ಅಧಿಕಾರಿಗಳು ಗೈರಾಗಿದ್ದಕ್ಕೆ ಜನಸಂಪರ್ಕ ಸಭೆ ಬಹಿಷ್ಕಾರ

bhr mescom
ಬಾಳೆಹೊನ್ನೂರಿನಲ್ಲಿ ಆಯೋಜಿಸಿದ್ದ ಮೆಸ್ಕಾಂ ಗ್ರಾಹಕರ ಸಭೆಯಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರು.
Published on

ಬಾಳೆಹೊನ್ನೂರು: ಮೆಸ್ಕಾಂ ಉಪವಿಭಾಗ ವ್ಯಾಪ್ತಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮೆಸ್ಕಾಂ ಗ್ರಾಹಕರ ಜನಸಂಪರ್ಕ ಸಭೆಗೆ ಹಿರಿಯ ಅಧಿಕಾರಿಗಳು ಹಾಜರಾಗದಿದ್ದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಸಭೆ ಬಹಿಷ್ಕರಿಸಿದರು.

ಮೆಸ್ಕಾಂ ಕಚೇರಿಯಲ್ಲಿ ಗುರುವಾರ ಕರೆದಿದ್ದ ಜನಸಂಪರ್ಕ ಸಭೆಗೆ ಮೆಸ್ಕಾಂ ಸೂಪರಿಟೆಂಡೆಂಟ್ ಇಂಜಿನಿಯರ್ (ಎಸ್‌ಇ) ಹಾಗೂ ಎಕ್ಸಿಕ್ಯೂಟಿವ್ ಇಂಜಿನಿಯರ್ (ಇಇ) ಪಾಲ್ಗೊಂಡು ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸಬೇಕಿತ್ತು. ಆದರೆ ಸಭೆ ಆರಂಭಗೊಂಡು ಹಲವು ಸಮಸ್ಯೆಗಳನ್ನು ಹೇಳಿಕೊಳ್ಳುವ ಸಮಯದಲ್ಲಿ ಮೆಸ್ಕಾಂ ಎಇಇ, ಜೆಇ, ಸಹಾಯಕ ಲೆಕ್ಕಾಧಿಕಾರಿ ಮಾತ್ರ ಇದ್ದರು. ಇದರಿಂದ ಆಕ್ರೋಶಗೊಂಡ ಗ್ರಾಹಕರು ಸ್ಥಳಕ್ಕೆ ಮೆಸ್ಕಾಂ ಎಸ್‌ಇ, ಇಇ ಬಂದು ಸಭೆ ನಡೆಸಬೇಕು. ನಮ್ಮ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅವರು ಸ್ಥಳಕ್ಕೆ ಬರದಿದ್ದಲ್ಲಿ ಸಭೆ ಮುಂದುವರಿಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಮೆಸ್ಕಾಂ ಎಇಇ ಎಚ್.ಪಿ.ಗೌತಮ್ ಸಭೆಯನ್ನು ಸೆ.19ರಂದು ಪಟ್ಟಣದ ಲಯನ್ಸ್ ಕ್ಲಬ್‌ನ ಸಭಾ ಭವನದಲ್ಲಿ ನಡೆಸಲಾಗುವುದು ಎಂದು ಪ್ರಕಟಿಸಿದರು.
ಸಭೆ ಆರಂಭದಲ್ಲಿ ಬಿ.ಕಣಬೂರು ಗ್ರಾಪಂ ಸದಸ್ಯ ಬಿ.ಸಿ.ಸಂತೋಷ್‌ಕುಮಾರ್ ಮಾತನಾಡಿ, ಬಾಳೆಹೊನ್ನೂರು ಮೆಸ್ಕಾಂ ಜೆಇ ವಿರುದ್ಧ ಹಲವು ದೂರುಗಳಿದ್ದು, ಗ್ರಾಹಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ದೂರವಾಣಿ ಕರೆ ಮಾಡಿದರೆ ಉಡಾೆಯಾಗಿ ಮಾತನಾಡುತ್ತಾರೆ. ಅಕ್ಷರ ನಗರದಲ್ಲಿ ಸೆ.5ರಂದು ಟಿಸಿ ಹಾಳಾಗಿದ್ದು, ಒಂದು ವಾರ ಕಳೆದರೂ ಹೊಸ ಟಿಸಿ ಅಳವಡಿಸಿಲ್ಲ. ಕುಡಿಯುವ ನೀರಿಗೆ 24 ಗಂಟೆಯೊಳಗೆ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು ಎಂಬ ನಿಯಮವಿದ್ದರೂ ಅದನ್ನು ಪಾಲಿಸಿಲ್ಲ. ಮೆಸ್ಕಾಂನವರು ಟಿಸಿ ಅಳವಡಿಸದ ಹಿನ್ನೆಲೆಯಲ್ಲಿ ನಾನೇ ಸ್ವಂತ ಖರ್ಚಿನಿಂದ ಕೊಪ್ಪದಿಂದ ಟಿಸಿ ತರಲು ವಾಹನ ಕಳುಹಿಸಿದ್ದೆ. ಆದರೆ ಅಲ್ಲಿಂದ ತಂದ ಟಿಸಿಯನ್ನು ಅಳವಡಿಸಲು ಸಹ ಜೆಇ ವಿಳಂಬ ಮಾಡಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಹೀಗಾದರೆ ಜನಪ್ರತಿನಿಧಿಗಳು ಗ್ರಾಮಸ್ಥರಿಗೆ ಹೇಗೆ ಉತ್ತರಿಸುವುದು? ಜನರ ಕಷ್ಟಕ್ಕೆ ಸ್ಪಂದಿಸದ ಜೆಇ ಅವಶ್ಯಕತೆ ನಮಗಿಲ್ಲ. ಅವರು ವಾಪಸ್ ಹೋಗಲಿ ಎಂದು ಹೇಳಿದರು. ಜನಸಂಪರ್ಕ ಸಭೆ ಆಯೋಜಿಸಿರುವುದಾಗಿ 2 ದಿನ ಮುನ್ನ ಪ್ರಕಟಿಸಿದ್ದಾರೆ. ಹೀಗಾದರೆ ಸಾರ್ವಜನಿಕರಿಗೆ ಮಾಹಿತಿ ದೊರೆಯಲಿದೆಯೇ? ಮೆಸ್ಕಾಂ ಕಚೇರಿಯಲ್ಲಿ ಸಭೆ ನಡೆಯಲಿದೆ ಎಂದು ಪ್ರಕಟಿಸಿದ್ದರೂ ಯಾರಿಗೂ ತಿಳಿಸದೆ ದಿಢೀಡ್ ಸಭೆಯನ್ನು ಲಯನ್ಸ್ ಭವನಕ್ಕೆ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ಯಾರಿಗೂ ಮಾಹಿತಿ ನೀಡಿಲ್ಲ. ಗ್ರಾಹಕರು ಸಭೆಗೆ ಬರಬಾರದು ಎಂಬುದೇ ಇದರ ಉದ್ದೇಶವೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಲವು ಗಂಭೀರ ಸಮಸ್ಯೆಗಳು ಮೆಸ್ಕಾಂ ವ್ಯಾಪ್ತಿಯಲ್ಲಿ ಇದ್ದು, ಇದಕ್ಕೆ ಉತ್ತರಿಸಬೇಕಾದ ಹಿರಿಯ ಅಧಿಕಾರಿಗಳು ಸಭೆಗೆ ಬಾರದೆ ಬೇಜವಾಬ್ದಾರಿ ತೋರಿದ್ದಾರೆ. ಆದ್ದರಿಂದ ಸಭೆ ಮುಂದುವರಿಸಲು ಬಿಡುವುದಿಲ್ಲ. ಮತ್ತೊಮ್ಮೆ ಸಭೆ ಕರೆಯಬೇಕು. ಸ್ಥಳೀಯ ಗ್ರಾಪಂಗಳಿಗೆ ತಿಳಿಸಿ ಆಟೋ ಮೂಲಕ ಪ್ರಚಾರ ಮಾಡಬೇಕು ಎಂದು ಹೇಳಿದರು.
ಮೂರು ತಿಂಗಳ ಹಿಂದೆ ಕರ್ತವ್ಯಕ್ಕೆ ಸೇರಿರುವ ಮೆಸ್ಕಾಂ ಜೆಇ ವಿರುದ್ಧ ಹಲವು ದೂರುಗಳಿವೆ. ಅಧಿಕಾರದ ದರ್ಪ ತೋರಿಸುವುದು ಸರಿಯಲ್ಲ. ಸಭೆಗೆ ಗುರುತಿನ ಚೀಟಿಯನ್ನೂ ಹಾಕಿಕೊಂಡು ಬಂದಿಲ್ಲ. ನಿಮ್ಮನ್ನು ಅಧಿಕಾರಿ ಎಂದು ಹೇಗೆ ಗುರುತು ಹಿಡಿಯುವುದು. ಜನರ ಕೆಲಸ ಮಾಡಲು ಆಗದಿದ್ದರೆ ಸೇವೆಗೆ ಏಕೆ ಸೇರಿದ್ದೀರಿ? ಬೇರೆ ಕೆಲಸ ಹುಡುಕಿಕೊಳ್ಳಿ ಎಂದು ಅಧಿಕಾರಿಗಳ ವಿರುದ್ದ ಎನ್.ಆರ್.ಪುರದ ವಿದ್ಯುತ್ ಬಳಕೆದಾರರ ಸಂಘದ ಕಾರ್ಯದರ್ಶಿ ಪಿ.ಕೆ.ಬಸವರಾಜ್ ಹರಿಹಾಯ್ದರು. ಮಾಗುಂಡಿ ಭಾಗದಲ್ಲಿ ಇತ್ತೀಚೆಗೆ 13 ದಿನ ವಿದ್ಯುತ್ ಇರಲಿಲ್ಲ ಎಂಬ ದೂರು ಬಂದಿದೆ. ಇದರಿಂದ ಆ ಭಾಗದ ಜನರಿಗೆ, ವಿದ್ಯಾರ್ಥಿಗಳಿಗೆ ಆದ ನಷ್ಟವನ್ನು ತುಂಬಿಕೊಡುವುದು ಯಾರು ಎಂದು ಪ್ರಶ್ನಿಸಿದರು.
ಮೆಸ್ಕಾಂ ಎಇಇ ಗೌತಮ್, ಸಹಾಯಕ ಲೆಕ್ಕಾಧಿಕಾರಿ ಸತೀಶ್, ಜೆಇ ಗಣೇಶ್, ಗುತ್ತಿಗೆದಾರರಾದ ಮಂಜುನಾಥ್ ತುಪ್ಪೂರು, ನಿಖಿಲೇಶ್, ನಿರಂಜನ್, ದೊರೈ, ಸಂತೋಷ್ ಕ್ರಾಸ್ತಾ, ವಿದ್ಯಾಗಣಪತಿ ಸಮಿತಿ ಅಧ್ಯಕ್ಷ ಧರ್ಮಪ್ಪಗೌಡ, ಬಳಕೆದಾರರ ವೇದಿಕೆ ಸಂಚಾಲಕ ಹಿರಿಯಣ್ಣ, ಮೆಸ್ಕಾಂ ಗ್ರಾಹಕರಾದ ಸೈಯ್ಯದ್ ಅಲವಿ, ಎನ್.ಪಿ.ಮುಸ್ತ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net