ಸಮಸ್ಯೆ ಪರಿಹಾರಕ್ಕೆ ಜನಸ್ಪಂದನ ಸಹಕಾರಿ

24 mlv 1
ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ಜನಸ್ಪಂದನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಕುಮಾರ್ ಉದ್ಘಾಟಿಸಿದರು. ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಸೀಲ್ದಾರ್ ಲೋಕೇಶ್, ತಾಪಂ ಇಒ ಮಮತಾ ಇದ್ದರು.
Published on

ಮಳವಳ್ಳಿ: ಸಾರ್ವಜನಿಕರ ಭೂವಿವಾದ ಸೇರಿದಂತೆ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಜನಸ್ಪಂದನ ಕಾರ್ಯಕ್ರಮ ಸಹಕಾರಿ. ಸಮಸ್ಯೆ ಇರುವವರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಜಿಲ್ಲಾ ಮತ್ತು ತಾಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯಮಂತ್ರಿಗಳ ಆಶಯದಂತೆ ಈ ಕಾರ್ಯಕ್ರಮವನ್ನು ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಯಕರ್ತರು ಗ್ರಾಮೀಣ ವರ್ಗದ ಜನರಿಗೆ ಹೆಚ್ಚಿನ ಮಟ್ಟದಲ್ಲಿ ಇಂತಹ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡುವುದರಿಂದ ಸಾರ್ವಜನಿಕರು ತಮ್ಮ ಸಮಸ್ಯೆ ಹೊತ್ತು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿದಂತಾಗುತ್ತದೆ ಎಂದರು.
ಕಂದಾಯ ಇಲಾಖೆಯಲ್ಲಿ ಕೆಲ ಸಿಬ್ಬಂದಿ ಅಸಡ್ಡೆಯಿಂದ ಸರ್ಕಾರ ಜಾರಿಗೊಳಿಸಿರುವ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
100ಕ್ಕೆ ಶೇ. 70ರಷ್ಟು ಆಸ್ತಿಗಳು ಪೌತಿ ಖಾತೆ ಆಗಿಲ್ಲ. ತಾತ, ಮುತ್ತಾತನ ಹೆಸರಿನಲ್ಲೇ ದಾಖಲೆಗಳು ಇದ್ದು, ಕುಟುಂಬದವರು ಒಟ್ಟಿಗೆ ಸೇರಿ ಪೌತಿ ಖಾತೆ ಮಾಡಿಸಿಕೊಳ್ಳದೆ ಜಮೀನುಗಳಿದ್ದರೂ ಹಂಚಿಕೆ ಮಾಡಿಕೊಳ್ಳಲಾಗದೆ ನಗರ ಪ್ರದೇಶಗಳಿಗೆ ಗುಳೆ ಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಆರೋಗ್ಯ ಇಲಾಖೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದೆ ಎಂಬ ಕಾರಣ ಮುಂದಿಟ್ಟುಕೊಂಡು ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂಬ ಆರೋಪಗಳಿವೆ. ಮಾನವೀಯ ದೃಷ್ಟಿಯಿಂದ ವೈದ್ಯರು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಮನಪರಿವರ್ತನೆ ಮಾಡಿಕೊಳ್ಳಬೇಕಿದೆ ಎಂದರು.
ಸರ್ಕಾರಿ ಆಸ್ತಿಗಳನ್ನು ರಕ್ಷಿಸುವುದು ಅಧಿಕಾರಿಗಳ ಕರ್ತವ್ಯ. ಸರ್ಕಾರದ ಆಸ್ತಿಗಳ ವ್ಯಾಪ್ತಿಯನ್ನು ಮೊದಲು ಗುರುತು ಮಾಡಿಕೊಳ್ಳುವುದು ಅತ್ಯವಶ್ಯಕ ಎಂದು ಇದೇ ವೇಳೆ ನಿರ್ದೇಶನ ನೀಡಿದರು.
ಕಳೆದ 7-8 ವರ್ಷಗಳಿಂದ ಗ್ರಾಪಂ ಪಿಡಿಒಗಳ ಆಯ್ಕೆ ಪ್ರಕ್ರಿಯೆಗಳು ನಡೆದಿಲ್ಲ. ಪರಿಣಾಮ ಒಬ್ಬ ಅಭಿವೃದ್ಧಿ ಅಧಿಕಾರಿ 2,3 ಪಂಚಾಯಿತಿಗಳನ್ನು ನೋಡಿಕೊಳ್ಳುವ ಪರಿಸ್ಥಿತಿ ಇದೆ ಎಂದರು.
ಗ್ರಾಪಂಗಳ ವ್ಯಾಪ್ತಿಗಳಲ್ಲಿ ಕಾರ್ಯಕ್ಷಮತೆ ಹೆಚ್ಚಿಸಿ ಕೆರೆ-ಕಟ್ಟೆಗಳ ಒತ್ತುವರಿ ತೆರವುಗೊಳಿಸುವ ಜತೆಗೆ ನರೇಗಾ ಸದ್ಬಳಕೆ ಮಾಡಿಕೊಂಡು ಮಳೆ ನೀರು ನಿಲ್ಲುವುದಕ್ಕೆ ಅವಕಾಶ ಮಾಡಿಕೊಡಿ. ಇದರಿಂದ ಜನ ಜಾನುವರುಗಳಿಗೆ ಉಂಟಾಗುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಲು ಜನಸ್ಪಂದನ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಜನರು ತಮ್ಮ ಸಮಸ್ಯೆಗಳನ್ನು ಜಿಲ್ಲಾ ಮಟ್ಟಕ್ಕೆ ತರುವ ಬದಲು ಅಧಿಕಾರಿಗಳೇ ಜನರ ಬಳಿಗೆ ಬಂದು ಸಮಸ್ಯೆ ಪರಿಹರಿಸಬೇಕು ಎಂಬುದು ಈ ಕಾರ್ಯಕ್ರಮದ ಉದ್ದೇಶ ಎಂದರು.
ಸ್ವೀಕೃತವಾಗುವ ಶೇ. 100ರಷ್ಟು ಅರ್ಜಿಗಳಿಗೆ ಪರಿಹಾರ ಕೊಡಿಸಲಾಗುವುದು ಎಂದು ಹೇಳಲು ಸಾಧ್ಯವಿಲ್ಲ. ಕಾನೂನು ವ್ಯಾಪ್ತಿಯಲ್ಲಿ ಇರುವ ಅರ್ಜಿಗಳನ್ನು ಶೀಘ್ರ ಹಾಗೂ ಪಾರದರ್ಶಕವಾಗಿ ವಿಲೇವಾರಿ ಮಾಡಲಾಗಿದೆ ಎಂದರು.

ಜಿಲ್ಲೆಯ ಎಲ್ಲ ತಾಲೂಕುಗಳು ಬರ ಪೀಡಿತ ಎಂದು ಘೋಷಣೆಯಾದ ನಂತರ ಜಿಲ್ಲೆಯಲ್ಲಿ 79 ಸಾವಿರ ರೈತರಿಗೆ 34 ಕೋಟಿ ರೂ. ಪರಿಹಾರ ಪಾವತಿಯಾಗಿದೆ. ಮಳವಳ್ಳಿ ತಾಲೂಕಿನಲ್ಲಿ 11,599 ರೈತರಿಗೆ 4 ಕೋಟಿ 63 ಲಕ್ಷ ರೂ. ಪಾವತಿಸಲಾಗಿದೆ ಎಂದು ತಿಳಿಸಿದರು.
ಕಂದಾಯ ಭೂ ವ್ಯಾಜ್ಯಗಳನ್ನು ಕಡಿಮೆ ಮಾಡಲು ಆಧಾರ್ ಸೀಡಿಂಗ್ ಪ್ರಕ್ರಿಯೆ ನಡೆಸಲಾಗುತ್ತಿದೆ. ರೈತರು ಆರ್‌ಟಿಸಿಗಳಿಗೆ ಆಧಾರ್ ಸೀಡಿಂಗ್ ಮಾಡಿಸಿಕೊಂಡರೆ ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ಈ ಪ್ರಕ್ರಿಯೆ ಶೇ.30ರಷ್ಟು ಮಾತ್ರ ಆಗಿದೆ ಎಂದರು.
ಸಂಜೆಯ ವರೆಗೆ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಗೆ ಒಟ್ಟು 290 ಅರ್ಜಿಗಳು ಸ್ವೀಕೃತಗೊಂಡಿದ್ದವು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಹಸೀಲ್ದಾರ್ ಲೋಕೇಶ್, ತಾಪಂ ಇಒ ಮಮತಾ ಸೇರಿದಂತೆ ಇನ್ನಿತರ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net