ಆಧಾರಕ್ಕಾಗಿ ಸಾರ್ವಜನಿಕರ ಪರದಾಟ

8 lxr 3
Published on

ವಿಜಯವಾಣಿ ಸುದ್ದಿಜಾಲ ಲಕ್ಷೆ್ಮೕಶ್ವರ

ಜನರು ಆಧಾರ್ ಕಾರ್ಡ್ ಪಡೆಯಲು ಮತ್ತು ತಿದ್ದುಪಡಿ ಮಾಡಿಸಿಕೊಳ್ಳಲು ಬುಧವಾರ ಬೆಳಗ್ಗೆ ಪಟ್ಟಣದ ಕೆವಿಜಿ ಬ್ಯಾಂಕ್ ಮುಂದೆ ಸಾರ್ವಜನಿಕರು ಸಾಲುಗಟ್ಟಿ ನಿಂತು ಹೆಣಗಾಡುತ್ತಿದ್ದ ದೃಶ್ಯ ಕಂಡು ಬಂದಿತು.

ಕೆವಿಜಿ ಬ್ಯಾಂಕಿನವರು ಪ್ರತಿ ದಿನ ಕೂಪನ್ ಕೊಡುವ ಕಿರಿಕಿರಿ ತಪ್ಪಿಸಿಕೊಳ್ಳಲು ಬುಧವಾರ (ಜ. 8ರಂದು)ದಂದು ಕೂಪನ್ ಕೊಡುವ ದಿನ ನಿಗದಿಪಡಿಸಿದ್ದರಿಂದ ನೂರಾರು ಜನರು ಮುಗಿಬಿದ್ದರು. ಇದರಿಂದ ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಲಕ್ಷೆ್ಮೕಶ್ವರ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಎಲ್ಲರನ್ನೂ ಸಮಾಧಾನಪಡಿಸಿ ಸಾಲಿನಲ್ಲಿ ನಿಲ್ಲಿಸಿ ಕೂಪನ್ ಕೊಡಿಸಿದರು. ಇನ್ನು ಕೂಪನ್ ಪಡೆದುಕೊಂಡವರು ನಾಲ್ಕು ತಿಂಗಳ ನಂತರ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಬ್ಯಾಂಕಿಗೆ ಬರಬೇಕು ಎಂದು ಹೇಳಿದ್ದನ್ನು ಕೇಳಿ ಕಕ್ಕಾಬಿಕ್ಕಿಯಾದರು.

ತಪ್ಪದ ಪಡಿಪಾಟಿಲು: ಸರ್ಕಾರದ ಸೂಚನೆಯನ್ವಯ ಪ್ರತಿಯೊಂದು ಕುಟುಂಬದವರು ಕಡ್ಡಾಯವಾಗಿ ಕೆವೈಸಿ ಮಾಡಿಸಬೇಕಾಗಿದ್ದರಿಂದ ಮತ್ತು ಸರ್ಕಾರದ ಪ್ರತಿ ಕೆಲಸಕ್ಕೂ ಆಧಾರ್ ಕಡ್ಡಾಯಗೊಳಿಸಿದ್ದರಿಂದ ಆಧಾರ್ ರಹಿತರು ಹಾಗೂ ತಿದ್ದುಪಡಿ ಮಾಡಿಸಿಕೊಳ್ಳಬೇಕಾದವರು ಪರದಾಡುವ ಸ್ಥಿತಿ ನಿರ್ವಣವಾಗಿದೆ. ಪಟ್ಟಣದಲ್ಲಿ ಕಳೆದ 1 ತಿಂಗಳಿಂದ ನೆಮ್ಮದಿ ಕೇಂದ್ರದ ಆಧಾರ್ ಕಾರ್ಡ್ ಕೇಂದ್ರ ಸ್ಥಗಿತಗೊಂಡಿದೆ. ಹೀಗಾಗಿ ಸಮಸ್ಯೆ ತೀವ್ರಗೊಂಡಿದೆ.

ಪಟ್ಟಣದಲ್ಲಿ ಅಂಚೆ ಕಚೇರಿ ಮತ್ತು ಕೆವಿಜಿ ಬ್ಯಾಂಕ್​ನವರಿಗೆ ಮಾತ್ರ ಆಧಾರ್ ಕಾರ್ಡ್ ನೀಡುವ ಅಧಿಕಾರ ನೀಡಲಾಗಿದೆ. ಲಕ್ಷೆ್ಮೕಶ್ವರ ಪಟ್ಟಣ ಹಾಗೂ ಸುತ್ತಲಿನ ಗ್ರಾಮದಿಂದ ನೂರಾರು ಜನರು ಬಂದರೂ ಅಂಚೆ ಕಚೇರಿ ಮತ್ತು ಬ್ಯಾಂಕ್​ನವರು ತಮ್ಮ ಕೆಲಸದ ಅವಧಿಯ ನಂತರ ದಿನಕ್ಕೆ 10-15 ಜನರಿಗೆ ಮಾತ್ರ ಕಾರ್ಡ್ ನೀಡುತ್ತಾರೆ. ಹೀಗಾಗಿ ಹಣ, ಸಮಯ ವ್ಯಯಿಸಿಕೊಂಡು ದೂರದಿಂದ ಬರುವ ಜನರು ಹೈರಾಣಾಗುವಂತಾಗಿದೆ. ಜೊತೆಗೆ ದಿನದಿಂದ ದಿನಕ್ಕೆ ಸರದಿ ಸಾಲು ಹೆಚ್ಚುತ್ತಲೇ ಸಾಗಿದೆ. ಆಧಾರ್ ಕಾರ್ಡ್ ಪಡೆಯಲು ಮೊದಲೇ ಹೆಸರು ನೋಂದಾಯಿಸಿ ಕೂಪನ್ ಪಡೆಯಬೇಕು. ಈಗಾಗಲೇ ಅಂಚೆ ಕಚೇರಿ, ಬ್ಯಾಂಕ್ ಮತ್ತು ಆಧಾರ್ ಕೇಂದ್ರದಲ್ಲಿ ಮೂರ್ನಾಲ್ಕು ತಿಂಗಳು ಮೊದಲೇ ಕೂಪನ್ ಪಡೆದಿದ್ದಾರೆ. ಹೀಗಾಗಿ ಹೊಸದಾಗಿ ಬರುವವರು ನಿರಾಸೆಯಿಂದ ಮರಳುವಂತಾಗಿದೆ.

ಆಧಾರ ಪಡೆಯಲು ಹಾಗೂ ತಿದ್ದುಪಡಿ ಮಾಡಿಸಿಕೊಳ್ಳಲು ಹೆಚ್ಚು ಆಧಾರ ಕೇಂದ್ರಗಳನ್ನು ತೆರೆದು ಅನುಕೂಲಮಾಡಿಕೊಡಬೇಕು ಎಂಬುದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಸರ್ಕಾರಿ ಸೌಲಭ್ಯ ಕಳೆದುಕೊಳ್ಳುವ ಭಯ: ಆಧಾರ್ ಕಾರ್ಡ್ ಪಡೆಯಲು ಮೂರ್ನಾಲ್ಕು ತಿಂಗಳು ಕಾಯಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ಮೂರ್ನಾಲ್ಕು ತಿಂಗಳಕಾಲ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಬೇಕಾಗಿದೆ. ಹೀಗಾದರೆ ಬಡವರು ಹೇಗೆ ಜೀವನ ನಡೆಸಬೇಕು. ನಮ್ಮ ಈ ಪರದಾಟಕ್ಕೆ ಯಾರು ಹೊಣೆ? ಹೆಚ್ಚು ಕೇಂದ್ರಗಳನ್ನು ತೆರೆದು ಸುಲಭವಾಗಿ ಆಧಾರ ದೊರೆಯುವಂತೆ ಮಾಡಬೇಕು ಎಂದು ಸರದಿಯಲ್ಲಿ ನಿಂತು ಬೇಸತ್ತ ಲಕ್ಷೆ್ಮೕಶ್ವರದ ಬಸಣ್ಣ ಮಜ್ಜಿಗುಡ್ಡದ ಹಾಗೂ ಗೋವನಾಳ ಗ್ರಾಮದ ಮಹಾಂತಗೌಡ ದೊಡ್ಡಗೌಡ ಅಸಮಾಧಾನ ವ್ಯಕ್ತಪಡಿಸಿದರು.

ತಾಂತ್ರಿಕ ದೋಷದಿಂದಾಗಿ ನೆಮ್ಮದಿ ಕೇಂದ್ರದಲ್ಲಿ ಆಧಾರ್ ಸೇವೆ ಸ್ಥಗಿತಗೊಂಡಿದ್ದರಿಂದ ಸಮಸ್ಯೆ ಹೆಚ್ಚಾಗಿದೆ. ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಎಲ್ಲ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಮೂರ್ನಾಲ್ಕು ದಿನಗಳಲ್ಲಿ ಆಧಾರ್ ಕೇಂದ್ರ ಮರು ಪ್ರಾರಂಭವಾಗಲಿದೆ.| ಭ್ರಮರಾಂಬ ಗುಬ್ಬಿಶೆಟ್ಟಿ ತಹಸೀಲ್ದಾರ್ಆಧಾರ್, ಪಡಿತರ, ಪ್ಯಾನ್​ಕಾರ್ಡ್, ಮತದಾರರ ಗುರುತಿನ ಪತ್ರ ಸೇರಿ ನಾಗರಿಕ ಗುರುತಿನ ಕಾರ್ಡ್​ಗಳ ತಿದ್ದುಪಡಿ, ಹೊಸದಾಗಿ ಪಡೆಯುವ ಪ್ರಕ್ರಿಯೆಗೆ ದಿನಕ್ಕೊಂದು ಕಾನೂನು, ತಿದ್ದುಪಡಿ ಮಾಡಿ ಸರ್ಕಾರ ವಿನಾಕಾರಣ ಜನರ ನೆಮ್ಮದಿ ಹಾಳು ಮಾಡುತ್ತಿದೆ. ಇದರಿಂದ ಜನಸಾಮಾನ್ಯರು ನಿತ್ಯ ಗೋಳಾಡುವಂತಾಗಿದೆ.| ಜಿ.ಆರ್. ಕೊಪ್ಪದ ಎಪಿಎಂಸಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net