

ಜಗಳೂರು: ಪಟ್ಟಣದ ಹೃದಯ ಭಾಗದ ತರಕಾರಿ ಮಾರುಕಟ್ಟೆ ಹಿಂದಿರುವ ಸಾರ್ವಜನಿಕ ಸಾಮೂಹಿಕ ಶೌಚಗೃಹಕ್ಕೆ ಕಳೆದ 13 ವರ್ಷಗಳಿಂದ ಬೀಗ ಬಿದ್ದಿದೆ. ಇದರಿಂದ ಸಾರ್ವಜನಿಕರು ಬಯಲಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದು, ಎಲ್ಲೆಡೆ ದುರ್ವಾಸನೆ ಬೀರುತ್ತಿದೆ.
ಪಟ್ಟಣದ ತರಕಾರಿ ಮಾರುಕಟ್ಟೆ ಹಿಂಭಾಗ 2011ರಲ್ಲಿ 5 ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ ನಿರ್ಮಿಸಲಾಗಿತ್ತು. ಸುತ್ತಲೂ ಸ್ಟೇಟ್ ಬ್ಯಾಂಕ್, ತರಕಾರಿ ಮಾರುಕಟ್ಟೆ, ಶಾಸಕರ ಜನಸಂಪರ್ಕ ಕಚೇರಿ, ಬಸ್ ನಿಲ್ದಾಣ, ಹೋಟೆಲ್‌ಗೆ ಬರುವ ಜನರಿಗೆ ಅನುಕೂಲವಾಗಿತ್ತು.
ನಿತ್ಯ ನೂರಾರು ಜನರು ಕೆಲಸಕ್ಕಾಗಿ ಆಗಮಿಸುತ್ತಾರೆ. ಈ ಪ್ರದೇಶದ ಸಮೀಪ ಇದನ್ನು ಬಿಟ್ಟರೆ ಶೌಚಗೃಹ ಇಲ್ಲ. ಬಿಟ್ಟರೆ, ಮಿನಿ ಬಸ್ ನಿಲ್ದಾಣಕ್ಕೆ ತೆರಳಬೇಕು. ಇದು ದೂರವಾಗುವ ಕಾರಣ ಜನರು ಬಯಲಲ್ಲೇ ವಿಸರ್ಜನೆಯಿಂದ ದುರ್ವಾಸನೆ ಬೀರುತ್ತಿದೆ.
ಜತೆಗೆ, ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವುದರಿಂದ ಹಂದಿಗಳ ಕಾಟವೂ ಇದೆ. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ. ದಶಕ ಕಳೆದರೂ ಶೌಚಗೃಹ ಬಳಕೆಗೆ ಬಾರದೆ, ಬಾಗಿಲು ಮುಚ್ಚಿದ್ದು, ಕೂಡಲೇ ಇದನ್ನು ಉದ್ಘಾಟಿಸಿ ಜನಬಳಕೆಗೆ ಅವಕಾಶ ಮಾಡಿಕೊಡುವಂತೆ ನಾಗರಿಕರ ಆಗ್ರಹಿಸಿದ್ದಾರೆ.
ತರಕಾರಿ ಮಾರುಕಟ್ಟೆ ಪ್ರಾರಂಭದಲ್ಲಿಯೇ ಸಾರ್ವಜನಿಕ ಶೌಚಗೃಹ ಉದ್ಘಾಟಿಸಿ ಬಳಬಹುದಿತ್ತು. ಆದರೆ, ಯಾವ ಕಾರಣದಿಂದ ಅದನ್ನು ಮುಚ್ಚಿದ್ದಾರೋ ಗೊತ್ತಿಲ್ಲ. 13 ವರ್ಷಗಳು ಕಳೆದಿದ್ದು ಎಲ್ಲವೂ ದುಸ್ಥಿತಿಯಲ್ಲಿವೆ. ನವೀಕರಿಸಲು ಕ್ರಿಯಾ ಯೋಜನೆ ಮಾಡುವಂತೆ ಸೂಚನೆ ಇಂಜಿನಿಯರ್‌ಗೆ ಸೂಚನೆ ನೀಡಲಾಗಿದೆ.
I ಲೋಕ್ಯಾನಾಯ್ಕ, ಪಪಂ ಮುಖ್ಯಾಧಿಕಾರಿ, ಜಗಳೂರು.
ಸರ್ಕಾರದ ಅನುದಾನದಲ್ಲಿ ನಿರ್ಮಿಸಿದ ಶೌಚಗೃಹ ಹಾಳಾಗಿದೆ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಬೇಕು. ಹಂದಿಗಳು, ಸೊಳ್ಳೆಗಳ ಕಾಟದಿಂದ ಹಲವು ರೋಗಗಳು ಹರಡುತ್ತಿವೆ. ಇವುಗಳಿಗೆ ಮುಕ್ತಿ ನೀಡಬೇಕು.
I ಲೋಕೇಶ್, ನಾಗರಿಕ.