ಕಾನೂನು-ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಹಕರಿಸಿ: ಪೊಲೀಸ್ ಕಮಿಷನರ್

Commissioner
Published on

ಬೆಂಗಳೂರು: ಸಾರ್ವಜನಿಕರು ನಮ್ಮೊಂದಿಗೆ ಸಹಕರಿಸಿದರೆ ಅಪರಾಧ ನಿಯಂತ್ರಿಸಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬಹುದು ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿದ್ದಾರೆ. ಪುಲಿಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಸಂಪರ್ಕ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘

ಪೊಲೀಸರು 24 ಗಂಟೆಯೂ ಶ್ರಮಿಸಬೇಕು. ಈಗ ತಂತ್ರಜ್ಞಾನ ಅಳವಡಿಸಿಕೊಂಡಿದ್ದೇವೆ. ನಮಗೆ ಸಾರ್ವಜನಿಕರ ಪ್ರತಿ ಸಮಸ್ಯೆ ಬಗೆಹರಿಸುವುದು ಮುಖ್ಯ. ಮನೆ ಮುಂದೆ ಪಾರ್ಕಿಂಗ್, ಮತ್ತೊಂದೆಡೆ ತಡರಾತ್ರಿಯವರೆಗೂ ಬಾರ್ ತೆರೆದಿರುವುದು, ಟ್ರಾಫಿಕ್ ಸಮಸ್ಯೆ ಹೀಗೆ ಒಬ್ಬೊಬ್ಬರದು ಒಂದೊಂದು ಸಮಸ್ಯೆ ಇರುತ್ತದೆ. ಎಲ್ಲರ ಸಮಸ್ಯೆಯೂ ಮುಖ್ಯ. ಹಾಗಾಗಿ ಸ್ಥಳೀಯವಾಗಿ ಸಭೆ ನಡೆಸುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುತ್ತೇವೆ. ನಿಮ್ಮ ಸಲಹೆ, ಸೂಚನೆಗಳನ್ನು ಪಡೆದುಕೊಂಡು ಬಗೆಹರಿಸುವುದಾಗಿ ತಿಳಿಸಿದರು.

ಕೆಲವರು ದೂರು ನೀಡಲು ಪೊಲೀಸ್ ಆಯುಕ್ತರ ಕಚೇರಿಗೆ ಬರುತ್ತಾರೆ. ಅಂತಹ ಸಂದರ್ಭದಲ್ಲಿ ಸ್ಥಳೀಯವಾಗಿ ಸಭೆ ನಡೆಸಿದರೆ ಸ್ಥಳೀಯ ಸಮಸ್ಯೆ, ಅನಿಸಿಕೆ ತಿಳಿದುಕೊಂಡು ಅಲ್ಲೇ ಅವರ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ನಾವು ಸಹ ಇನ್ನಷ್ಟು ಸಮರ್ಪಕವಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಪೊಲೀಸ್ ಇಲಾಖೆಯ ಮೂಲ ಉದ್ದೇಶ ಸಾರ್ವಜನಿಕರ ಒಟ್ಟಿಗೆ ಉತ್ತಮ ಬಾಂಧವ್ಯ ಸಾಧಿಸುವುದಾಗಿದೆ. ಒಬ್ಬೊಬ್ಬರು ಒಂದೊಂದು ರೀತಿ ಇರುತ್ತಾರೆ. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಬಹಳಷ್ಟು ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದಾರೆ ಎಂಬುವುದನ್ನು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದರು.

ಪುಡಿರೌಡಿಗಳ ಮಟ್ಟ ಹಾಕಿ: ಗಾಂಜಾ ವ್ಯಸನಿಗಳು ಹೆಚ್ಚಾಗುತ್ತಿದ್ದಾರೆ. ಕೆಲವು ಪುಡಿ ರೌಡಿಗಳು ರಾತ್ರಿ ಸಮಯದಲ್ಲಿ ಸಾರ್ವಜನಿಕರನ್ನು ಅಡ್ಡಗಟ್ಟಿ ಚಾಕು ತೋರಿಸಿ ಹಣ ದೋಚುತ್ತಿದ್ದಾರೆ. ಹಾಗಾಗಿ ಒಂಟಿಯಾಗಿ ಓಡಾಡುವುದು ಕಷ್ಟವಾಗುತ್ತಿದೆ. ಸಿವಿಲ್ ಡ್ರೆಸ್‌ನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರೆ ಪುಡಿ ರೌಡಿಗಳನ್ನು ಮಟ್ಟ ಹಾಕುವುದರ ಜತೆಗೆ ಸಾರ್ವಜನಿಕರಿಗಾಗುವ ತೊಂದರೆಗಳನ್ನು ದೂರ ಮಾಡಬಹುದೆಂಬ ಮನವಿ ಸೇರಿ ವಿವಿಧ ಸಮಸ್ಯೆಗಳ ಬಗ್ಗೆ ಸ್ಥಳೀಯರು ಆಯುಕ್ತರ ಗಮನ ಸೆಳೆದರು. ಜನಸಂಪರ್ಕ ಸಭೆಯಲ್ಲಿ ಪೂರ್ವ ವಿಭಾಗದ ಡಿಸಿಪಿ ಡಾ. ಭೀಮಾಶಂಕರ ಗುಳೇದ್, ಎಸಿಪಿ ವೆಂಕಟೇಶ್ ಪ್ರಸನ್ನ ಮತ್ತಿತರ ಇದ್ದರು.

ಪಶ್ಚಿಮ ವಿಭಾಗದಲ್ಲೂ ಸಭೆ: ಪಶ್ಚಿಮ ವಿಭಾಗದ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಾಸಿಕ ಜನಸಂಪರ್ಕ ದಿವಸ ಕಾರ್ಯಕ್ರಮದಲ್ಲಿ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಭಾಗವಹಿಸಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಯಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಈ ವೇಳೆ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಸೇರಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net