ಸಾರ್ವಜನಿಕರ ಸೇವೆ ಭಗವಂತನ ಕಾರ್ಯ

swamiji
Published on

ಭಟ್ಕಳ: ಜನ ಪ್ರತಿನಿಧಿಯಾದವರು ಪ್ರಜೆಗಳ ಸೇವೆ ಮಾಡಬೇಕು. ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿಟ್ಟು ಜನಸೇವೆಯೇ ಧ್ಯೇಯವಾಗಿಸಿಕೊಳ್ಳಬೇಕು. ಜನಸೇವೆಯೂ ಒಂದು ದೇವರ ಕಾರ್ಯ ಎಂದು ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.

ಒಂದು ಕೋಟಿ ರೂ. ವೆಚ್ಚದ ನೂತನ ರಸ್ತೆಯನ್ನು ಲೋಕಾರ್ಪಣೆಗೊಳಿಸಿ, ಸಭಾ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ‘ದಿನೇಶ ಪೈ ದಂಪತಿ ಷಷ್ಠ್ಯಬ್ದ ಪೂರ್ತಿ ಉಗ್ರರಥ ಶಾಂತಿ ನಡೆಸಿ ದೇವತಾ ಕಾರ್ಯ ನಡೆಸಿದರೆ, ಸಚಿವ ಮಂಕಾಳ ವೈದ್ಯ ಆ ರಸ್ತೆಯಲ್ಲಿ ತೆರಳುವ ಭಕ್ತರಿಗೆ ತೊಂದರೆಯಾಗಬಾರದು ಎಂದು ರಸ್ತೆ ನಿರ್ಮಿಸಿ ಇನ್ನೊಂದು ಬಗೆಯಲ್ಲಿ ದೇವರ ಸೇವೆ ಮಾಡಿದ್ದಾರೆ. ಗುರುಗಳ ಮಾರ್ಗದರ್ಶನ ಬೇಡುವ ಅವರು, ಗುರುಗಳು ತೆರಳುವ ಕ್ಷೇತ್ರದಲ್ಲಿ ನೂತನ ರಸ್ತೆ ನಿರ್ಮಿಸಿ ನೂತನ ಮಾರ್ಗದಲ್ಲೇ ತೆರಳುವಂತೆ ಮಾಡುತ್ತಿದ್ದಾರೆ. ಜನಪರ ಕಾರ್ಯಗಳು ಮುಂದುವರಿದು ಜನರ ಪ್ರೀತಿಗೆ ಪಾತ್ರರಾಗಲಿ’ ಎಂದು ಹರಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಮಂಕಾಳ ವೈದ್ಯ ‘ಯಾರು ಗುರುಗಳಿಗೆ ತಲೆಬಾಗುತ್ತಾರೋ ಅವರು ಜಗತ್ತಿನಲ್ಲಿ ತಲೆ ಎತ್ತಿ ನಿಲ್ಲುತ್ತಾರೆ. ಗುರುಗಳ ಪಾದ ಸ್ಪರ್ಶ ಎಲ್ಲಿ ಆಗುತ್ತೊ ಅಲ್ಲಿ ಎಲ್ಲವೂ ಸಾಧ್ಯ. ಮಠ ಮಂದಿರಗಳಿಗೆ ಎಂದೂ ಕೊರತೆ ಆಗಬಾರದು ಎನ್ನುವುದು ನಮ್ಮ ಬಯಕೆಯಾಗಿದೆ. ಗುರು ಪರಂಪರೆಯೊಂದಿಗೆ ನಾವು, ನಮ್ಮ ಸರ್ಕಾರ ಸದಾ ಇದ್ದೇವೆ’ ಎಂದು ಹೇಳಿದರು.

ಹಾಂಗ್ಯೋ ಐಸ್ ಕ್ರೀಂ ಎಂಡಿ ಪ್ರದೀಪ ಪೈ ಮಾತನಾಡಿ, ಸಚಿವ ವೈದ್ಯರು ತಮ್ಮ ಮಾತಿಗೆ ಬದ್ಧರಾಗಿದ್ದಾರೆ. ಅಧಿಕಾರ ಇಲ್ಲದಾಗಲೂ ಅವರು ಹೇಳಿದ ಕಾರ್ಯವನ್ನು ಮಾಡಿಕೊಟ್ಟಿದ್ದಾರೆ. ಕೋಟಿ ರೂ ವೆಚ್ಚದಲ್ಲಿರಸ್ತೆ ನಿರ್ಮಿಸಿ ಕೊಟ್ಟಿರುವುದಕ್ಕೆ ಜಿಎಸ್‌ಬಿ ಸಮಾಜ ಹಾಗೂ ಸಾರ್ವಜನಿಕರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ರಸ್ತೆ ನಿರ್ಮಾಣ ಕಾರ್ಯಕ್ಕೆ ಸಹಕರಿಸಿದ ಹೆಸ್ಕಾಂ, ಪುರಸಭೆ, ಕೆಇಬಿ ಗುತ್ತಿಗೆದಾರರು ಮೊದಲಾದವರಿಗೆ ಶ್ರೀಗಳು ಮಂತ್ರಾಕ್ಷತೆ ನೀಡಿ ಗೌರವಿಸಿದರು. ಜಿಎಸ್‌ಬಿ ಸಮಾಜದ ಗೌರವಾಧ್ಯಕ್ಷ ಸುರೇಂದ್ರ ಶ್ಯಾನಭಾಗ, ಹಾಂಗ್ಯೋ ಐಸ್‌ಕ್ರೀಂನ ದಿನೇಶ ಪೈ, ಸಮಾಜದ ಮುಖಂಡ, ಉದ್ಯಮಿ ರಾಜೇಶ ನಾಯಕ, ಜಿಎಸ್‌ಬಿ ಸಮಾಜದ ಅಧ್ಯಕ್ಷ ನಾಗೇಶ ಕಾಮತ, ಕಾಮಾಕ್ಷೀ ದೇವಸ್ಥಾನದ ಅಧ್ಯಕ್ಷ ಹರೀಶ ಕಾಮತ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net