ಬಾನಂಗಳದಲ್ಲಿ ನೆರಳು ಬೆಳಕಿನಾಟ ; ವಿಸ್ಮಯ ಕಣ್ತುಂಬಿಕೊಂಡ ಆಸಕ್ತರು

TMK eclips
Published on

ತುಮಕೂರು: ಚಲಿಸುವ ಮೋಡದ ಮಧ್ಯದಲ್ಲಿ ವರ್ಷದ ಮೊದಲ ಸೂರ್ಯಗ್ರಹಣವನ್ನು ನಗರದ ಖಗೋಳಾಸಕ್ತರು, ಸಾರ್ವಜನಿಕರು ಭಾನುವಾರ ಕಣ್ತುಂಬಿಕೊಂಡರು.

ನಗರದ ವಿಜ್ಞಾನ ಕೇಂದ್ರದ ಆವರಣದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಹಯೋಗದಲ್ಲಿ ಪಾರ್ಶ್ವ ಸೂರ್ಯಗ್ರಹಣ ಸುರಕ್ಷಿತ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 10.15ಕ್ಕೆ ಆರಂಭವಾದ ಖಗೋಳ ವಿಸ್ಮಯ ಮಧ್ಯಾಹ್ನ 1.15ರವರೆಗೆ ಬಾನಂಗಳದಲ್ಲಿ ಕುತೂಹಲ ಮೂಡಿಸಿತ್ತು. ಸೂಜಿರಂಧ್ರ ಬಿಂಬಗ್ರಾಹಿ ಹಾಗೂ ಸೋಲಾರ್ ಕನ್ನಡಕಗಳ ಮೂಲಕ ಕರೊನಾ ಮಾರ್ಗಸೂಚಿಗಳನ್ನು ಅನುಸರಿಸಿ ಪರಸ್ಪರ ಅಂತರ ಕಾಪಾಡಿಕೊಂಡು ಸೂರ್ಯಗ್ರಹಣ ವೀಕ್ಷಿಸಿದರು.

ಆರಂಭದಲ್ಲಿ ಮುಂಗಾರು ಮೋಡಗಳು ಗ್ರಹಣ ವೀಕ್ಷಣೆಗೆ ಅಡ್ಡಿಯಾದರೂ ಖಗೋಳಾಸಕ್ತರಿಗೆ ನಿರಾಸೆಯಾಗದಂತೆ ಹತ್ತು ನಿಮಿಷಕ್ಕೊಮ್ಮೆ ಮೋಡಗಳು ಸರಿದು ಸೂರ್ಯ, ಚಂದ್ರರ ನೆರಳು ಬೆಳಕಿನ ಆಟ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿತು. ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ನೆರಳು, ಬೆಳಕಿನಾಟಕ್ಕೆ ಸಾಕ್ಷಿಯಾದರು.

ಸ್ಥಳೀಯ ಪಾಲಿಕೆ ಸದಸ್ಯೆ ದೀಪಶ್ರೀ, ಅವರ ಪತಿ ಮಹೇಶ್, ವಿಜ್ಞಾನ ಕೇಂದ್ರ ಅಧ್ಯಕ್ಷ ಬಿ.ಮರುಳಯ್ಯ , ಉಪಾಧ್ಯಕ್ಷರಾದ ಸಿ.ಯತಿರಾಜು, ಎಂ.ಹನುಮದಾಸ್, ಎನ್.ಅಕ್ಕಮ್ಮ, ಖಜಾಂಚಿ ಟಿ.ಜಿ.ಶಿವಲಿಂಗಯ್ಯ, ಕಾರ್ಯದರ್ಶಿ ಎಸ್.ರವಿಶಂಕರ್, ಸಹಕಾರ್ಯದರ್ಶಿಗಳಾದ ಪಂಡಿತ್ ಜವಹರ್, ಪಿ.ಪ್ರಸಾದ್, ಟಿ.ಎಸ್.ನಿತ್ಯಾನಂದ, ಕಾರ್ಯಕಾರಿ ಸದಸ್ಯರಾದ ಕೆ.ನಾಗರಾಜ್ ರಾವ್, ಕೆ.ಎನ್.ಮಧುಸೂದನ್ ರಾವ್ ಹಾಗೂ ಕಾರ್ಯಕರ್ತರಾದ ಫರೀದ್, ಕೆಂಕೆರೆ ಮಲ್ಲಿಕಾರ್ಜುನ್, ಪಿ.ಎಸ್.ಪವನ್, ಆರ್.ಜಗದೀಶ್ ಷಣ್ಮುಖಪ್ಪ ಇದ್ದರು.

ಸೂರ್ಯ ಬಿಂಬ ಮರೆಮಾಚುವುದೇ ಗ್ರಹಣ: ಸೌರಮಂಡಲದಲ್ಲಿ ಸೂರ್ಯನ ವಿವಿಧ ಕಕ್ಷೆಗಳಲ್ಲಿ ಗ್ರಹಗಳು ಮತ್ತು ಉಪಗ್ರಹಗಳು ಪ್ರದಕ್ಷಿಣೆ ಮಾಡುತ್ತಿವೆ. ಅಪರೂಪಕ್ಕೊಮ್ಮೆ ಸೂರ್ಯ ಮತ್ತು ಭೂಮಿಯ ಮಧ್ಯೆ ಚಂದ್ರ ಸರಳ ರೇಖೆಯಲ್ಲಿ ಹಾದುಹೋಗುವಾಗ ಸೂರ್ಯನ ಬಿಂಬ ಮರೆಮಾಚುವ ಖಗೋಳ ಘಟನೆಯೇ ಸೂರ್ಯಗ್ರಹಣ ಎಂದು ವಿಜ್ಞಾನ ಬಿಂದು ಸಂಸ್ಥೆಯ ಕಾರ್ಯದರ್ಶಿ ಎಸ್.ರವಿಶಂಕರ್ ಹೇಳಿದರು. ನಗರದ ಉಪ್ಪಾರಹಳ್ಳಿಯ ವಿಜ್ಞಾನ ಬಿಂದು ಕಚೇರಿ ಆವರಣದಲ್ಲಿ ಭಾನುವಾರ ವಿಜ್ಞಾನ ಬಿಂದು ಚಿಲ್ಡ್ರನ್ ಕ್ಲಬ್ ಹಾಗೂ ರಾಜ್ಯ ವಿಜ್ಞಾನ ಪರಿಷತ್ತು ಘಟಕಗಳ ಸಹಯೋಗದಲ್ಲಿ ಸುರಕ್ಷಿತ ಸೂರ್ಯಗ್ರಹಣ ವೀಕ್ಷಣೆಯಲ್ಲಿ ಭಾಗವಹಿಸಿದ್ದ ವಿಜ್ಞಾನಾಸಕ್ತರಿಗೆ ಗ್ರಹಣದ ಕೌತಕ ವಿವರಿಸಿದರು.

ಕಡ್ಲೆಪುರಿ ತಿಂದರು ! : ಸೂರ್ಯಗ್ರಹಣದಲ್ಲಿ ಮನೆಬಿಟ್ಟು ಹೊರಬರದೆ, ಏನನ್ನೂ ತಿನ್ನದೆ ಮೌಢ್ಯಗಳನ್ನು ಆಚರಿಸುವವರಲ್ಲಿ ಅರಿವು ಮೂಡಿಸಲು ವಿಜ್ಞಾನ ಕೇಂದ್ರದ ವತಿಯಿಂದ ಲಘು ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಖಗೋಳ ವಿಸ್ಮಯ ವೀಕ್ಷಿಸಿದ ನೂರಾರು ಖಗೋಳಾಸಕ್ತರು ಕಡ್ಲೆಪುರಿ, ಹಲಸಿನ ಹಣ್ಣು ಹಾಗೂ ಬಾಳೆಹಣ್ಣು ತಿಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net