಮೊಬಿಲಿಟಿ ಕಾರ್ಡ್, ಡಿಜಿಟಲ್ ಫ್ಲಾಟ್‌ಫಾರಂ, ಮೊಬೈಲ್ ಆಧಾರಿತ ವೇದಿಕೆ ಹಾಗೂ ಆ್ಯಪ್ ಸೇರಿವೆ. ಈ ಮಾದರಿಗಳನ್ನು ಬಳಸಿಕೊಂಡು ಉದ್ಯೋಗಿಗಳು ಮೆಟ್ರೋ ಮತ್ತು ಇತರ ಸಾರಿಗೆಯಲ್ಲಿ ಸಂಚರಿಸಲಿದ್ದಾರೆ. ಈ ಪ್ರಾಯೋಗಿಕ ಸೌಲಭ್ಯವು ಜನಪ್ರಿಯವಾಗುವ ನಿರೀಕ್ಷೆ ಇದೆ ಎಂದು ಇಎಲ್‌ಸಿಐಎ ಅಧ್ಯಕ್ಷ ಶ್ರೀರಾಮ್ ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net