

ಗೋಕಾಕ: ನಗರದಲ್ಲಿ 2006ರಲ್ಲಿ ಪ್ರಾರಂಭಗೊಂಡ ಕೆಎಲ್‌ಇ ಆಸ್ಪತ್ರೆ ಹಣಕ್ಕಿಂತ ಜನರ ಸೇವೆಗೆ ಹೆಚ್ಚಿನ ಮಹತ್ವ ನೀಡಿ 14 ವರ್ಷಗಳಲ್ಲಿ 40 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದೆ ಎಂದು ಕೆಎಲ್‌ಇ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು.
ನಗರದ ಕೆಎಲ್‌ಇ ಆಸ್ಪತ್ರೆಯಲ್ಲಿ ಶನಿವಾರ 7 ತಿಂಗಳಲ್ಲಿ ಜನಿಸಿದ 750 ಗ್ರಾಂ. ತೂಕವುಳ್ಳ ಎರಡು ನವಜಾತ ಶಿಶುಗಳಿಗೆ ಉಚಿತ ಚಿಕಿತ್ಸೆ ನೀಡಿ ಅವುಗಳನ್ನು ಬದುಕಿಸಿ ಅವರ ತಾಯಿಂದಿರಿಗೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರ ಮಾರ್ಗದರ್ಶನದಲ್ಲಿ ಬೆಳಗಾವಿ ಆಸ್ಪತ್ರೆಯಲ್ಲಿ ಸಿಗುವ ಎಲ್ಲ ಸೌಲಭ್ಯಗಳು ಗೋಕಾಕ ಕೆಎಲ್‌ಇ ಆಸ್ಪತ್ರೆಯಲ್ಲಿ ಲಭ್ಯವಿದ್ದು, ನುರಿತ ವೈದ್ಯರು 24 ಗಂಟೆ ಚಿಕಿತ್ಸೆ ನೀಡುತ್ತಿದ್ದಾರೆ. 7 ತಿಂಗಳಲ್ಲಿ ಜನಿಸಿದ ಶಿಶುಗಳು ಬದುಕುವ ಸಂಭವ ತೀರಾ ಕಡಿಮೆ.
ಈ ಶಿಶುಗಳಿಗೆ ಆಯುಷ್ಮಾನ್ ಭಾರತ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಿ ಬದುಕಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಈ ಯೋಜನೆಯಡಿ 4 ತಿಂಗಳಿನಿಂದ ನೂರು ನವಜಾತ ಶಿಶುಗಳಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ. ಆಯುಷ್ಮಾನ್ ಭಾರತ ಯೋಜನೆಯಡಿ ಎಲ್ಲ ರೀತಿಯ ರೋಗಿಗಳಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ಜನತೆ ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಕೆಎಲ್‌ಇ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಡಿ.ಜಿ. ಚೌಗಲಾ, ಚಿಕ್ಕಮಕ್ಕಳ ತಜ್ಞ ಡಾ. ಅರುಣ ವಣ್ಣೂರ, ರೂಪಾ ಮುನವಳ್ಳಿ ಇದ್ದರು.